Advertisement

ಸಮರ್ಪಕ ಮರಳು ದೊರಕಲು ಹೆಜ್ಜೆ

09:59 AM Dec 12, 2017 | Team Udayavani |

ಕಲಬುರಗಿ: ಜನಸಾಮಾನ್ಯರು ಸಹ ಸರಳವಾಗಿ ಮನೆ ಕಟ್ಟಿಕೊಳ್ಳಲು ಎದುರಾಗಿರುವ ಮರಳಿನ ಸಮಸ್ಯೆ ನೀಗಿಸಲು ಹಾಗೂ ಅಕ್ರಮ ಮರಳುಗಾರಿಕೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಈಗ ಮಲೇಷ್ಯಾದಿಂದ ಮರಳು ತರುವ ಮೂಲಕ ಭ್ರಷ್ಟಾಚಾರ ಎಸಗಲು ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಆರೋಪಿಸಿದರು.

Advertisement

ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಮರಳು ಲೂಟಿಗೈದು ಅರಣ್ಯ ಸಂಪತ್ತು ಹಾಳು ಮಾಡಿದ್ದಲ್ಲದೇ ಈಗ ವಿದೇಶದಿಂದ ಮರಳು ತರಲು ಮುಂದಾಗಿದೆ. ಆದರೆ ಜನರು ಆಶೀರ್ವಾದ ಮಾಡಿ ಬಿಜೆಪಿ ಸರ್ಕಾರ ಬಂದಲ್ಲಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗುವುದು. ಅಲ್ಲದೇ ಜನರಿಗೆ ಸಮರ್ಪಕವಾಗಿ ಮರಳು ದೊರಕಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು. 

ಮರಳಿನ ದಂಧೆಯಲ್ಲಿ ಸಚಿವರ ಸಂಬಂಧಿಕರೇ ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಮರಳು ಜನಸಾಮಾನ್ಯರಿಗೆ ಸಿಗದಂತಾಗಿದೆ. ಇದಲ್ಲದೇ ಸಿದ್ಧರಾಮಯ್ಯ ಹೈ.ಕ ಭಾಗದ ಅಭಿವೃದ್ಧಿಗೆ ಕಾಳಜಿಯೇ ಹೊಂದಿಲ್ಲ. ಬಿಜೆಪಿ ಸರ್ಕಾರವಿದ್ದಾಗ ನಾಲ್ಕು ಸಲ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಅಲ್ಲದೇ ಸಾವಿರಾರು ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ ಸಿದ್ಧರಾಮಯ್ಯ ನಾಲ್ಕೂವರೆ ವರ್ಷಗಳ ಕಾಲ ನಿದ್ದೆಯಲ್ಲೇ ಸಮಯ ಕಳೆದಿದ್ದಾರೆ. ಹೀಗಾಗಿ ಸಿದ್ಧರಾಮಯ್ಯ ಸರ್ಕಾರ ತೊಲಗಿದಲ್ಲಿ ಮಾತ್ರ ರಾಜ್ಯಕ್ಕೆ ಅಚ್ಚೇ ದಿನ ಬರಲಿವೆ ಎಂದು ಯಡಿಯೂರಪ್ಪ ಹೇಳಿದರು.

ಎಸ್‌ಟಿಗೆ ಸೇರಿಸಲು ಪ್ರಯತ್ನ: ಕೋಲಿ ಸಮಾಜ ಎಸ್‌ಟಿ ವರ್ಗಕ್ಕೆ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಘೋಷಿಸಿದ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯದಲ್ಲೂ ತಮ್ಮ ಸರ್ಕಾರ ಬಂದರೆ ಸ್ವತಃ ಮುತುವರ್ಜಿ ವಹಿಸಲಾಗುವುದು. ಜೇವರ್ಗಿಯಲ್ಲಿ ಫುಡ್‌ ಪಾರ್ಕ ಪ್ರಾರಂಭವಾಗಲು, ಸ್ವಾಮಿನಾಥನ್‌ ವರದಿ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಪ್ರಕಟಿಸಿದರು. 

ಜೇವರ್ಗಿ ಕ್ಷೇತ್ರವನ್ನು ಒಂದೇ ಕುಟುಂಬದವರೇಳುತ್ತಿದ್ದಾರೆ. ಅಭಿವೃದ್ಧಿ ಎಂಬುದನ್ನೇ ಶಾಸಕ ಡಾ| ಅಜಯಸಿಂಗ್‌ ಮರೆತ್ತಿದ್ದಾರೆ. ಅವರಿಗೆ ಕ್ಷೇತ್ರದ ಜನರು ದಿಕ್ಕಾರ ಹಾಕಬೇಕು. ಮೂರು ಗಂಟೆ ಕಾಲ ಕರೆಂಟ್‌ ಹಾಗೂ ಬೆಳೆವಿಮೆ ಸಿಗದವರಿಗೆ ವಿಮೆ ಕೊಡಿಸಲಿಕ್ಕಾಗುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್‌ವೈ ಗುಡುಗಿದರು. ಮಾಜಿ ಸಚಿವ ರಾಜುಗೌಡ ಮಾತನಾಡಿ, ನಿಜವಾಗಲು ಜೇವರ್ಗಿ ಮತಕ್ಷೇತ್ರ ಪರಿವರ್ತನೆಯಾಗಬೇಕಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಜೇವರ್ಗಿ ಅಭಿವೃದ್ಧಿಯಾಗಿದೆ. ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ 3705 ಕೋಟಿ ರೂ., ನಾರಾಯಣಪುರ ನಾಲೆ ಆಧುನೀಕರಣಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಜೇವರ್ಗಿ ತಾಲೂಕಿನಲ್ಲಿ ಮಾತ್ರ ಈ ಕಾರ್ಯವಾಗಿಲ್ಲ. ಏಕೆಂದರೆ ಕಾಂಗ್ರೆಸ್‌ನವರಿಗೆ ಹೊಲದಲ್ಲಿ ಬೆಳೆ ಬೆಳೆಯುವುದು ಬೇಕಾಗಿಲ್ಲ ಎಂದು ಟೀಕಿಸಿದರು.

Advertisement

ಕೇಂದ್ರದ ಮಾಜಿ ಸಚಿವ ಡಿ. ಪುರಂದೇಶ್ವರಿ ಮಾತನಾಡಿ, ಮಲ್ಲಾಬಾದ ಏತ ನೀರಾವರಿ ಯೋಜನೆಗೆ ಯಡಿಯೂರಪ್ಪ
ಅವರೇ ಆರಂಭದಲ್ಲಿ 5 ಕೋಟಿ ರೂ. ನೀಡಿ ಚಾಲನೆ ನೀಡಿದ್ದಾರೆ. ಆದರೆ ಕಳೆದ ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಮುಂದಿನ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಜೇವರ್ಗಿ ತಾಲೂಕು ಅಭಿವೃಧಿಯಲ್ಲಿ 174ನೇ ಸ್ಥಾನದಲ್ಲಿತ್ತು. ಆದರೆ ತಾವು ಶಾಸಕರಾಗಿದ್ದಾಗ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಂಡ ಪರಿಣಾಮ ಅಭಿವೃದ್ಧಿಯಲ್ಲಿ ಮೇಲೆ ಬರಲು ಸ್ವಲ್ಪ ಸಾಧ್ಯವಾಗಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ ಬದಲಾವಣೆಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ
ಮಾಡಿದರು.

ಸಂಸದ ಶ್ರೀರಾಮುಲು, ಮಾಜಿ ಸಚಿವ ರೇವು ನಾಯಕ ಬೆಳಮಗಿ ಸೇರಿದಂತೆ ಮುಂತಾದವರು ಮಾತನಾಡಿದರು. ಪಕ್ಷದ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ, ಮಾಜಿ ಸಚಿವರಾದ ಸುನೀಲ ವಲ್ಲಾಪುರೆ, ಬಾಬುರಾವ ಚವ್ಹಾಣ, ಶಾಸಕರಾದ ಕೆ.ಬಿ.ಶಾಣಪ್ಪ, ದತ್ತಾತ್ರೇಯ ಪಾಟೀಲ ರೇವೂರ, ರಘುನಾಥ ಮಲ್ಕಾಪುರೆ, ಬಿ.ಜಿ. ಪಾಟೀಲ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಶಶೀಲ ಜಿ. ನಮೋಶಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಈಶಾನ್ಯ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಕೆ.ಬಿ. ಶ್ರೀನಿವಾಸ, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಮುಖಂಡರಾದ ಮಲ್ಲಿನಾಥ ಪಾಟೀಲ ಯಲಗೋಡ, ಧರ್ಮಣ್ಣ ದೊಡ್ಡಮನಿ, ಜಿಪಂ ಸದಸ್ಯರಾದ ಶಿವರಾಜಗೌಡ ಅಪ್ಪಾಸಾಹೇಬ ಪಾಟೀಲ, ಬಸವರಾಜ ಪಾಟೀಲ ನರಿಬೋಳ ಇದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಮಾದಾರ ನಿರೂಪಿಸಿದರು. ರೇವಣಸಿದ್ದಪ್ಪ ಸಂಕಾಲಿ ವಂದಿಸಿದರು.

ಕಾಂಗ್ರೆಸ್‌ಗೆ ದಲಿತರ ಹೆಸರು ಹೇಳಲು ಯೋಗ್ಯತೆ ಇಲ್ಲ
ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ ಅವರನ್ನು ಸೋಲಿಸಿರುವ ಕಾಂಗ್ರೆಸ್‌ ಪಕ್ಷ ಅಂಬೇಡ್ಕರ ಅವರ ಶವ ಸಂಸ್ಕಾರ ನೆರವೇರಿಸಲು ನವದೆಹಲಿಯಲ್ಲಿ ಜಾಗ ಸಹ ನೀಡಲಿಲ್ಲ. ಅದಲ್ಲದೇ ಬಾಬು ಜಗಜೀವನರಾಂ ಪ್ರಧಾನಿಯಾಗಿಸಲು ಅಟಲ್‌ ಬಿಹಾರಿ ವಾಜಪೇಯಿ ಮುಂದಾದಾಗ ಇದೇ ಕಾಂಗ್ರೆಸ್‌ನವರು ಅಡ್ಡಿ ಹಾಕಿದರು. ಹೀಗಾಗಿ ಕಾಂಗ್ರೆಸ್‌ಗೆ ದಲಿತರ ಹೆಸರು ಹೇಳಲು ಯೋಗ್ಯವಿಲ್ಲ. 
ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ 

ಲಾರಿಗಟ್ಟಲೇ ಸುಳ್ಳು ಹೇಳುವ ಡಾ| ಅಜಯಸಿಂಗ್‌ 
ನಾರಾಯಣಪುರ ಕಾಲುವೆಯಿಂದ ಜೇವರ್ಗಿ ತಾಲೂಕಿನ ಶಾಖಾ ಕಾಲುವೆಗಳಿಗೆ ನೀರು ಹರಿದು ಬೆಳೆ ಬೆಳೆಯಬಾರದು. ಆದರೆ ಕಾಂಗ್ರೆಸ್‌ ಪಕ್ಷ ಕಾಲುವೆಗೆ ನೀರು ಹರಿಸಲು ಇಚ್ಚಾಶಕ್ತಿ ತೋರುತ್ತಿಲ್ಲ. ಹೊಲಕ್ಕೆ ಕಾಂಗ್ರೆಸ್‌ ಹುಲ್ಲು ಹೇಗೆ ಮಾರಕವೋ ದೇಶಕ್ಕೆ ಕಾಂಗ್ರೆಸ್‌ ಪಕ್ಷವೂ ಮಾರಕವಾಗಿದೆ. ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸುವ ಡಾ| ಅಜಯಸಿಂಗ್‌ ಮಹಾ ಸುಳ್ಳುಗಾರ. ಲಾರಿಗಟ್ಟಲೇ ಸುಳ್ಳು ಹೇಳ್ತಾರೆ. 
 ರಾಜುಗೌಡ, ಮಾಜಿ ಸಚಿವರು

ಅಭ್ಯರ್ಥಿ ಹೆಸರು ಘೋಷಣೆ ಮಾಡಲಿಲ್ಲ
ಕಲಬುರಗಿ ಜಿಲ್ಲೆಯಲ್ಲಿ ಆಳಂದ ಹಾಗೂ ಕಲಬುರಗಿ ದಕ್ಷಿಣದಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಜೇವರ್ಗಿ ಮತಕ್ಷೇತ್ರದಲ್ಲೂ ಅಭ್ಯರ್ಥಿ ಹೆಸರು ಪ್ರಕಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಒಬ್ಬರಿಗಿಂತ ಹೆಚ್ಚು ಸ್ಪರ್ಧಿಗಳು ಇರುವ ಕ್ಷೇತ್ರದಲ್ಲಿ ಸಮೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳುತ್ತಲೇ ಬಂದಿರುವ ಮಾಜಿ ಸಿಎಂ, ಜೇವರ್ಗಿ ಕ್ಷೇತ್ರದಲ್ಲೂ ಅಭ್ಯರ್ಥಿ ಹೆಸರು ಪ್ರಕಟಿಸದೇ ಇರುವುದು ನಿಗೂಢತೆಗೆ ದಾರಿ ಮಾಡಿ ಕೊಟ್ಟಂತಾಗಿದೆ. ಇಲ್ಲಿ ಹೆಚ್ಚಿನ ಸ್ಪರ್ಧಿಗಳದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಪ್ರಮುಖವಾಗಿ ಬಿಜೆಪಿ ಜಿಲ್ಲಾಧ್ಯಕ್ಷರು, ಕ್ಷೇತ್ರದ ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ಅವರ ಹೆಸರು ಮಾತ್ರ ಮುಂಚೂಣಿಯಲ್ಲಿದೆ. ತದನಂತರ ಶಿವರಾಜಗೌಡ ಪಾಟೀಲ, ಸಂಕಾಲಿ, ದೊಡ್ಡಮನಿ ಅವರ ಹೆಸರು ಹಾಗೆ ತೇಲಿ ಬರುತ್ತಿವೆ. ದೊಡ್ಡಪ್ಪಗೌಡ ಅವರ ಹೆಸರು ಪ್ರಕಟಿಸಬಹುದಿತ್ತು ಎಂದು ಕಾರ್ಯಕರ್ತರು ಮಾತನಾಡುತ್ತಿರುವುದು ಕೇಳಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next