Advertisement

ಪಕ್ಷ ಬಲಪಡಿಸುವತ್ತ ಹೆಜ್ಜೆ

01:51 AM Jun 03, 2019 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುವ ಕನಸು ಕಂಡು, ಮುಗ್ಗರಿಸಿದ ಎಸ್‌ಪಿ-ಬಿಎಸ್‌ಪಿ ಪಕ್ಷಗಳು ಈಗ ಪಕ್ಷದ ಸಂಘಟನಾತ್ಮಕ ಪುನಾರಚನೆಗೆ ಕೈಹಾಕಿವೆ. ಹೀನಾಯ ಸೋಲಿನ ಆಘಾತದ ಬಳಿಕ ತುಟಿಪಿಟಕ್ಕೆನ್ನದೆ ಕುಳಿತಿದ್ದ ಎರಡೂ ಪಕ್ಷಗಳು ಈಗ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದು, ಪಕ್ಷಗಳನ್ನು ಮತ್ತೆ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿವೆ.

Advertisement

ಅದರಂತೆ, ಬಹುಜನ ಸಮಾಜ ಪಕ್ಷದ ಅಧಿನಾಯಕಿ, ಮಾಜಿ ಸಿಎಂ ಮಾಯಾವತಿ ಅವರು ಭಾನುವಾರ 6 ರಾಜ್ಯಗಳಲ್ಲಿ ಬಿಎಸ್‌ಪಿ ಘಟಕಗಳ ಉಸ್ತುವಾರಿಗಳನ್ನು ತೆಗೆದುಹಾಕಿದ್ದಾರೆ. ಇನ್ನೊಂದು ಕಡೆ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರು ಮತ್ತೆ ಸಕ್ರಿಯರಾಗಿದ್ದು, ಶಿವಪಾಲ್ ಯಾದವ್‌ ಸೇರಿದಂತೆ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ.

ಉಸ್ತುವಾರಿಗಳು ಬದಲು: ಬಿಎಸ್‌ಪಿ ನಾಯಕಿ ಮಾಯಾವತಿ ಭಾನುವಾರ ಉತ್ತರಾಖಂಡ, ಬಿಹಾರ, ಜಾರ್ಖಂಡ್‌, ಒಡಿಶಾ, ಗುಜರಾತ್‌ ಮತ್ತು ರಾಜಸ್ಥಾನದ ರಾಜ್ಯ ಘಟಕದ ಉಸ್ತುವಾರಿಗಳು ಹಾಗೂ ದೆಹಲಿ ಮತ್ತು ಮಧ್ಯಪ್ರದೇಶದ ರಾಜ್ಯಾಧ್ಯಕ್ಷರನ್ನು ಬದಲಿಸಿದ್ದಾರೆ. ದೆಹಲಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ಸುರೇಂದ್ರ ಸಿಂಗ್‌ರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ಲಕ್ಷ್ಮಣ್‌ ಸಿಂಗ್‌ರನ್ನು ನೇಮಕ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ರಾಮಕಾಂತ್‌ ಪುತ್ತಲ್ರನ್ನು ಹಾಗೂ ಉತ್ತರಾಖಂಡದಲ್ಲಿ ಎಂ.ಎಲ್.ತೋಮರ್‌ರನ್ನು ಹೊಸ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇಂದು ಸಭೆ: ಫ‌ಲಿತಾಂಶದ ಬಳಿಕ ದೆಹಲಿಯಲ್ಲೇ ಮೊಕ್ಕಾಂ ಹೂಡಿರುವ ಮಾಯಾವತಿ ಅವರು ಜೂ.3ರಂದು ವಿವಿಧ ರಾಜ್ಯಗಳ ಅಧ್ಯಕ್ಷರು ಹಾಗೂ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ದುರ್ಬಲ ಸಾಧನೆಗೆ ಕಾರಣವೇನು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಗೆ ಉತ್ತರಪ್ರದೇಶದ 40 ಸಮನ್ವಯಕಾರರನ್ನೂ ಆಹ್ವಾನಿಸಲಾಗಿದೆ.

ಅಖಾಡಕ್ಕಿಳಿದ ಮುಲಾಯಂ: ಸುಮಾರು ಎರಡೂವರೆ ವರ್ಷಗಳಿಂದ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಮತ್ತೆ ಸಕ್ರಿಯರಾಗಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪುತ್ರ ಅಖೀಲೇಶ್‌ ಯಾದವ್‌ ನಾಯಕತ್ವವು ವಿಫ‌ಲವಾದ ಹಿನ್ನೆಲೆಯಲ್ಲಿ ಸ್ವತಃ ಮುಲಾಯಂ ಅವರೇ ಈಗ ಅಖಾಡಕ್ಕೆ ಧುಮುಕಿದ್ದಾರೆ. ಪಕ್ಷದಲ್ಲಿರುವ ಯಾದವೇತರ ನಾಯಕರೊಂದಿಗೆ ಬಾಂಧವ್ಯ ವೃದ್ಧಿಸಿಕೊಂಡು, ಎಸ್‌ಪಿ ಯಾದವರ ಪಕ್ಷ ಎಂಬ ಹಣೆಪಟ್ಟಿಯನ್ನು ಕಳಚುವಂತೆ ಅಖೀಲೇಶ್‌ಗೆ ಮುಲಾಯಂ ಸಲಹೆ ನೀಡಿದ್ದಾರೆ. ಅಲ್ಲದೆ, ರಿಯೋತಿ ರಮಣ್‌ ಸಿಂಗ್‌, ಭಗವತಿ ಸಿಂಗ್‌, ಓಂ ಪ್ರಕಾಶ್‌ ಸಿಂಗ್‌, ಮನೋಜ್‌ ಪಾಂಡೆ, ಅರವಿಂದ್‌ ಸಿಂಗ್‌ ಮತ್ತಿತರ ಹಿರಿಯ ನಾಯಕರೊಂದಿಗೆ ಸಭೆಯನ್ನೂ ಕರೆಯಲಾಗಿದೆ. ಕಳೆದ 2 ವರ್ಷಗಳಲ್ಲಿ ಪಕ್ಷ ತೊರೆದು ಹೋದ ಎಲ್ಲ ನಾಯಕರನ್ನೂ ವಾಪಸ್‌ ಕರೆತರುವಂತೆ ಅಖೀಲೇಶ್‌ಗೆ ಮುಲಾಯಂ ಸೂಚಿಸಿದ್ದಾರೆ.

Advertisement

ಶಿವಪಾಲ್ ಮತ್ತೆ ಎಸ್‌ಪಿಗೆ?: ಎಸ್‌ಪಿಯಿಂದ ಹೊರಬಂದು ತಮ್ಮದೇ ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ(ಪಿಎಸ್‌ಪಿಎಲ್) ವನ್ನು ಸ್ಥಾಪಿಸಿಕೊಂಡಿರುವ ಶಿವಪಾಲ್ ಯಾದವ್‌ ಅವರೂ ಲೋಕಸಭೆ ಚುನಾವಣೆಯಲ್ಲಿ ಸೋಲುಂಡ ಕಾರಣ, ಮತ್ತೆ ಎಸ್‌ಪಿ ಕಡೆ ಮುಖ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಪಕ್ಷದ ಹಿರಿಯ ನಾಯಕರೊಬ್ಬರು, ‘ಈ ಚುನಾವಣೆಯು ಅಖೀಲೇಶ್‌ ಮತ್ತು ಶಿವಪಾಲ್ ಇಬ್ಬರಿಗೂ ಸರಿಯಾದ ಸಂದೇಶ ರವಾನಿಸಿದೆ. ಒಗ್ಗಟ್ಟಾಗಿದ್ದರೆ ಎದ್ದು ನಿಲ್ಲುತ್ತೇವೆ, ವಿಭಜನೆಯಾದರೆ ಇಬ್ಬರೂ ಬೀಳುತ್ತೇವೆ ಎಂಬುದು ಅವರಿಗೆ ಗೊತ್ತಾಗಿದೆ. ಪುತ್ರ ಹಾಗೂ ಸಹೋದರ ಒಂದಾಗಬೇಕು ಮತ್ತು ಪಕ್ಷ ಮತ್ತೆ ಬಲಿಷ್ಠವಾಗಬೇಕು ಎಂಬುದು ಮುಲಾಯಂ ಅವರ ಆಸೆಯೂ ಆಗಿದೆ’ ಎಂದಿದ್ದಾರೆ.

ಬಂಗಾಳದಲ್ಲಿ ನಿಲ್ಲದ ಹಿಂಸಾಚಾರ
ಲೋಕಸಭೆ ಚುನಾವಣೆ ಆರಂಭವಾದಾಗ ಶುರುವಾದ ಹಿಂಸಾಚಾರ ಪಶ್ಚಿಮ ಬಂಗಾಳದಲ್ಲಿ ಇನ್ನೂ ನಿಂತಿಲ್ಲ. ಭಾನುವಾರ ನಾರ್ತ್‌ 24 ಪರಗಣ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಚೂರಿ ಇರಿದು ಹತ್ಯೆಗೈಯ್ಯಸಲಾಗಿದೆ. ಇದಕ್ಕೂ ಮುನ್ನ ಅಂದರೆ ಶನಿವಾರ ತಡರಾತ್ರಿ ಗಂಗಾರಾಂಪುರದಲ್ಲಿ ಟಿಎಂಸಿ ಕಾರ್ಯಕರ್ತರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ. ಒಟ್ಟಿನಲ್ಲಿ ಮೇ 23ರಂದು ಫ‌ಲಿತಾಂಶ ಹೊರಬಿದ್ದ ನಂತರ ರಾಜ್ಯದಲ್ಲಿ ಒಟ್ಟು 7 ಮಂದಿ ಹತ್ಯೆಗೀಡಾಗಿದ್ದಾರೆ.

ಇಂದು ಸಿಯಾಚಿನ್‌ಗೆ ರಾಜನಾಥ್‌

ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜನಾಥ್‌ ಸಿಂಗ್‌ ಅವರು ಮೊದಲ ಭೇಟಿ ನೀಡುತ್ತಿರುವುದು ಸಿಯಾಚಿನ್‌ ನೀರ್ಗಲ್ಲು ಪ್ರದೇಶಕ್ಕೆ. ಜಗತ್ತಿನ ಅತಿ ಎತ್ತರದ ರಣಾಂಗಣ ಎಂದೇ ಕರೆಯಲಾಗುವ ಸಿಯಾಚಿನ್‌ ಯುದ್ಧ ಭೂಮಿಗೆ ಸೋಮವಾರ ಭೇಟಿ ನೀಡಲಿರುವ ಸಚಿವ ರಾಜನಾಥ್‌, ಅಲ್ಲಿನ ಭದ್ರತಾ ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಅವರ ಜೊತೆಗೆ ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ನುಡಿದಂತೆ ನಡೆದ ವಿದೇಶಾಂಗ ಸಚಿವ

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರ ಹಾದಿಯಲ್ಲೇ ನಾನೂ ಸಾಗುತ್ತೇನೆ ಎಂದು ಹೇಳಿದ್ದ ನೂತನ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನುಡಿದಂತೆ ನಡೆದಿದ್ದಾರೆ. ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ, ಅವರು ಸಂಕಷ್ಟದಲ್ಲಿದ್ದ ಭಾರತೀಯರಿಗೆ ನೆರವಾಗಿದ್ದಾರೆ. ಕುವೈಟ್‌ನಲ್ಲಿರುವ ತಮ್ಮ ಪತಿ ಕೋರ್ಟ್‌ ಸಮನ್ಸ್‌ಗೂ ಪ್ರತಿಕ್ರಿಯಿಸುತ್ತಿಲ್ಲ. ಅವರನ್ನು ಹುಡುಕಲು ನನಗೆ ದಯವಿಟ್ಟು ನೆರವಾಗಿ ಎಂದು ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಕೋರಿಕೊಂಡಿದ್ದರು. ತಕ್ಷಣ ಪ್ರತಿಕ್ರಿಯಿಸಿರುವ ಸಚಿವ ಜೈಶಂಕರ್‌, ‘ಕುವೈಟ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಕಾರ್ಯಪ್ರವೃತ್ತವಾಗಿದೆ. ಅವರೊಂದಿಗೆ ಸಂಪರ್ಕದಲ್ಲಿರಿ’ ಎಂದು ತಿಳಿಸಿದ್ದಾರೆ. ಜತೆಗೆ, ಇಟಲಿ ಪ್ರವಾಸದ ವೇಳೆ ಪಾಸ್‌ಪೋರ್ಟ್‌ ಕಳೆದುಕೊಂಡಿದ್ದ ಕುಟುಂಬವೊಂದಕ್ಕೂ ಜೈಶಂಕರ್‌ ನೆರವಾಗಿದ್ದಾರೆ.
ಪೊಲೀಸ್‌ ಸ್ಮಾರಕಕ್ಕೆ ಶಾ ಭೇಟಿ
ಹ ಸಚಿವ ಅಮಿತ್‌ ಶಾ ಅವರು ಭಾನುವಾರ ನವದೆಹಲಿಯ ರಾಷ್ಟ್ರೀಯ ಪೊಲೀಸ್‌ ಸ್ಮಾರಕಕ್ಕೆ ಭೇಟಿ ನೀಡಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ 34 ಸಾವಿರ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದ್ದಾರೆ. ಈ ಹುತಾತ್ಮ ರಿಂದಾಗಿಯೇ ಭಾರತವು ಸುರಕ್ಷಿತವಾಗಿರಲು ಸಾಧ್ಯವಾಗಿದೆ ಎಂದೂ ಶಾ ನುಡಿದಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ, ಗುಪ್ತಚರ ಸಂಸ್ಥೆಯ ನಿರ್ದೇಶಕ ರಾಜೀವ್‌ ಜೈನ್‌ ಕೂಡ ಶಾಗೆ ಸಾಥ್‌ ನೀಡಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next