Advertisement

ಪುನರ್ವಸತಿ ಕೇಂದ್ರಗಳಿಂದ ಮನೆಯತ್ತ ಹೆಜ್ಜೆ

09:25 AM Aug 10, 2019 | Suhan S |

ಹುಬ್ಬಳ್ಳಿ: ನಗರದ ಕೆಲ ಭಾಗಗಳಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪಾಲಿಕೆಯು ನಗರದ ಕೆಲವೆಡೆ ಪರಿಹಾರ ಕೇಂದ್ರಗಳನ್ನು ಆರಂಭಿಸಿದ್ದು, ನಿರಾಶ್ರಿತರಿಗೆ ಊಟ, ವಸತಿ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ. ಶುಕ್ರವಾರ ಮಳೆ ಸ್ವಲ್ಪ ಕಡಿಮೆ ಆಗಿದ್ದರಿಂದ ಬಹುತೇಕರು ತಮ್ಮ ಮನೆಯತ್ತ ಮುಖ ಮಾಡಿದರು.

Advertisement

ನ್ಯೂ ಇಂಗ್ಲಿಷ್‌ ಸ್ಕೂಲ್ನ ಪರಿಹಾರ ಕೇಂದ್ರದಲ್ಲಿ 50ಕ್ಕೂ ಅಧಿಕ ನಿರಾಶ್ರಿತರಿಗೆ ಹಾಗೂ ಬಮ್ಮಾಪುರ ಓಣಿಯ ಓಲೆ ಮಠದಲ್ಲಿ 40ಕ್ಕೂ ಹೆಚ್ಚು ಜನರಿಗೆ ಊಟ, ವಸತಿ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ.

ಬುಧವಾರ ರಾತ್ರಿಯಿಂದ ಈ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ನಿರಾಶ್ರಿತರು ರಾತ್ರಿ ಪರಿಹಾರ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿ, ಹಗಲು ಹೊತ್ತಿನಲ್ಲಿ ತಮ್ಮ ಮನೆಗಳಿಗೆ ಹೋಗಿ ಸಾಮಗ್ರಿಗಳನ್ನು ತೆಗೆದುಕೊಂಡು ಒಂದೆಡೆ ಸಂಗ್ರಹಿಸಿಡುತ್ತಿದ್ದಾರೆ. ಸಂಬಂಧಿಕರ ಮನೆಗೆ ಇಲ್ಲವೆ ಬೇರೆಡೆ ಬಾಡಿಗೆ ಮನೆ ಮಾಡಿಕೊಂಡು ಹೋಗುತ್ತಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ-ರಾತ್ರಿ ಊಟ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಪರಿಹಾರ ಕೇಂದ್ರದ ಸಿಬ್ಬಂದಿ ಹೇಳಿದರು.

ಓಲೆಮಠದಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಹಳೇಹುಬ್ಬಳ್ಳಿ ಕುಂಬಾರ ಓಣಿ, ಮ್ಯಾದಾರ ಓಣಿಯ ನಿರಾಶ್ರಿತರು ಉಳಿದುಕೊಂಡಿದ್ದಾರೆ. ತೊರವಿ ಗಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಓರ್ವ ವೈದ್ಯರು, ಸ್ಟಾಪ್‌ ನರ್ಸ್‌, ನಾಲ್ವರು ಸಿಸ್ಟರ್, ಏಳು ಜನ ಆಶಾ ಕಾರ್ಯಕರ್ತೆಯರು ಸೇರಿ ಸಹಾಯ ಮಾಡುತ್ತಿದ್ದೇವೆ ಎಂದು ನರ್ಸ್‌ ತಿಳಿಸಿದರು.

Advertisement

ನ್ಯೂ ಇಂಗ್ಲಿಷ್‌ ಸ್ಕೂಲ್ನ ಪರಿಹಾರ ಕೇಂದ್ರದಲ್ಲಿ ಓರ್ವ ವೈದ್ಯಾಧಿಕಾರಿ, ಆಶಾ ಕಾರ್ಯಕರ್ತೆ ಆರೋಗ್ಯ ಸೇವೆಯಲ್ಲಿ ತೊಡಗಿದ್ದೇವೆ. ಅಂಗನವಾಡಿ ಕೇಂದ್ರದವರು ಸಹಾಯ ಮಾಡುತ್ತಿದ್ದಾರೆ. ಶುಕ್ರವಾರ ಸ್ವಲ್ಪ ಮಳೆ ನಿಂತಿದ್ದರಿಂದ ಕೆಲವರು ತಮ್ಮ ಮನೆಗೆ ಹೋಗಿದ್ದಾರೆ ಎಂದು ಕಿರಿಯ ಆರೋಗ್ಯ ಸಹಾಯಕಿ ಎಂ.ಕೆ. ಛಬ್ಬಿ ಹೇಳಿದರು.

ಎಸ್‌ಎಸ್‌ಕೆ ಸಮಾಜದ ನೆರವು: ಹಳೇಹುಬ್ಬಳ್ಳಿ ನಾರಾಯಣ ಪೇಟೆಯ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ಕಮೀಟಿ ವತಿಯಿಂದ ಶುಕ್ರವಾರ ಪ್ರವಾಹದಲ್ಲಿ ಸಿಲುಕಿದ್ದ ನಿರಾಶ್ರಿತರಿಗೆ ಮನೆ ಮನೆಗೆ ತೆರಳಿ ಕೊಲಾØಪುರ ಚಾದರ, ಟವೆಲ್, ಸೀರೆ ವಿತರಿಸಲಾಯಿತು. ಇವರ ಜೊತೆಗೆ ವೆಂಕಟೇಶ ಎ. ಕಾಟವೆ ಫ್ರೆಂಡ್ಸ್‌ ಸರ್ಕಲ್ನವರು ಡ್ರೆಸ್‌ ಮಟಿರಿಯಲ್ಸ್ ವಿತರಿಸಿದರು.

ಪ್ರವಾಹದಲ್ಲಿ ಸಿಲುಕಿದ್ದ ಜನರಿಗೆ ಹಳೇಹುಬ್ಬಳ್ಳಿ ಚನ್ನಪೇಟೆ ನಾರಾಯಣ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗಿದೆ. ಮೂರು ದಿನಗಳಿಂದ ನಿರಾಶ್ರಿತರಿಗೆ ಸಮಾಜದಿಂದ ಊಟ, ವಸತಿ, ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದಲ್ಲಿ ನೂರು ಜನರು ಉಳಿದುಕೊಂಡಿದ್ದಾರೆ ಎಂದು ಸಮಿತಿಯ ಸತೀಶ ಮೆಹರವಾಡೆ ಹೇಳಿದರು. ಜೊತೆಗೆ ಭಾಸ್ಕರ ಜಿತೂರಿ, ಗೋಪಾಲ ಬದ್ದಿ ಮೊದಲಾದವರು ಹೆಚ್ಚಿನ ಮುತುವರ್ಜಿ ವಹಿಸಿ ನಿರಾಶ್ರಿತರಿಗೆ ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂದರು.

ಅವಲಕ್ಕಿ ಮಿಲ್ಗೆ ನೀರು: ಹಳೇಹುಬ್ಬಳ್ಳಿ ನಾರಾಯಣ ಸೋಪಾ ಕರಿಮಿಯಾ ನಗರದಲ್ಲಿರುವ ಜೈನುದ್ದೀನ ಚೌಧರಿ ಎಂಬುವರ ಚೌಧರಿ ಅವಲಕ್ಕಿ ಮಿಲ್ಗೆ ನೀರು ನುಗ್ಗಿದೆ. ಅಕ್ಕಿ ಹಾಗೂ ಅವಲಕ್ಕಿ ತುಂಬಿದ್ದ ಬಾಕ್ಸ್‌ಗಳನ್ನು ಸುರಕ್ಷಿತ ಸ್ಥಳದಲ್ಲಿಡುವ ಕೆಲಸ ಮಾಡುತ್ತಿದ್ದಾರೆ.

 

•ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next