Advertisement

ಇಂದು 4 ವಿಕೆಟ್ ಪತನ?

02:27 AM Jul 03, 2019 | sudhir |

ಬೆಂಗಳೂರು: ಈಗಾಗಲೇ ಇಬ್ಬರು ಶಾಸಕರ ರಾಜೀನಾಮೆಯಿಂದಾಗಿ ಶಾಕ್‌ಗೆ ಒಳಗಾಗಿರುವ ರಾಜ್ಯದ ಮೈತ್ರಿ ಸರಕಾರಕ್ಕೆ, ಅತೃಪ್ತ ಶಾಸಕರು ಹಂತ ಹಂತವಾಗಿ ಆಘಾತ ನೀಡಲು ಚಿಂತನೆ ನಡೆಸಿದ್ದಾರೆಯೇ?

Advertisement

ಹೌದು ಎನ್ನುತ್ತಿವೆ ಮೂಲಗಳು. ವಿದೇಶ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಎಚ್.ಡಿಯ ಕುಮಾರಸ್ವಾಮಿ ಅವರು ಭಾರತಕ್ಕೆ ವಾಪಸ್‌ ಬರುವುದರೊಳಗಾಗಿ ಕನಿಷ್ಠ 15 ಜನ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಮಂಗಳವಾರ ಅತೃಪ್ತ ಶಾಸಕರು ಗೌಪ್ಯ ಸ್ಥಳದಲ್ಲಿ ಸಭೆ ನಡೆಸಿ, ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಒಂದೇ ಹಂತದಲ್ಲಿ ರಾಜೀನಾಮೆ ನೀಡುವ ಬದಲು ಹಂತ ಹಂತವಾಗಿ ರಾಜೀನಾಮೆ ನೀಡುವ ಬಗ್ಗೆ ಆಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಜು.8ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಮೆರಿಕ ಪ್ರವಾಸದಿಂದ ಭಾರತಕ್ಕೆ ವಾಪಸ್‌ ಬರಲಿದ್ದು, ಜೆಡಿಎಸ್‌ನ ಅತೃಪ್ತರೂ ಸಹಿತ ಜು. 5ಕ್ಕೂ ಮೊದಲು ಕನಿಷ್ಠ ಹದಿನೈದು ಜನ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಆಲೋಚಿಸಿದ್ದಾರೆ ಎನ್ನಲಾಗಿದೆ.

ನಾಲ್ವರ ರಾಜೀನಾಮೆ?

ಮಂಗಳವಾರ ಅಮಾವಾಸ್ಯೆ ಇದ್ದ ಕಾರಣ ಯಾವ ಶಾಸಕರೂ ರಾಜೀನಾಮೆ ನೀಡಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಬುಧವಾರ ನಾಲ್ವರು ಕಾಂಗ್ರೆಸ್‌ ಶಾಸಕರು ರಾಜೀನಾಮೆಗೆ ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅತೃಪ್ತರ ತಂಡದ ಮೂಲಗಳ ಪ್ರಕಾರ ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್ ಹಾಗೂ ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ.

Advertisement

ಜಾರಕಿಹೊಳಿಯಿಂದ ಸ್ಪೀಕರ್‌ ಭೇಟಿ?

ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಸ್ಪೀಕರ್‌ಗೆ ಫ್ಯಾಕ್ಸ್‌ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಬುಧವಾರ ಖುದ್ದಾಗಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ನಾವು ಎಲ್ಲಿಯೂ ಆಪರೇಷನ್‌ ಕಮಲ ನಡೆಸುವುದಾಗಿ ಹೇಳಿಲ್ಲ. ಕಾಂಗ್ರೆಸ್‌ನವರು ರಿವರ್ಸ್‌ ಆಪರೇಷನ್‌ ಮಾಡುವುದಾದರೆ ಮಾಡಲಿ. ನಾನು ಯಾರನ್ನೂ ಸಂಪರ್ಕ ಮಾಡಿಲ್ಲ. ಅತೃಪ್ತರು ಯಾರು ಕೂಡ ನನ್ನ ಸಂಪರ್ಕದಲ್ಲಿಯೂ ಇಲ್ಲ. ನಮ್ಮ ಶಾಸಕರಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಅವಿಶ್ವಾಸ ನಿಲುವಳಿ ಸೂಚನೆ ಮಂಡಿಸುವ ಪ್ರಶ್ನೆಯೂ ಇಲ್ಲ.

– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಗೊಂದಲದಲ್ಲಿ ಕೈ ನಾಯಕರು
ಆನಂದ್‌ ಸಿಂಗ್‌ ಮಾತ್ರ ಅಧಿಕೃತ ರಾಜೀನಾಮೆ ನೀಡಿದ್ದು, ಅವರೂ ಜಿಂದಾಲ್ಗೆ ಜಮೀನು ಮಾರಾಟ ಮಾಡಬಾರದು ಹಾಗೂ ವಿಜಯನಗರ ಜಿಲ್ಲೆ ಘೋಷಣೆ ಮಾಡಬೇಕೆಂಬ ಬೇಡಿಕೆ ಇಟ್ಟಿರುವುದರಿಂದ ಅವರ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುವ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್‌. ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ ಆನಂದ್‌ ಸಿಂಗ್‌ಗೆ ಕರೆ ಮಾಡಿ ರಾಜೀನಾಮೆ ವಾಪಸ್‌ ಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೀಕರ್‌ ಗರಂ

‘ವಿಜಯನಗರ ಶಾಸಕ ಆನಂದ ಸಿಂಗ್‌ ರಾಜೀನಾಮೆ ಮಾತ್ರ ತಲುಪಿದ್ದು, ಸಾರ್ವಜನಿಕ ವಿಚಾರಣೆ ಮೂಲಕ ಅಂಗೀಕಾರದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ವಿಧಾನ ಸಭಾ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದ್ದಾರೆ. ಇದೇ ವೇಳೆ, ರಮೇಶ್‌ ಜಾರಕಿಹೊಳಿ ರಾಜೀನಾಮೆ ಬಗ್ಗೆಯೂ ಗರಂ ಆದ ಅವರು, ಕೆಲವರು ಫ್ಯಾಕ್ಸ್‌ ಮೂಲಕ ರಾಜೀನಾಮೆ ಕಳುಹಿಸಿದ್ದಾರೆ. ನಾನು ಪೋಸ್ಟಲ್ ಡಿಪಾರ್ಟ್‌ಮೆಂಟ್ನಲ್ಲಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next