Advertisement
ಚಿಕ್ಕಬಳ್ಳಾಪುರ ನಗರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಸಹಸ್ರಾರು ಬೀದಿನಾಯಿಗಳು ನಗರದ 31 ವಾರ್ಡ್‌ನಲ್ಲೂ ಮೊಕ್ಕಾಂ ಹೂಡಿ ಒಂಟಿಯಾಗಿ ಮಕ್ಕಳು ಹೋದರೆ ಅಥವಾ ಮನೆಗೆ ಹಾಲು, ಬಿಸ್ಕೇಟ್, ತಿಂಡಿ, ತಿನಿಸು ತರುವ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಕಾಟ ಕೊಡುತ್ತಿದ್ದವು. ಇದರಿಂದ ಸಾರ್ವಜನಿಕರು ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳುವ ಮಂದಿ ಕೈಯಲ್ಲಿ ಕೋಲು ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಅಷ್ಟರ ಮಟ್ಟಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮೆರೆದಿದ್ದವು.
Related Articles
Advertisement
ಇದರಿಂದ ಎಚ್ಚೆತ್ತುಕೊಂಡಿದ್ದ ನಗರಸಭೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಕ್ತಿ ಚಿಕಿತ್ಸೆ ಮಾಡಲು ಹಲವು ಬಾರಿ ಟೆಂಡರ್ ಕರೆದರೂ ಯಾರು ಮುಂದೆ ಬಂದಿರಲಿಲ್ಲ. ಆದರೆ ಇದೀಗ ಅಸ್ರಾ ಎಂಬ ಪ್ರಾಣಿಗಳ ಕಲ್ಯಾಣ ಸಂಸ್ಥೆ ಮುಂದಾಗಿದ್ದು, ಸ್ಥಳೀಯ ನಗರಸಭೆ ಅಸ್ರಾ ಸಂಸ್ಥೆಗೆ ಗುತ್ತಿಗೆ ನೀಡಿದೆ. ಕಳೆದ ನಾಲ್ಕೈದು ದಿನಗಳಿಂದ ಅಸ್ರಾ ಪ್ರಾಣಿಗಳ ಕಲ್ಯಾಣ ಸಂಸ್ಥೆಯ ನುರಿತ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವುಗಳನ್ನು ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಗ್ರಂಥಾಲಯ ಪಕ್ಕದಲ್ಲಿ ಅಗತ್ಯ ವ್ಯವಸ್ಥೆ: ಈಗ ಅಸ್ರಾ ಪ್ರಾಣಿಗಳ ಕಲ್ಯಾಣ ಸಂಘ ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಮಾಡಿಸಲು ಟೆಂಡರ್‌ನಲ್ಲಿ ತುಂಬ ಕಡಿಮೆ ಮೊತ್ತ ನಮೂದಿಸಿತ್ತು. ಹಾಗಾಗಿ ಪ್ರತಿ ನಾಯಿಗೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ, ಆ್ಯಂಟಿ ರೇಬಿಸ್ ಚುಚ್ಚುಮದ್ದು ನಾಯಿಯನ್ನು ಮೂರು ದಿನಗಳ ಕಾಲ ಆರೈಕೆ ಸೇರಿ ಒಟ್ಟು 1,200 ರೂ. ರಂತೆ ಗುತ್ತಿಗೆ ನೀಡಲಾಗಿದೆ. ಶಸ್ತ್ರಚಿಕಿತ್ಸೆಗೆ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಪಕ್ಕದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಳೀಯ ನಗರಸಭೆ ಆಯುಕ್ತ ಉಮಾಕಾಂತ್ ಉದಯವಾಣಿಗೆ ತಿಳಿಸಿದರು.
ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿ, ಅವುಗಳ ದಿಢೀರ್ ದಾಳಿಯಿಂದ ಹಲವು ವರ್ಷಗಳಿಂದ ತೀವ್ರ ಕಂಗಾಲಾಗಿದ್ದ ಸಾರ್ವಜನಿಕರಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ ಆಕಸ್ಮಿಕವಾಗಿ ಕಚ್ಚಿದರೂ ಅವುಗಳಿಂದ ಅಪಾಯಕಾರಿ ರೇಬಿಸ್ ಕಾಯಿಲೆ ಹರಡದಂತೆ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ಜತೆಗೆ ನಗರದಲ್ಲಿರುವ ಬೀದಿ ನಾಯಿಗಳಿಗೆ ಸಂತತಿ ಆಗದಂತೆ ಸಂತಾನಹರಣ ಶಕ್ತಿ ಶಸ್ತ್ರ ಚಿಕಿತ್ಸೆ ನೀಡಲು ನಗರಸಭೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ.
ಒಂದು ಬೀದಿ ನಾಯಿಗೆ 1,200 ರೂ. ಖರ್ಚು: ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ಮುಂದಾಗಿರುವ ಸ್ಥಳೀಯ ನಗರಸಭೆ ಒಂದು ನಾಯಿಗೆ ಬರೋಬ್ಬರಿ 1,200 ರೂ. ಖರ್ಚು ಮಾಡುತ್ತಿದೆ. ಬೀದಿ ನಾಯಿಗೆ ಸಂತಾನಹರಣ ಶಕ್ತಿ ಚಿಕಿತ್ಸೆ ನೀಡುವುದರ ಜತೆಗೆ ಅದನ್ನು ಮೂರು ದಿನಗಳ ಕಾಲ ಶಸ್ತ್ರ ಚಿಕಿತ್ಸೆ ಬಳಿಕ ಆರೈಕೆ ಮಾಡುವ ಕೆಲಸವನ್ನು ಅಸ್ರಾ ಪ್ರಾಣಿಗಳ ಕಲ್ಯಾಣ ಸಂಸ್ಥೆಗೆ ನಗರಸಭೆ ಗುತ್ತಿಗೆ ನೀಡಿದೆ. ಅಲ್ಲದೇ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚು ಮದ್ದು ಸಹ ನೀಡಲಾಗುತ್ತಿದೆ. ಈಗಾಗಲೇ 150 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಅಸ್ರಾ ಸಂಸ್ಥೆ ಸಂತಾನ ಹರಣ ಶಕ್ತಿ ಶಸ್ತ್ರ ಚಿಕಿತ್ಸೆ ಪೂರೈಸಿದೆ.
ಚಿಕ್ಕಬಳ್ಳಾಪುರದಲ್ಲಿವೆ 2000 ಬೀದಿ ನಾಯಿಗಳು: 100, 200 ಅಲ್ಲ ಬರೋಬ್ಬರಿ 2000 ಕ್ಕೂ ಅಧಿಕ ಬೀದಿ ನಾಯಿಗಳು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಠಿಕಾಣಿ ಹಾಕಿವೆ. ಇದು ಸ್ಥಳೀಯ ನಗರಸಭೆ ನಡೆಸಿರುವ ಸಮೀಕ್ಷೆಯ ಅಂಕಿ, ಅಂಶ, ಪ್ರತಿ ವಾರ್ಡ್‌ನಲ್ಲೂ ಬೀದಿ ನಾಯಿಗಳ ಹಾವಳಿ ಇದ್ದೇ ಇದೆ. ಹೆಚ್ಚಾಗಿ ಮುಖ್ಯ ರಸ್ತೆಗಳಲ್ಲಿಯೇ ನಾಯಿಗಳ ಹಾವಳಿ ಅಧಿಕವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳು ಪರದಾಡುವುದು ಮಾಮೂಲಿಯಾಗಿದೆ. ಬೀದಿ ನಾಯಿಗಳ ಹಾವಳಿ ತಡೆಯಲು ನಗರಸಭೆ ಅಧಿಕಾರಿಗಳು ಈ ಹಿಂದೆಯೇ ಎಚ್ಚೆತ್ತುಕೊಳ್ಳಬೇಕಿತ್ತು. ಆದರೂ ತಡವಾಗಿಯಾದರೂ ಎಚ್ಚೆತ್ತಿಕೊಂಡಿರುವವುದು ನೆಮ್ಮದಿ ವಿಚಾರ. ಬೀದಿ ನಾಯಿಗಳ ದಾಳಿಯಿಂದ ನಗರದಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಓಡಾಟಕ್ಕೂ ಕಷ್ಟವಾಗಿತ್ತು. ವಾಹನ ಸವಾರರು ಪರದಾಡಬೇಕಿತ್ತು.
-ಎನ್.ಚಂದ್ರಶೇಖರ್, ಚಿಕ್ಕಬಳ್ಳಾಪುರ ನಿವಾಸಿ * ಕಾಗತಿ ನಾಗರಾಜಪ್ಪ