ನರೇಗಲ್ಲ: ಅಕ್ಷರ ಕಲಿಸುವ ಶಾಲೆ ಪವಿತ್ರ ಸ್ಥಳ. ಇದನ್ನು ಶುಚಿಯಾಗಿಡುವುದು ಎಲ್ಲರ ಕರ್ತವ್ಯ. ಆದರೆ ಇದಕ್ಕೆ ವಿರುದ್ಧ ಎಂಬಂತೆ ಪಟ್ಟಣದ ಹೊಸ್ ಬಸ್ ನಿಲ್ದಾಣದ ಹತ್ತಿರವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಅನೈತಿಕ ಚಟುವಟಿಕೆ ಹಾಗೂ ಮಲಮೂತ್ರ ವಿಸರ್ಜನೆ ತಾಣವಾಗಿ ಪರಿಣಮಿಸಿದೆ.
ಈ ಸರ್ಕಾರಿ ಶಾಲೆ ಪಟ್ಟಣದ ಮಧ್ಯದಲ್ಲಿದ್ದು, ಸುಸಜ್ಜಿತ ಕಾಂಪೌಡ್ ಹೊಂದಿದೆ. ಆದರೂ ಕತ್ತಲಾದರೆ ಕಿಡಿಗೇಡಿಗಳ ಅನೈತಿಕ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ. ಬಿಗಿ ಭದ್ರತೆ ಇಲ್ಲದಿರುವುದನ್ನು ಅರಿತು ಕಿಡಿಗೇಡಿಗಳು ರಾತ್ರಿ ವೇಳೆ ಮದ್ಯಪಾನ ಮಾಡಿ ಅಲ್ಲಲ್ಲಿ ಕುಡಿದ ಬಾಟಲಿ, ಸಿಗರೇಟ್ ಪ್ಯಾಕ್, ಆಹಾರ ಪದಾರ್ಥಗಳನ್ನು ಬಿಸಾಡಿ ಗಲೀಜು ಮಾಡುತ್ತಿದ್ದಾರೆ. ಇದನ್ನು ಸಂಬಂಧಿಸಿದವರು ನಿಯಂತ್ರಿಸಲು ಹಿಂದೆಟ್ಟು ಹಾಕುತ್ತಿರುವುದು ಶಿಕ್ಷಣ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ.
ಕಾಂಪೌಂಡ್‌ನಲ್ಲೇ ಮಲಮೂತ್ರ: ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಜನರು ಮಾತ್ರ ಇನ್ನು ಜಾಗೃತಿಗೊಂಡಿಲ್ಲ ಎಂಬುದಕ್ಕೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಸ್ಥಿತಿಯೇ ಸಾಕ್ಷಿ. ಇಲ್ಲಿನ ಜನರು ಮಲ ಮೂತ್ರ ವಿಸರ್ಜನೆಗೆ ಶಾಲಾ ಕಾಂಪೌಂಡನ್ನೇ ಆಯ್ಕೆ ಮಾಡಿಕೊಂಡತಿದೆ. ಸ್ಕೂಲ್ ಆವರಣಕ್ಕೆ ಬೆಳಗ್ಗೆ ನುಗ್ಗುವ ಜನರು ಎಲ್ಲೆಲ್ಲೋ ಮೂತ್ರವಿಸರ್ಜನೆ ಮಾಡಿ ಆವರಣ ಗಬ್ಬೆಬ್ಬಿಸುತ್ತಿದ್ದಾರೆ.
ದುರ್ನಾತ ನಡುವೆ ಪಾಠ: ಪ್ರತಿದಿನ ಶುಚಿಯಾಗಿ ಶಾಲೆಗೆ ಬರುವ ಮಕ್ಕಳು, ಶಿಕ್ಷಕರು ಒಂದು ಗಂಟೆ ಆವರಣ ಸ್ವಚ್ಛತೆಗೆ ಮೀಸಲಿಡಬೇಕಾದ ಸ್ಥಿತಿಯಿದೆ. ಈ ಶಾಲೆಯಲ್ಲಿ 351ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರೆಲ್ಲರೂ ಮದ್ಯ, ಮಲಮೂತ್ರದ ಕೆಟ್ಟ ವಾಸನೆಯಲ್ಲಿ ಶಿಕ್ಷಣ ಪಡೆಯುವಂತಾಗಿದೆ. ರಾತ್ರಿ ವೇಳೆ ಕುಡುಕರ ಕಾಟ ಹಾಗೂ ಹಗಲಿನ ವೇಳೆ ಹಂದಿಗಳ ಹಾವಳಿ ಕೂಡ ಜೋರಾಗಿರುತ್ತದೆ. ಶಿಕ್ಷಣ ಇಲಾಖೆಯಿಂದ ಈಗಾಗಲೇ ಹತ್ತು ಹಲವಾರು ಭಾರಿ ಪೊಲೀಸ್ ಇಲಾಖೆಗೆ ಶಾಲೆಯ ಆವರಣದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ಕಡಿವಾಣ ಹಾಕಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯಶಿಕ್ಷಕ ಮತ್ತು ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸದರೂ ಪೊಲೀಸ್ ಇಲಾಖೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬಿಸಿಯೂಟಕ್ಕೂ ಹಿಂಜರಿಕೆ: ರಾತ್ರಿ ವೇಳೆ ಅನಾಚಾರಗಳು ನಡೆಯದಂತೆ ಶಾಲೆಗೆ ಭದ್ರತೆ ಒದಗಿಸಲು ನಿರ್ಲಕ್ಷ್ಯ ವಹಿಸಿದ್ದರಿಂದ ಶಾಲಾ ಮಕ್ಕಳಿಗೆ ತುಂಬಾ ಕೆಟ್ಟ ಪರಿಸರ ನಿರ್ಮಾಣವಾಗಿದೆ. ಮಕ್ಕಳು ಬಿಸಿ ಊಟ ಮಾಡಲು ಬರುವ ವೇಳೆಯಲ್ಲಿ ಹಂದಿಗಳು ವಿದ್ಯಾರ್ಥಿಗಳ ನಡುವೆ ಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ಕೂಡಲೇ ಪ.ಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಈ ಶಾಲೆ ಆವರಣಕ್ಕೆ ರಾತ್ರಿ ಹೊತ್ತಲ್ಲಿ ಸುಸಜ್ಜಿತ ಭದ್ರತೆ ಕಲ್ಪಿಸಬೇಕು ಎಂದು ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.
ನರೇಗಲ್ಲ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಈಗಾಗಲೇ ಮಾಹಿತಿ ಬಂದಿದೆ. ಇಲಾಖೆಯಿಂದ ಸ್ಥಳೀಯ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಶಾಲೆ ಆವರಣದಲ್ಲಿ ಅನೈತಿಕ ಚಟುವಟಿಕೆಗಳನ್ನು ಕಡಿವಾಣ ಹಾಕುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
–ಎನ್. ನಂಜುಂಡಯ್ಯ, ರೋಣ ಬಿಇಒ
–ಸಿಕಂದರ ಎಂ. ಆರಿ