ಬೆಂಗಳೂರು: ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆ ಜಾರಿ ಮಾಡುವ ಕುರಿತು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ. ಬಸವೇಶ್ವರ ಸರ್ಕಲ್‌ನಿಂದ ಹೆಬ್ಟಾಳ ಫ್ಲೈಓವರ್ ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಈ ಯೋಜನೆಗೆ ಪರಿಸರವಾದಿಗಳು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿ ಹಸಿರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸರ್ಕಾರದ ಕ್ರಮದ ಬಗ್ಗೆ ಹಸಿರು ನ್ಯಾಯ ಪೀಠ ಮರ ಕಡಿಯುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಸಾರ್ವಜನಿಕರ ವಿರೋಧ ಹಾಗೂ ನ್ಯಾಯಾಲಯದ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯನ್ನೇ ಕೈ ಬಿಡುವುದಾಗಿ ಘೋಷಣೆ ಮಾಡಿತ್ತು.
ಈ ಯೋಜನೆಗೆ ಆರಂಭಿಕವಾಗಿ 1300 ಕೋಟಿ ವೆಚ್ಚದ ಯೋಜನಾ ವರದಿ ಸಿದ್ದಪಡಿಸಿ ಏಕಾ ಏಕಿ 1800 ಕೋಟಿಗೆ ಹೆಚ್ಚಳ ಮಾಡಿರುವ ಬಗ್ಗೆಯೂ ಪ್ರತಿಪಕ್ಷಗಳು ಪ್ರಶ್ನೆ ಮಾಡಿ, ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡಿದ್ದವು.
ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಮೀಸಲಿಟ್ಟಿದ್ದ ಹಣದ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದರು ಎನ್ನಲಾಗಿದೆ. ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡು ವಿರೋಧ ವ್ಯಕ್ತಪಡಿಸುವ ಸಂಘ ಸಂಸ್ಥೆಗಳು ಪರಿಸರವಾದಿಗಳಿಗೆ ಮನವರಿಕೆ ಮಾಡಿಕೊಡಬೇಕು.
ಯೋಜನೆ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಕಡಿಯದೇ ಯೋಜನೆ ಜಾರಿಗೊಳಿಸುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟು ಯೋಜನೆಯನ್ನು ಆರಂಭಿಸಬಹುದು. ಪರಿಸರವೂ ಉಳಿಯಬೇಕು. ಅಭಿವೃದ್ಧಿಯೂ ಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಈ ಬಗ್ಗೆ ಸಂಪುಟದಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಆ ವಿಷಯವನ್ನು ಅಷ್ಟಕ್ಕೆ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದ್ದು, ಆದರೆ, ಸ್ಟೀಲ್ ಬ್ರಿಡ್ಜ್ ಯೋಜನೆ ಮತ್ತೆ ಜಾರಿಗೊಳಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಆರಂಭವಾದಂತಿದೆ.