Advertisement

ಪಟೇಲ್‌ ಪ್ರತಿಮೆಯಲ್ಲಿ ಸೇರಿದೆ ಕರಾವಳಿಯ ಉಕ್ಕು!

08:31 AM Oct 31, 2018 | Team Udayavani |

ಮಂಗಳೂರು: ಸರ್ದಾರ್‌ ಸರೋವರದ ಬಳಿ ಅ. 31ರಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ವಲ್ಲಭಭಾಯಿ ಪಟೇಲ್‌ ಪ್ರತಿಮೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊಡುಗೆಯೂ ಇದೆ. ಈ ಜಿಲ್ಲೆಯ ಕೃಷಿಕರ ಮನೆಗಳಿಂದ ಸಂಗ್ರಹಿಸಿ ಕಳುಹಿಸಲಾದ 3 ಕ್ವಿಂಟಾಲ್‌ನಷ್ಟು ಉಕ್ಕು ಅದರ ನಿರ್ಮಾಣಕ್ಕೆ ಬಳಕೆಯಾಗಿದೆ.
ಪಟೇಲರ ಪ್ರತಿಮೆ ಯೋಜನೆ ಹಾಕಿಕೊಂಡಾಗ ಅದರಲ್ಲಿ ದೇಶದ ಎಲ್ಲ ಭಾಗದ ಜನರ ಸಹಯೋಗ ಇರಬೇಕು ಎಂದು ಬಿಜೆಪಿ ನಿರ್ಧರಿಸಿ ಪ್ರತೀ ಗ್ರಾಮದಿಂದ ಉಕ್ಕು ಸಂಗ್ರಹಕ್ಕೆ ಮುಂದಾಗಿತ್ತು. ಕರಾವಳಿಯಲ್ಲಿ 2014ರ ಜ. 23ರಿಂದ 31ರ ವರೆಗೆ ಲೋಹ ಸಂಗ್ರಹ ನಡೆದಿತ್ತು. ಒಟ್ಟು 349 ಗ್ರಾ. ಪಂ.ಗಳ ಪೈಕಿ ಕೆಲವು ಕಡೆ ಪೂರ್ಣ ಸ್ಪಂದನೆ ದೊರೆತಿರಲಿಲ್ಲ. ಆದರೂ ಬಹುತೇಕ ಗ್ರಾಮಗಳಿಂದ ತಲಾ ಒಂದು ಕಿಲೋದಂತೆ ಸುಮಾರು 3 ಕ್ವಿಂಟಾಲ್‌ ಉಕ್ಕು ಸಂಗ್ರಹಿಸಲಾಗಿತ್ತು.

Advertisement

ಉಕ್ಕು ಸಂಗ್ರಹಕ್ಕೆ ಕಿಟ್‌ಗಳು
ಪ್ರತೀ ಪಂಚಾಯತ್‌ನ ಒಬ್ಬ ಸಾಧಕ ರೈತನ ಬಳಿಗೆ ಬಿಜೆಪಿ ಕಾರ್ಯಕರ್ತರು ತೆರಳಿ, ಆತ ಬಳಸಿದ ಉಕ್ಕಿನ ಕೃಷಿ ಉಪಕರಣ ಸಂಗ್ರಹಿಸಿದ್ದರು. ಇದೇ ಸಂದರ್ಭ ಕೃಷಿಕನ ಮನೆಯಲ್ಲಿ ಸಣ್ಣ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಕೆಲವೆಡೆ ಉಕ್ಕನ್ನು ಮೆರವಣಿಗೆಯಲ್ಲಿ ಆಯಾ ಪಂಚಾಯತ್‌ ಕೇಂದ್ರ ಸ್ಥಾನಕ್ಕೆ ತಂದುದೂ ಇತ್ತು. ಇನ್ನುಳಿದೆಡೆ ಉಕ್ಕನ್ನು ಪಡೆದು ಕೇಂದ್ರ ಕಚೇರಿಗೆ ನೀಡಲಾಗಿತ್ತು. ಉಕ್ಕು ಸಂಗ್ರಹಕ್ಕಾಗಿ ಪ್ರತ್ಯೇಕ ಕಿಟ್‌ಗಳನ್ನು ಬಿಜೆಪಿ ಕೇಂದ್ರ ಕಚೇರಿಯಿಂದ ದ.ಕ. ಮತ್ತು ಉಡುಪಿ ಜಿಲ್ಲಾ ಕಚೇರಿಗೆ ನೀಡಲಾಗಿತ್ತು.

ಕರಾವಳಿಯ ಮಣ್ಣು
ಕೆಲವು ಗ್ರಾಮಗಳಿಂದ ತಾಮ್ರವನ್ನೂ ಸಂಗ್ರಹಿಸಲಾಗಿತ್ತು. ಜತೆಗೆ ಕೆಲವು ಗ್ರಾಮಗಳ ಪಾರಂಪರಿಕ ಅಥವಾ ಪುಣ್ಯ ಸ್ಥಳಗಳಿಂದ ಹಿಡಿ ಮಣ್ಣನ್ನು ಸಂಗ್ರಹಿಸಿ ನೀಡಲಾಗಿತ್ತು. ಅಭಿಯಾನಕ್ಕೆ ತಾಲೂಕು ಮಟ್ಟದಲ್ಲಿ 60 ಮಂದಿ, ಗ್ರಾ.ಪಂ. ಮಟ್ಟದಲ್ಲಿ ಹತ್ತು ಮಂದಿಯ ತಂಡ ರಚಿಸಲಾಗಿತ್ತು. ಬಹುತೇಕ ಗ್ರಾಮಗಳಿಂದ ಸ್ಪಂದನೆ ದೊರಕಿತ್ತು ಎಂದು ಲೋಹ ಸಂಗ್ರಹ ದ.ಕ. ಜಿಲ್ಲಾ ಸಮಿತಿಯ ಸಂಚಾಲಕರಾಗಿದ್ದ, ಹಾಲಿ ಶಾಸಕ ಡಾ| ವೈ. ಭರತ್‌ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹಸ್ತಾಂತರ
ಪ್ರತಿಮೆ ನಿರ್ಮಾಣಕ್ಕೆ ಮುನ್ನ 2013ರ ಡಿ. 15ರಂದು ಮಂಗಳೂರಿನಲ್ಲಿ “ರನ್‌ ಫಾರ್‌ ಯುನಿಟಿ’ ನಡಿಗೆ ನಡೆದಿತ್ತು. 2014ರ ಜನವರಿಯಲ್ಲಿ ಉಕ್ಕು ಸಂಗ್ರಹ ಪೂರ್ಣವಾಗಿ ಫೆ.18ಕ್ಕೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಸಭೆಯಲ್ಲಿ  ಮೋದಿ ಅವರಿಗೆ ಲೋಹದ ಕಿಟ್‌ ಹಸ್ತಾಂತರಿಸಲಾಗಿತ್ತು.

ಸಂಭ್ರಮದ ಕ್ಷಣ
ಪಟೇಲ್‌ ಪ್ರತಿಮೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳಿಂದ ಉಕ್ಕು ಪಡೆದುಕೊಂಡು ನೀಡಿದ್ದೇವೆ. ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಲ್ಲಿ ಕರಾವಳಿಯ ಉಕ್ಕು ಕೂಡ ಸೇರಿರು ವುದು ನಮ್ಮೆಲ್ಲರಿಗೆ ಹೆಮ್ಮೆ.
-ನಳಿನ್‌ ಕುಮಾರ್‌ ಕಟೀಲು

Advertisement
Advertisement

Udayavani is now on Telegram. Click here to join our channel and stay updated with the latest news.

Next