ಬೆಂಗಳೂರು: ಶಿವಾನಂದ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗಾಗಿ ನಡೆಸಿದ ಮಣ್ಣಿನ ಪರೀಕ್ಷೆ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಸೇತುವೆ ನಿರ್ಮಾಣ ಕಾಮಗಾರಿ ಚಾಲನೆ ನೀಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ರೇಸ್‌ಕೋರ್ಸ್ ರಸ್ತೆ, ಕುಮಾರಕೃಪಾ ರಸ್ತೆ ಹಾಗೂ ಶೇಷಾದ್ರಿಪುರ ಕಡೆಗೆ ಹೋಗುವ ವಾಹನಗಳ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಣಕ್ಕಾಗಿ ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಪಾಲಿಕೆ ಯೋಜನೆ ರೂಪಿಸಿದ್ದು, ಈಗಾಗಲೇ ರಾಜ್ಯ ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ.
ಸದೃಢ ಮಣ್ಣು: ಉಕ್ಕಿನ ಸೇತುವೆ ನಿರ್ಮಾಣವಾಗುವ ಸ್ಥಳದಲ್ಲಿ ಕಳೆದ ಮೂರು ತಿಂಗಳಿಂದ ನಡೆಸಲಾದ ಪರೀಕ್ಷೆಯಲ್ಲಿ ಮಣ್ಣು ಸದೃಢವಾಗಿರುವ ಅಂಶ ಕಂಡುಬಂದಿದ್ದು, ಸೇತುವೆ ನಿರ್ಮಾಣ ಕಾಮಗಾರಿ ಮುಂದುವರಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
ಮರಗಳ ಸ್ಥಳಾಂತರ: ಈ ಮಧ್ಯೆ, ಯೋಜನೆಗಾಗಿ ಈ ಭಾಗದಲ್ಲಿ ಸುಮಾರು 26 ಮರಗಳು ತೆರವುಗೊಳಿಸಬೇಕಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದು, ಅದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಮರಗಳನ್ನು ನೂತನ ತಂತ್ರಜ್ಞಾನ ಬಳಸಿ ಬೇರೆಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮೀಪದಿಂದ ಹರೇಕೃಷ್ಣ ರಸ್ತೆಯ ರೈಲ್ವೆ ಅಂಡರ್ ಪಾಸ್ ಸಮೀಪದವರೆಗೆ ಉಕ್ಕಿನ ಸೇತುವೆ ನಿರ್ಮಿಸಲು 2011ರಲ್ಲಿಯೇ ಪಾಲಿಕೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಆದರೆ, ತಾಂತ್ರಿಕ ಕಾರಣ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಈ ಮಧ್ಯೆ, ಸ್ಥಳೀಯರಿಂದ ಮರಗಳ ತೆರವಿಗೆ ವಿರೋಧವೂ ವ್ಯಕ್ತವಾಗಿತ್ತು. ಜತೆಗೆ ಪ್ರಕರಣ ನ್ಯಾಯಲಯದ ಮೆಟ್ಟಿಲು ಹತ್ತಿತ್ತು. ಹೀಗಾಗಿ, ಯೋಜನೆಗೆ ಸಂಪುಟದಲ್ಲಿ ಅನುಮೋದನೆ ಪಡೆದು ಮಣ್ಣಿನ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮಣ್ಣಿನ ಪರೀಕ್ಷೆ ಯಶಸ್ವಿಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಲು ಪಾಲಿಕೆ ಮುಂದಾಗಿದೆ.
ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಅನುಷ್ಠಾನಕ್ಕಾಗಿ ನಡೆಸಲಾದ ಮಣ್ಣಿನ ಪರೀಕ್ಷೆ ಯಶಸ್ವಿಯಾಗಿದೆ. ಅದರಂತೆ ಶೀಘ್ರದಲ್ಲಿಯೇ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು. ಜತೆಗೆ ಈಗಾಗಲೇ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳುವಂತೆ ಸೂಚಿಸಲಾಗಿದೆ.
-ಕೆ.ಟಿ.ನಾಗರಾಜ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್
* ವೆಂ. ಸುನೀಲ್ ಕುಮಾರ್