ಬೆಂಗಳೂರು: ಮೋಜು-ಮಸ್ತಿಗಾಗಿ ರಾತ್ರಿ ವೇಳೆ ಐಷಾರಾಮಿ ದ್ವಿಚಕ್ರ ವಾಹನ ಗಳನ್ನು ಕಳವು ಮಾಡುತ್ತಿದ್ದ ಏಳು ಮಂದಿ ತಮಿಳುನಾಡಿನ ಕಳ್ಳರ ಗ್ಯಾಂಗ್ ಬೊಮ್ಮನಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.
ತಮಿಳುನಾಡು ಮೂಲದ ದಿನೇಶ್, ಶಂಕರ್, ಅರುಣ್, ರಾಜೇಶ್, ಪೂಅರಸನ್, ಕಾರ್ತಿಕ್ ಮತ್ತು ವಿನೋದ್‌ಕುಮಾರ್ ಬಂಧಿತರು. ಆರೋಪಿಗಳಿಂದ 1.20 ಕೋಟಿ ಮೌಲ್ಯದ 72 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಬೆಂಗಳೂರಿನಲ್ಲಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ನಂತರ ಆ ಬೈಕ್‌ಗಳನ್ನು ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಮಾರಿ ಮೋಜು-ಮಸ್ತಿ ಮಾಡುತ್ತಿದ್ದರು. ಕಳವು ಮಾಡಿದ 2 ಲಕ್ಷ ಮೌಲ್ಯದ ಬೈಕ್‌ಗಳನ್ನು ಕೇವಲ 25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಹೊಸೂರು ಟೋಲ್ ನಲ್ಲಿ 100 ರೂ. ಕೊಟ್ಟು ತಮಿಳುನಾಡಿಗೆ ಕೊಂಡೊಯ್ದು ಅಲ್ಲಿನ ರಿಜಿಸ್ಟ್ರೇಷನ್ ನಂಬರ್ ಹಾಕಿಸಿ ಮಾರಾಟ ಮಾಡುತ್ತಿದ್ದರು. ದೊಡ್ಡ ಬೆಲೆಯ ಬೈಕ್‌ಗಳನ್ನು 25 ಸಾವಿರ ರೂ.ಗೆ ಮಾರಾಟ ಮಾಡಿದರೆ, ಕಡಿಮೆ ಬೆಲೆ ಬೈಕ್‌ಗಳನ್ನು 10 ಸಾವಿರಕ್ಕೂ ಮಾರಾಟ ಮಾಡುತ್ತಿದ್ದರು. ತಮಿಳುನಾಡಿನ ತಿರುಪತ್ತೂರು, ವಾನಂಬಾಡಿ, ಆಲಂ ಗಾಯ್, ಮಿಟ್ಟೂರು, ಆಂಬೂರು, ವೇಲೂರು ಸೇರಿ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಬೈಕ್ ದಾಖಲೆ ಕೇಳಿದರೆ ಲೋನ್ ಇದೆ ಇದು ಕ್ಲಿಯರ್ ಆದ ಬಳಿಕ ಕೊಡುತ್ತೆವೆ ಎಂದು ನಂಬಿಸಿ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಆಗ್ನೇಯ ವಿಭಾಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಹೆಚ್ಚು ಬೈಕ್ ಕಳ್ಳತನವಾಗುತ್ತಿತ್ತು. ಅದರಲ್ಲೂ ದುಬಾರಿ ಮೌಲ್ಯದ ಬೈಕ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮೊದಲಿಗೆ ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಲಾಯಿತು. ಆತ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯಾವ ರೀತಿ ಬೈಕ್ ಅನ್ನು ಡೈರೆಕ್ಟ್ ಮಾಡಿ ಸ್ಟಾರ್ಟ್ ಮಾಡಬೇಕು ಎಂಬುದನ್ನು ಕಲಿಸುತ್ತಿದ್ದ. ಬಸ್ ಮೂಲಕ ಬೆಂಗಳೂರಿಗೆ ಬರುತ್ತಿದ್ದ ಆರೋಪಿಗಳು ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಇದೇ ಮೊದಲ ಬಾರಿ ಸಿಕ್ಕಿಬಿದ್ದಿ¨ªಾರೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.
ಇನ್ನು ಆರೋಪಿಗಳು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲೂ ಬೈಕ್‌ಗಳನ್ನು ಕಳವು ಮಾಡಿ, ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಕಾರ್ಯಾಚರಣೆಯಲ್ಲಿ ಮೈಕೋಲೇಔಟ್ ಎಸಿಪಿ ಎನ್. ಪ್ರತಾಪ್ ರೆಡ್ಡಿ, ಬೊಮ್ಮನಹಳ್ಳಿ ಠಾಣಾಧಿಕಾರಿ ಎಸ್.ಪ್ರಶಾಂತ್, ಪಿಎಸ್‌ಐ ನವೀನ್, ಸಂತೋಷ್ ಹಾಗೂ ಇತರರು ಇದ್ದರು.
ಬೈಕ್ ಕದಿಯುತ್ತಿದ್ದ ರೀತಿ.. : ಆರೋಪಿಗಳ ಪೈಕಿ ದಿನೇಶ್, ಶಂಕರ್, ಅರುಣ್, ರಾಜೇಶ್ ತಮಿಳುನಾಡಿನಿಂದ ರಾತ್ರಿ ಸಮಯದಲ್ಲಿ ಬಸ್‌ನಲ್ಲಿ ಬಂದು ಅತ್ತಿಬೆಲೆ, ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಬೈಕ್‌ಗಳು ಸಿಕ್ಕ ಕೂಡಲೇ ಆರೋಪಿಗಳಾದ ದಿನೇಶ್ ಮತ್ತು ಶಂಕರ್ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಡೈರೆಕ್ಟ್ ಮಾಡಿ ಕದ್ದು ಪರಾರಿಯಾಗುತ್ತಿದ್ದರು. ಆರೋಪಿಗಳಾದ ಅರುಣ್ ಮತ್ತು ರಾಜೇಶ್ ಅಕ್ಕ ಪಕ್ಕ ಯಾರಾದರು ಬರುತ್ತಾರೆಯೇ ಎಂದು ನೋಡಿಕೊಳ್ಳುತ್ತಿದ್ದರು. ನಂತರ ಕದ್ದ ಬೈಕ್ ಗಳನ್ನು ಆರೋಪಿಗಳಾದ ಪೂ ಅರಸನ್, ಕಾರ್ತಿಕ್ ಮತ್ತು ವಿನೋದ್‌ಕುಮಾರ್ ನೀಡುತ್ತಿದ್ದರು.