ಮೈಸೂರು: ಒಂದು ಕಾಲದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ರಸ್ತೆಗಳಲ್ಲಿ ಭಾರೀ ಸದ್ದು ಮಾಡಿದ್ದ ವಿವಿಧ ಬಗೆಯ ಜಾವಾ ಬೈಕ್‌ಗಳು ಭಾನುವಾರ ನಗರದೆಲ್ಲೆಡೆ ಸಂಚರಿಸುವ ಮೂಲಕ ಬೈಕ್ ಪ್ರಿಯರನ್ನು ಆಕರ್ಷಿಸಿದವು.
ರ್ಯಾಲಿ: ಹಲವು ವರ್ಷಗಳ ಹಿಂದೆಯೇ ಮೈಸೂರಿಗರ ಮನಗೆದ್ದಿರುವ ಜಾವಾ ಬೈಕ್ ಮೈಸೂರಿನ ಹೆಮ್ಮೆ ಎಂದೇ ಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಮೈಸೂರು ಜಾವಾ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಜಾವಾ ದಿನದ ಅಂಗವಾಗಿ ಜಾವಾ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ನಜ‚ರ್‌ಬಾದ್ ಪೊಲೀಸ್ ಠಾಣೆ ವೃತ್ತದಿಂದ ಆರಂಭಗೊಂಡ ರ್ಯಾಲಿಯಲ್ಲಿ ನೂರಾರು ಮಂದಿ ಜಾವಾ ಹಾಗೂ ಯೆಜ್ಡಿ ಬೈಕ್‌ಗಳೊಂದಿಗೆ ರ್ಯಾಲಿಯಲ್ಲಿ ಪಾಲ್ಗೊಂಡು, ನಗರದೆಲ್ಲೆಡೆ ಸಂಚರಿಸಿ ಗಮನ ಸೆಳೆದರು.
ನಜ‚ರ್‌ಬಾದ್‌ನಿಂದ ಆರಂಭಗೊಂಡ ರ್ಯಾಲಿ ಹಾರ್ಡಿಂಗ್ ವೃತ್ತ, ಬಿ.ಎನ್. ರಸ್ತೆ, ಚಾಮರಾಜ ಜೋಡಿರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ, ಕುಕ್ಕರಹಳ್ಳಿ ಕೆರೆ ಜಂಕ್ಷನ್, ಮಾನಸಗಂಗೋತ್ರಿ, ಹುಣಸೂರು ಮುಖ್ಯರಸ್ತೆ, ವಿವಿ ಮೊಹಲ್ಲಾ ಮಾರ್ಗವಾಗಿ ಸಂಚರಿಸಿ ಯಾದವಗಿರಿಯಲ್ಲಿರುವ ಜಾವಾ ಫ್ಯಾಕ್ಟರಿ ರಸ್ತೆಯಲ್ಲಿ ಅಂತ್ಯಗೊಂಡಿತು.
ಈ ವೇಳೆ ಮಾತನಾಡಿದ ಜಾವಾ ಕ್ಲಬ್ ಸದಸ್ಯ ಎನ್.ರವೀಂದ್ರಕುಮಾರ್, ಮೈಸೂರು ಎಂದೊಡನೆ ಹಲವರಿಗೆ ಇಂದಿಗೂ ಜಾವಾ ಬೈಕ್‌ಗಳು ನೆನಪಾಗಲಿದ್ದು, ಇದು ಮೈಸೂರಿಗೆ ಹೆಮ್ಮೆಯ ಸಂಗತಿಯಾಗಿದೆ. ಮನೆಗಳಲ್ಲಿ ಹಲವು ಹಬ್ಬಗಳನ್ನು ಆಚರಿಸುವ ರೀತಿಯಲ್ಲಿ ಜಾವಾ ಬೈಕ್‌ಗಳ ಮಾಲಿಕರು ಹಾಗೂ ಅಭಿಮಾನಿಗಳು ಪ್ರತಿವರ್ಷ ಜಾವಾ ದಿನವನ್ನು ಆಚರಿಸುತ್ತೇವೆ.
ಈ ದಿನದಂದು ತಮ್ಮ ಜಾವಾ ಬೈಕ್‌ಗಳನ್ನು ಅಲಂಕರಿಸಿ, ನಗರದೆಲ್ಲೆಡೆ ರ್ಯಾಲಿ ನಡೆಸಲಿದ್ದು, ನಾನು ಕಳೆದ 6 ವರ್ಷದಿಂದ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದೇನೆ. ಆರಂಭದಲ್ಲಿ 10 ಜನರಿಂದ ಆರಂಭಗೊಂಡ ಜಾವಾ ಬೈಕ್‌ರ್ಯಾಲಿಯಲ್ಲಿ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ ಎಂದರು.
ರ್ಯಾಲಿಯಲ್ಲಿ ಹಳದಿ ಹಾಗೂ ಕಂದು ಬಣ್ಣದಿಂದ ಕಂಗೊಳಿಸುತ್ತಿದ್ದ ಮಿನಿ ಜಾವಾ ಬೈಕ್‌ಗಳು ಎಲ್ಲರ ಗಮನ ಸೆಳೆಯಿತು. ಅಂತಾರಾಷ್ಟ್ರೀಯ ಜಾವಾ ದಿನದ ಅಂಗವಾಗಿ ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್‌ನಲ್ಲಿ 150ಕ್ಕೂ ಹೆಚ್ಚು ಜಾವಾ ಬೈಕ್ ಮಾಲಿಕರು ಜಾವಾ ದಿನವನ್ನು ಆಚರಿಸಿದರು.