Advertisement

ಉತ್ತಮ ಫಲಿತಾಂಶ ದಾಖಲೆಗಾಗಿ ಶ್ರಮಿಸಿ

03:10 PM Jul 22, 2017 | Team Udayavani |

ಚಿತ್ರದುರ್ಗ: ಶಿಕ್ಷಕರು ಶ್ರಮವಹಿಸಿ ಗುಣಾತ್ಮಕ ಬೋಧನೆ ಮಾಡುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶ ತರುವ ಮೂಲಕ ರಾಜ್ಯ ಮಟ್ಟದ ಪಟ್ಟಿಯಲ್ಲಿ ಜಿಲ್ಲೆ ಹತ್ತರ ಒಳಗೆ ಸ್ಥಾನ ಪಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಂ. ರವೀಂದ್ರ ಹೇಳಿದರು.

Advertisement

ನಗರದ ಮಹಾರಾಣಿ ಕಾಲೇಜಿನಲ್ಲಿ 2016-17ನೇ ಸಾಲಿನಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಶೇ. 100 ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಹಾಗೂ ಶೇ.100 ರಷ್ಟು ಫಲಿತಾಂಶ ತಂದುಕೊಟ್ಟ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್‌ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಜಿಲ್ಲೆಯಲ್ಲಿ ಬರ, ಬಡತನ ಇದ್ದರೂ ಇಲ್ಲಿನ ಮಕ್ಕಳು ಹೆಚ್ಚು ಪ್ರತಿಭಾವಂತರಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನಬೇಕಾಗಿದೆ. ಈ ಬಾರಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಸಾಧನೆ ಎಂಬುದು ಕೇಳವ ಒಂದು ದಿನಗಳಲ್ಲಿ ಆಗುವ ಕೆಲಸವಲ್ಲ. ಇದಕ್ಕಾಗಿ ಅನೇಕ ದಿನಗಳು, ಸುದೀರ್ಘ‌ ಸಮಯ ಬೇಕಾಗುತ್ತದೆ. ದೀರ್ಘ‌ ಕಾಲದ ಪರಿಶ್ರಮದಿಂದ ಒಂದು ದಿನ ಯಶಸ್ಸು ಲಭಿಸುತ್ತದೆ. ಆಗ ಸಿಗುವ ಆನಂದಕ್ಕೆ ಪಾರವೇ ಇಲ್ಲ. ಇಂತಹ ಸಾಧನೆ ಮಾಡಿದ ಮಕ್ಕಳು ಹಾಗೂ ಶಿಕ್ಷಕರನ್ನು ಇಲ್ಲಿ ಅಭಿನಂದಿಸುತ್ತಿರುವುದು ಸಂತಸದ ಸಂಗತಿ. ಇದರಿಂದ ಇತರರಿಗೂ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಫಲಿತಾಂಶ ಬಂದಾಗ ಶಿಕ್ಷಕರು ಬೇರೆ ಜಿಲ್ಲೆಗಳ ಜೊತೆ ಹೋಲಿಕೆ ಮಾಡಿ ನೋಡುವ ಬದಲು ಉತ್ತಮ ಫಲಿತಾಂಶಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಮಾತನಾಡಿ, ಸಮಾಜ ವಿಜ್ಞಾನ ವಿಷಯದಲ್ಲಿ ಶೇ. 100ರಷ್ಟು ಅಂಕ ಗಳಿಸುವುದು ಸುಲಭದ ಮಾತಲ್ಲ. ಇಂಥದ್ದರಲ್ಲಿ 39 ವಿದ್ಯಾರ್ಥಿಗಳು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಮಕ್ಕಳು ಹೆಚ್ಚು ಹೆಚ್ಚು ಶಿಕ್ಷಣ ಪಡೆಯುವ ಮೂಲಕ ಉತ್ತಮ ನಾಗರಿಕರಾಗಬೇಕು. ಹೆಚ್ಚಿನ ವಿದ್ಯಾವಂತರಿದ್ದಲ್ಲಿ ಅದು ದೇಶದ ಪ್ರಗತಿಗೂ
ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ರೇವಣಸಿದ್ದಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕುವಾರು ಫಲಿತಾಂಶ ನೋಡಿದಾಗ ಹೊಸದುರ್ಗ ಪ್ರಥಮ ಹಾಗೂ ಹೊಳಲ್ಕೆರೆ ದ್ವಿತೀಯ ಸ್ಥಾನದಲ್ಲಿವೆ. ರಾಜ್ಯದಲ್ಲಿ ಚಿತ್ರದುರ್ಗಕ್ಕೆ 19ನೇ ಸ್ಥಾನ ಲಭಿಸಿದೆ. ಶೇ. 72 ರಷ್ಟು ಪ್ರಮಾಣದ ಫಲಿತಾಂಶ ಪಡೆಯಲಾಗಿದೆ. ಈ ಬಾರಿ ಇನ್ನೂ ಉತ್ತಮ ಸ್ಥಾನದಲ್ಲಿ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹಾಗಾಗಿ ಇಪ್ಪತ್ತು ಅಂಶಗಳನ್ನು ಆಧರಿಸಿ ಬೆಳಕು ಎಂಬ ಪುಸ್ತಕ ಹೊರತರಲಾಗಿದೆ ಎಂದು ತಿಳಿಸಿದರು. 

Advertisement

ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ. ಬೋರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಯಟ್‌ ಉಪಪ್ರಾಚಾರ್ಯ ಎನ್‌.ಎಂ. ರಮೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರರೆಡ್ಡಿ, ಶಿಕ್ಷಣಾಧಿಕಾರಿಗಳಾದ ಸಿ.ಎಂ. ತಿಪ್ಪೇಸ್ವಾಮಿ, ಎಸ್‌.ಕೆ.ಬಿ. ಪ್ರಸಾದ್‌, ಕೆಂಗಪ್ಪ.
ಸಮಾಜ ವಿಜ್ಞಾನ ಕ್ಲಬ್‌ ಜಿಲ್ಲಾಧ್ಯಕ್ಷ ವೀರಭದ್ರ ಸ್ವಾಮಿ, ಕಾರ್ಯದರ್ಶಿ ತಿಪ್ಪೇಸ್ವಾಮಿ ಮತ್ತಿತರು ಇದ್ದರು.ಉಪನ್ಯಾಸಕ ಮರಿಗೌಡ ಉಪನ್ಯಾಸ ನೀಡಿದರು.

ವಿಜ್ಞಾನ ವಿಷಯ ಪರಿವೀಕ್ಷಕ ಆರ್‌.ನಾಗರಾಜ್‌ ಸ್ವಾಗತಿಸಿದರು. ಸಮಾಜ ವಿಜ್ಞಾನ ವಿಷಯದಲ್ಲಿ ಶೇ. 100 ಅಂಕ ಗಳಿಸಿದ 39 ವಿದ್ಯಾರ್ಥಿಗಳು ಹಾಗೂಶೇ.100 ರಷ್ಟು ಫಲಿತಾಂಶ ನೀಡಿದ 89 ಶಿಕ್ಷಕರನ್ನು ಅಭಿನಂದಿಸಲಾಯಿತು.

ಸಾಧನೆ ಎಂಬುದು ಕೇಳವ ಒಂದು ದಿನಗಳಲ್ಲಿ ಆಗುವ ಕೆಲಸವಲ್ಲ. ಇದಕ್ಕಾಗಿ ಅನೇಕ ದಿನಗಳು, ಸುದೀರ್ಘ‌ ಸಮಯ ಬೇಕಾಗುತ್ತದೆ. ದೀರ್ಘ‌ ಕಾಲದಪರಿಶ್ರಮದಿಂದ ಒಂದು ದಿನ ಯಶಸ್ಸು ಲಭಿಸುತ್ತದೆ. ಆಗ ಸಿಗುವ ಆನಂದಕ್ಕೆ ಪಾರವೇ ಇಲ್ಲ.
ಪಿ.ಎಂ. ರವೀಂದ್ರ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next