ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಮೊದಲಿಂದಲೂ ತಮ್ಮದೇ ಆದ ಪ್ರಭಾವ ಹಾಗೂ ಜಿಲ್ಲಾ ರಾಜಕಾರಣದ ಮೇಲೆ ಬಿಗಿ ಹಿಡಿತ ಹೊಂದಿರುವ ಜಾರಕಿಹೊಳಿ ಸಹೋದರರ ಕೋಟೆಯಲ್ಲಿ ನಿಜವಾಗಿಯೂ ಬಿರುಕು ಕಾಣಿಸಿಕೊಂಡಿದೆಯೇ..?
ಇಂತಹ ಒಂದು ಗಂಭೀರ ಚರ್ಚೆ ಹಾಗೂ ಅನುಮಾನ ಜಿಲ್ಲಾ ರಾಜಕಾರಣದಲ್ಲಿ ಆರಂಭವಾಗಿದೆ. ಲೋಕಸಭೆ ಚುನಾವಣೆಯ ಅಂತಿಮ ಘಟ್ಟದಲ್ಲಿ ಸಹೋದರರ ಪರಸ್ಪರ ವಾಕ್ಸಮರ, ಏಕವಚನದಲ್ಲೇ ಟೀಕೆ, ಆರೋಪಗಳು ಈ ರೀತಿಯ ಪ್ರಶ್ನೆ ಉದ್ಭವಿಸಲು ಕಾರಣವಾಗಿವೆ.
ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡಾಗಿನಿಂದ ಕಾಂಗ್ರೆಸ್ ನಾಯಕರ ಬಗ್ಗೆ ಮುನಿಸಿಕೊಂಡೇ ಇರುವ ರಮೇಶ ಜಾರಕಿಹೊಳಿ ಕಳೆದ ಕೆಲವು ದಿನಗಳಿಂದ ತಮ್ಮ ಮೌನ ಮುರಿದು ಸಹೋದರ ಸತೀಶ ಮೇಲೆ ನೇರವಾಗಿ ಮುಗಿಬಿದ್ದಿರುವುದು ಹತ್ತಾರು ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ. ಸತೀಶ ಒಬ್ಬ ಮೋಸಗಾರ ಎಂದು ಹೇಳುವ ಮೂಲಕ ತಮ್ಮ ನಡುವಿನ ಸಂಬಂಧ ಹಳಸಿದೆ ಎಂಬ ಸುಳಿವು ಸಹ ನೀಡಿದ್ದಾರೆ
ಕಲ್ಪನೆಗೆ ಮೀರಿದ ವಾಕ್ಸಮರ: ಕಳೆದ ಎರಡು ದಿನಗಳಿಂದ ಕೇಳಿಬಂದ ವ್ಯಕ್ತಿಗತ ಹೇಳಿಕೆಗಳು ಯಾರ ಊಹೆಗೂ ನಿಲುಕದ ವಿಚಾರ. ಈ ಹಿಂದೆಯೂ ಟೀಕೆಗಳು ಕೇಳುತ್ತಿದ್ದವು. ಸಹೋದರರು ಪರಸ್ಪರ ಜಗಳ ಮಾಡುತ್ತಿದ್ದರು. ಆದರೆ ಅದಾವುದೂ ಕುಟುಂಬದ ವ್ಯಾಪ್ತಿ ದಾಟಿ ಬಂದಿರಲಿಲ್ಲ. ಎಲ್ಲವೂ
ಪರಿಮಿತಿಯಲ್ಲೇ ಇರುತ್ತಿದ್ದವು. ಆದರೆ ಈಗ ಇಬ್ಬರೂ ಸಹೋದರರು ಈ ಮಿತಿಯ ಗೆರೆ ದಾಟಿ ಹೊರಬಂದಿದ್ದಾರೆ. ಇದನ್ನು ಊಹಿಸುವುದೂ ಕಷ್ಟ. ನಮ್ಮ ಕಲ್ಪನೆಗೆ ಮೀರಿದ ವಿಚಾರ ಎಂಬುದು ಅವರನ್ನು ಹತ್ತಿರದಿಂದ ನೋಡಿರುವ ಜಿಲ್ಲೆಯ ರಾಜಕೀಯ ಮುಖಂಡರ ಹೇಳಿಕೆ.
Advertisement
ಸಹೋದರರ ಈ ಪರಸ್ಪರ ಆರೋಪ ಪ್ರತ್ಯಾರೋಪ ಸಮ್ಮಿಶ್ರ ಸರಕಾರದ ಬುಡಕ್ಕೇ ಬಂದಿರುವುದರಿಂದ ಸಹಜವಾಗಿಯೇ ಎಲ್ಲರ ಕಣ್ಣು ಈ ಕುಟುಂಬದ ಮೇಲೆ ಕೇಂದ್ರೀಕೃತವಾಗಿದೆ. ರಮೇಶ ಜಾರಕಿಹೊಳಿ ಅವರ ನಿರ್ಧಾರ ಜಿಲ್ಲೆಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂಬ ಮಾತುಗಳು ಕೇಳಿಬಂದಿವೆ.
Related Articles
Advertisement
ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಸಹೋದರರ ನಡೆ ಯಾವತ್ತೂ ಕುತೂಹಲ ಮೂಡಿಸುವಂಥದು. ಪ್ರಭಾವಿಗಳಾಗಿರುವುದರಿಂದ ಜನರಿಗೂ ಅವರ ರಾಜಕೀಯ ಚಟುವಟಿಕೆ, ನಿರ್ಧಾರದ ಮೇಲೆ ಬಹಳ ಆಸಕ್ತಿ. ಆದರೆ ಕಳೆದ ಕೆಲ ದಿನಗಳಿಂದ ನಡೆದ ಬೆಳವಣಿಗೆ ಅವರ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಗೊಂದಲ ಉಂಟುಮಾಡಿದೆ. ಯಾರ ಪರವಾಗಿ ನಿಲ್ಲಬೇಕು ಎಂಬ ಜಿಜ್ಞಾಸೆ ಮೂಡಿಸಿದೆ.
ಜಾರಕಿಹೊಳಿ ಸಹೋದರರ ನಡುವೆ ನಡೆದಿರುವ ವಾಕ್ಸಮರ ಸರಕಾರದ ಮಟ್ಟದಲ್ಲಿ ಪರಿಣಾಮ ಬೀರುವ ಬೆಳವಣಿಗೆ ಅಲ್ಲ. ಇದು ಅವರ ಕುಟುಂಬದ ಸಮಸ್ಯೆ. ಜಾರಕಿಹೊಳಿ ಎಂಬ ಕುಟುಂಬದ ಮೇಲೆ ಒಟ್ಟಾರೆ ಅಧಿಪತ್ಯ ಸಾಧಿಸಲು ರಮೇಶ ಹಾಗೂ ಸತೀಶ ಅವರ ನಡುವೆ ಪೈಪೋಟಿ ನಡೆದಿದೆ. ಅದಕ್ಕೆ ಅಂಬಿರಾವ್ ಎಂಬ ಮೂರನೇ ವ್ಯಕ್ತಿ ಅಡ್ಡಿಯಾಗಿರುವುದರಿಂದ ಈ ಎಲ್ಲ ಬೆಳವಣಿಗೆ ನಡೆದಿದೆ ಎಂಬುದು ಅವರ ಆಪ್ತರ ಹೇಳಿಕೆ. ಈ ಭಿನ್ನಮತ ಕ್ಷಣಿಕ. ಇದೆಲ್ಲಾ ನಡೆದಿರುವುದು ಅಧಿಕಾರದ ಆಸೆಗಾಗಿ. ಲಖನ್‌ಗೆ ಒಂದು ಸ್ಥಳಾವಕಾಶ ನೀಡಲು ವಿಧಾನಸಭೆ ಚುನಾವಣೆಯವರೆಗೆ ಇದು ಮುಂದುವರಿಯುತ್ತದೆ ಎಂಬುದು ಮೊದಲಿಂದಲೂ ಜಾರಕಿಹೊಳಿ ಸಹೋದರರನ್ನು ಬಹಳ ಹತ್ತಿರದಿಂದ ನೋಡಿರುವ ಆಪ್ತರು ಹಾಗೂ ಜಿಲ್ಲಾ ನಾಯಕರ ಅಭಿಪ್ರಾಯ.
•ಕೇಶವ ಆದಿ