Advertisement
ಬೆಳ್ಳಿಹೆಜ್ಜೆಯಲ್ಲಿ ಅಂಬಿ ಮಾತುಗಳ ಮೆಲುಕು…: “ಇಂದು ಕನ್ನಡದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ಹೇಳಲಾಗುತ್ತಿದೆ. ಇದು ಇಂದಿನದ್ದಲ್ಲ. ಡಾ.ರಾಜ್‌ಕುಮಾರ್ ಅವರ ಕಾಲದಿಂದಲೂ ಇರುವ ಸಮಸ್ಯೆ. ಕೆಂಪೇಗೌಡ ರಸ್ತೆ ಬೆಂಗಳೂರಿನ ಹೃದಯ ಭಾಗ. ಅಲ್ಲಿ ಸಾಕಷ್ಟು ಚಿತ್ರಮಂದಿರಗಳಿದ್ದವು. ಅಲ್ಲೆಲ್ಲಾ ಪರಭಾಷಾ ಚಿತ್ರಗಳೇ ರಾರಾಜಿಸುತ್ತಿದ್ದವು. ಇದರ ನಡುವೆಯೂ ಕನ್ನಡ ಚಿತ್ರಗಳು ಗೆಲುವು ಕಾಣುತ್ತಿದ್ದವು. ಈಗಲೂ ಪರಭಾಷೆ ಚಿತ್ರಗಳ ಹಾವಳಿ ಮುಂದುವರೆದಿದೆ.
Related Articles
Advertisement
ವಿಷ್ಣುಗೆ ಒಳ್ಳೇ ಭವಿಷ್ಯವಿದೆ, ನನಗೆಲ್ಲಿ?: ವಿಷ್ಣು ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವನು ತುಂಬಾ ಹ್ಯೂಮರಸ್ ವ್ಯಕ್ತಿ. ಯಾವಾಗಲೂ ಜಾಲಿಯಾಗಿಯೇ ಇರುತ್ತಿದ್ದ. ನಾನು ವಿಲನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರೆ, ಅವನು ಹೀರೋ ಆಗಿ ಎಂಟ್ರಿಕೊಟ್ಟ. ಆದರೆ, ನಮ್ಮಿಬ್ಬರ ನಡುವೆ ವಿಲನ್,ಹೀರೋ ಎಂಬ ಮನೋಭಾವ ಇಲ್ಲದೆ ಒಳ್ಳೆಯ ಗೆಳೆತನ ಬೆಳೆಯಿತು.
ನಾನು ಚಿತ್ರರಂಗಕ್ಕೆ ಯಾವುದೇ ಗುರಿ ಇಟ್ಟುಕೊಂಡು ಬಂದವನಲ್ಲ. “ನಾಗರಹಾವು’ ಚಿತ್ರೀಕರಣ ನಡೆಯುವ ವೇಳೆ ರಾಜೇಂದ್ರಸಿಂಗ್‌ಬಾಬು ಸಹೋದರ ಸಂಗ್ರಾಮ್ ಸಿಂಗ್ ಕಣಗಾಲ್ ಬಳಿ ಹೋಗು ಅವಕಾಶ ಇದೆ ಎಂದಿದ್ದರು. ಆದರೆ, ನಾನು ಅವರ ಮಾತು ಕೇಳಿರಲಿಲ್ಲ. ಕೊನಗೆ ಅವರ ಒತ್ತಡಕ್ಕೆ ಮಣಿದು ಹೋದೆ. ಅದೃಷ್ಟ ನನ್ನ ಪಾಲಿಗಿತ್ತು. ಆಯ್ಕೆಯಾದೆ.
ಕಣಗಾಲ್ ಅವರೊಂದಿಗೆ ಒಮ್ಮೆ ನಾನು, ವಿಷ್ಣು ಊಟಕ್ಕೆ ಹೋಗಿದ್ದಾಗ, “ನಿಮ್ಮಿಬ್ಬರಿಗೂ ಒಳ್ಳೆಯ ಭವಿಷ್ಯವಿದೆ. ನಿಮ್ಮ ನಡವಳಿಕೆ ತಿದ್ದಿಕೊಳ್ಳಿ’ ಎಂದಿದ್ದರು. ಆಗ ನಾನು, “ವಿಷ್ಣು ಹೀರೋ ಆಗಿದ್ದಾನೆ. ಅವನಿಗೆ ಒಳ್ಳೆಯ ಭವಿಷ್ಯ ಇದೆ. ನಾನು ವಿಲನ್ ನನಗೆಲ್ಲಿ’? ಎಂದಿದ್ದೆ. ನನ್ನ ಮಾತು ಕೇಳಿದ ಪುಟ್ಟಣ್ಣ, ನೋಡ್ತಾ ಇರು, ಮುಂದೊಂದು ದಿನ ನೀನೂ ಎತ್ತರಕ್ಕೆ ಬೆಳೆಯುತ್ತೀಯಾ’ ಎಂದು ಹೇಳಿದ್ದರು. ಆ ಮಾತು ನಿಜವಾಗಿದೆ ಎಂದು ಆ ದಿನಗಳನ್ನು ಮೆಲುಕು ಹಾಕಿದ್ದರು ಆಂಬರೀಶ್.
ರಾಜಕೀಯ ಎಂಟ್ರಿ ಆಕಸ್ಮಿಕ: ರಾಜಕೀಯ ಕ್ಷೇತ್ರಕ್ಕೂ ನನ್ನದು ಆಕಸ್ಮಿಕ ಎಂಟ್ರಿ. ಚುನಾವಣೆಯಲ್ಲಿ ಗೆದ್ದೆ, ಸಚಿವನೂ ಆದೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ರಾಜಿನಾಮೆ ನೀಡಿದೆ. ಕೆಲವರು ರಾಜೀನಾಮೆ ನೀಡಿದ್ದು ಸರಿ ಅಲ್ಲ ಎಂದರು, ಇನ್ನೂ ಕೆಲವರು ಸರಿ ಎಂದರು. ಎಲ್ಲಾ ರಂಗದಲ್ಲೂ ಗೊಂದಲಗಳು ಇದ್ದದ್ದೇ, ಆದರೆ, ಒಗ್ಗಟ್ಟಾಗಿದ್ದಾಗ ಮಾತ್ರ ಅದನ್ನು ಪರಿಹರಿಸಲು ಸಾಧ್ಯ.
ರಾಜ್ಯ ಸರ್ಕಾರ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಹಕಾರ ನೀಡಿದೆ. ಯಾವಾಗಲೂ ಚಿತ್ರರಂಗದ ಜತೆಯಲ್ಲೇ ಇರಲು ಸಾಧ್ಯವಿಲ್ಲ. ಆದರೆ, ನಾವು ಒಳ್ಳೆಯ ಚಿತ್ರಗಳನ್ನು ಕೊಡುವ ಮೂಲಕ ಚಿತ್ರರಂಗವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು. ಚಿತ್ರರಂಗದಲ್ಲಿ ಆಗಾಗ ಸಣ್ಣಪುಟ್ಟ ವಿವಾದಗಳು ಸೃಷ್ಟಿಯಾಗುತ್ತವೆ.
ಅದನ್ನು ಕೂಲಂಕುಷವಾಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ವಿನಾಕಾರಣ, ಅದನ್ನು ಬೆಳೆಸಿಕೊಂಡು ಹೋದರೆ, ನಮಗೇ ನಷ್ಟ ಎಂದು ಸೂಕ್ಷ್ಮವಾಗಿ ಹೇಳುವ ಮೂಲಕ, ಲೈಫ್ನಲ್ಲಿ ಒಳ್ಳೆಯ ಉದ್ದೇಶ ಇಟ್ಟುಕೊಳ್ಳಬೇಕು. ನಾನು ಈವರೆಗೆ ಒಳ್ಳೆಯ ಗೆಳೆಯರನ್ನು ಸಂಪಾದಿಸಿದ್ದೇನೆ. ಅಭಿಮಾನಿಗಳನ್ನು ಕಂಡಿದ್ದೇನೆ. ಇದಕ್ಕಿಂತ ಪುಣ್ಯದ ಕೆಲಸ ಬೇರೇನೂ ಇಲ್ಲ