ನ್ಯೂಯಾರ್ಕ್: ಜಗತ್ತಿನಾದ್ಯಂತ ಕೋವಿಡ್ -19 ಅಟ್ಟಹಾಸ ಮುಂದುವರೆದಿದ್ದು ಸರ್ಚ್ ಇಂಜಿನ್ ದೈತ್ಯ ಗೂಗಲ್ , ಡೂಡಲ್ ಮೂಲಕ ಜನರಿಗೆ ವಿಶೇಷ ಸಂದೇಶವೊಂದನ್ನು ನೀಡಿದೆ. ಇಂದು ಬೆಳಗ್ಗೆ ಬಿಡುಗಡೆಯಾದ ಡೂಡಲ್ ನಲ್ಲಿ“ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿರಿ, ಸುರಕ್ಷಿತರಾಗಿರಿ’ ಎಂಬ ಅಂಶವನ್ನು ಒತ್ತಿ ಹೇಳಿದೆ.
ಈಗಾಗಲೇ ವಿಶ್ವದಾದ್ಯಂತ ಈ ಮಾರಕ ವೈರಸ್ ಗೆ 53,000ಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದು, 10 ಲಕ್ಷಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಜೀ ನ್ಯೂಸ್ ವರದಿ ಮಾಡಿದೆ.
ಮನೆಯಲ್ಲಿದ್ದುಕೊಂಡೇ ಪುಸ್ತಕ ಓದುವುದು, ಹಾಡುಗಾರಿಕೆ, ಗೇಮಿಂಗ್, ಸ್ನೇಹಿತರಿಗೆ ಕರೆ ಮಾಡುವುದು ಮುಂತಾದ ಕ್ರಮಗಳನ್ನು ಅನುಸರಿಸಿ ಎಂಬ ಮಾಹಿತಿಯನ್ನು ಗೂಗಲ್ ಡೂಡಲ್ ನಲ್ಲಿ ಕೇಂದ್ರಿಕರಿಸಲಾಗಿದೆ.
ಸ್ವಯಂ ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಸಮಯದಲ್ಲಿ ಅತ್ಯಗತ್ಯವಾಗಿದ್ದು, ಇವೆರಡೆ ಈ ಮಾರಕ ವೈರಸ್ ನಿಂದ ಪಾರಾಗಲು ಇರುವ ಅಸ್ತ್ರ ಎಂದು ಹೇಳಲಾಗಿದೆ. ಅ ಮೂಲಕ ಸಾರ್ವಜನಿಕವಾಗಿ ಓಡಾಡುವುದು, ಗುಂಪು ಸೇರುವುದು ಮುಂತಾದವುಗಳನ್ನು ಕಡಿಮೆ ಮಾಡಿ ಮನೆಯಲ್ಲಿರಿ ಎಂದು ಡೂಡಲ್ ಮೂಲಕ ಮನವಿ ಮಾಡಲಾಗಿದೆ
175 ದೇಶಗಳಲ್ಲಿ ಈ ವೈರಸ್ ನಿಂದ ಜನರು ಆತಂಕಕ್ಕೀಡಾಗಿದ್ದು, ಅಮೆರಿಕಾದಲ್ಲಿ ಅತೀ ಹೆಚ್ಚು ಸೋಂಕಿತರಿದ್ದಾರೆ.