ಬೆಂಗಳೂರು: ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರಿಕೆ ಕುರಿತು ಗೃಹ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜತೆ ಸಮಾಲೋಚನೆ ನಡೆಸಿದರು. ಮಾತುಕತೆ ವೇಳೆ ಮೇಯರ್ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಅದು ಸಾಧ್ಯವಾಗದಿದ್ದರೆ ಉಪ ಮೇಯರ್ ಜತೆ ಐದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜತೆಗೆ, ಎರಡು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಾಲಿಕೆ ಸದಸ್ಯರ ವಿಚಾರದಲ್ಲಿ ತಾರತಮ್ಯ ಎಸಗಿದ್ದಾರೆ. ಪ್ರಮುಖ ನಿರ್ಣಯ ಸಂದರ್ಭದಲ್ಲಿ ಜೆಡಿಎಸ್ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.
ರಾಮಲಿಂಗಾರೆಡ್ಡಿಯವರು, ಸಮಸ್ಯೆ ಸರಿಪಡಿಸುವ ಭರವಸೆ ನೀಡಿ, ಕಾಂಗ್ರೆಸ್ ಹೆಚ್ಚು ಸದಸ್ಯರನ್ನು ಹೊಂದಿರುವುದರಿಂದ ಮೇಯರ್ ಸ್ಥಾನ ಬಿಟ್ಟುಕೊಡಲು ಕಷ್ಟ ಎಂದು ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ. ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಕೆಗೆ ಬಹುತೇಕ ಒಪ್ಪಿಗೆ ಸೂಚಿಸಿರುವ ಕುಮಾರಸ್ವಾಮಿ, ಐದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜತೆ ಮಾತನಾಡಿ ತಿಳಿಸುವಂತೆ ಹೇಳಿದರು.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮೈತ್ರಿ ಸಂಬಂಧ ಕುಮಾರಸ್ವಾಮಿ ಜತೆ ಚರ್ಚಿಸಿದ್ದೇನೆ. ಅವರು ತಮ್ಮ ವಿಚಾರ ತಿಳಿಸಿದ್ದಾರೆ. ಮಾತುಕತೆ ಕುರಿತ ಮಾಹಿತಿಯನ್ನು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ನೀಡಲಿದ್ದೇನೆ. ಒಟ್ಟಾರೆ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯುವುದು ಖಚಿತ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಮೈತ್ರಿ ಕುರಿತು ಚರ್ಚೆ ವೇಳೆ ಕೆಲವು ಬೇಡಿಕೆಗಳನ್ನು ರಾಮಲಿಂಗಾರೆಡ್ಡಿಯವರ ಬಳಿ ಇಟ್ಟಿದ್ದೇವೆ. ಮೇಯರ್ ಸ್ಥಾನ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿ ಐದು ಸಮಿತಿಗಳ ಅಧ್ಯಕ್ಷ ಸ್ಥಅನ ಕೇಳಿದ್ದೇವೆ. ಸ್ಥಾಯಿ ಸಮಿತಿ ವಿಚಾರವಾಗಿ ರಾಮಲಿಂಗಾರೆಡ್ಡಿ ಒಪ್ಪಿಕೊಂಡಿದ್ದು ಮೇಯರ್ ಸ್ಥಾನದ ಬಗ್ಗೆ ಪಕ್ಷದ ನಾಯಕರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಅಲ್ಲಿವರೆಗೂ ನಾವು ಕಾಯುತ್ತೇವೆ ಎಂದು ಹೇಳಿದರು.
ಸಮಿತಿ ಹೊಣೆಗೆ ಹೆಚ್ಚಿದ ಪೈಪೋಟಿ: ಈ ಮಧ್ಯೆ, ಜೆಡಿಎಸ್‌ನಲ್ಲಿ ಉಪ ಮೇಯರ್, ಸ್ಥಾಯಿ ಸಮಿತಿಗಳ ಅಧ್ಯಕ್ಷಗಿರಿಗೆ ಪೈಪೋಟಿ ಹೆಚ್ಚಾಗಿದೆ. ಉಪ ಮೇಯರ್ ಸ್ಥಾನಕ್ಕಾಗಿ ನೇತ್ರಾ ನಾರಾಯಣ್, ರುಮಿಳಾ ನಡುವೆ ಪೈಪೋಟಿಯಿದೆ. ಪ್ರಮುಖ ಸ್ಥಾಯಿ ಸಮಿತಿ ಅಧ್ಯಕ್ಷಗಿರಿಗೆ ದೇವದಾಸ್, ಇಮ್ರಾನ್ ಪಾಶಾ, ಭದ್ರೇಗೌಡ ಬೇಡಿಕೆ ಇಟ್ಟಿದ್ದಾರೆ.
ಹಿಂದೊಮ್ಮೆ ತಮಗೆ ಉಪ ಮೇಯರ್ ಸ್ಥಾನ ತಪ್ಪಿದ್ದು, ಮತ್ತೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ಎಂಬ ಬೇಡಿಕೆ ಇಟ್ಟಿರುವ ಪಾಷಾ, ಮುಖಂಡರು ಬಯಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿದ ಪಾಷಾ ಈ ಕುರಿತು ಮನವಿ ಕೂಡ ಮಾಡಿದ್ದಾರೆ ಎನ್ನಲಾಗಿದೆ.