ಭಾಲ್ಕಿ: ಇಂದಿನ ಯುವಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅವುಗಳಿಂದ ದೂರವಿದ್ದು ಯುವಕರು ನೆಮ್ಮದಿ ಜೀವನ ನಡೆಸಬೇಕು ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ಚಿಂಚೋಳಿ ತಾಲೂಕಿನ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.
ತಾಲೂಕಿನ ಚಿಕಲಚಂದಾ ಗ್ರಾಮದ ಮಹಾದೇವ ದೇವಸ್ಥಾನ ಸಮಿತಿ ವತಿಯಿಂದ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಭೂಮಿ ಶರಣರ ಸಂತರ ನಾಡಾಗಿದೆ. ಇಂದಿನ ಯುವಕರು ಶರಣರ, ಸಂತರ ಜೀವನದ ಬಗ್ಗೆ ತಿಳಿದುಕೊಂಡು ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಂಸಾರದಲ್ಲಿ ಇದ್ದುಕೊಂಡು ಗುರು-ಹಿರಿಯರ ಸೇವೆ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಅಲ್ಲದೇ ಧರ್ಮದ ಮಾರ್ಗದಲ್ಲಿ ನಡೆದು ಧರ್ಮವಂತರಾಗಿ ಬಾಳಬೇಕು. ಬಸವಾದಿ ಶರಣರ ವಚನಗಳು ಹೆಚ್ಚು ಮೌಲಿಕ ಹಾಗೂ ಅರ್ಥಗರ್ಭಿತವಾಗಿವೆ. ಎಲ್ಲರೂ ವಚನಗಳನ್ನು ಓದಿ, ಅವುಗಳ ಅರ್ಥ ತಿಳಿದು ಜೀವನ ಮಾರ್ಗ ಕಂಡುಕೊಳ್ಳಬೇಕು. ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಿ ಅವರಿಗೆ ನೋವಿಸದಂತೆ ನಡೆದುಕೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಗ್ರಾಮದ ಬಸ್ ನಿಲ್ದಾಣದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಮಹಾದೇವ ಮಂದಿರಕ್ಕೆ ಕರೆತರಲಾಯಿತು. ಪ್ರಮುಖರಾದ ನಾಗಯ್ಯ ಸ್ವಾಮಿ, ಉಮಾಕಾಂತ ಮೊರೆ, ಅಂಬದಾಸ ಮೊರೆ, ಪ್ರವೀಣ ಕಂದಗೊಳ, ಹಣಮಂತ ಬೀರಗೊಂಡ, ಶರಣಪ್ಪ ಹಜರೀಗೆ, ಶರಣಪ್ಪ ಬೋರೆ, ಚಂದ್ರಕಾಂತ ಬೀರಗೊಂಡೆ, ಶಶಿಧರ ಸೀತಾ ಸಿದ್ದೇಶ್ವರ ಇದ್ದರು.