Advertisement

ಎಕ್ಕಾರು ಪಂಚಾಯತ್‌ ಸ್ಥಿತಿ ; ಗ್ರಾಪಂ ಕಟ್ಟಡವೇ ಸೋರಿಕೆ, ಪ್ಲಾಸಿಕ್‌ ಹೊದಿಕೆ!

04:42 PM Jul 04, 2024 | Team Udayavani |

ಬಜಪೆ: ಮಳೆ ಗಾಲದ ಸಂದರ್ಭದಲ್ಲಿ ಎದು ರಾಗುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಸಾಂತ್ವನ ಹೇಳುವುದು, ಪರಿಹಾರ ನೀಡುವ ಕೆಲಸ ಮಾಡುವುದು ಗ್ರಾಮ  ಪಂಚಾಯತ್‌. ಆದರೆ ಮಳೆ ಪಂಚಾಯತ್‌ ಕಟ್ಟಡವನ್ನೂ ಬಿಡುವುದಿಲ್ಲ. ಇದೇ ಕಾರಣದಿಂದಾಗಿ ಎಕ್ಕಾರು ಗ್ರಾಮ ಪಂಚಾಯತ್‌ ಕಟ್ಟಡ ಕಷ್ಟಕ್ಕೆ ಸಿಲುಕಿದೆ.

Advertisement

ಎಕ್ಕಾರು ಗ್ರಾಮ ಪಂಚಾಯತ್‌ ಕಟ್ಟಡ ಮಳೆಗೆ ಸೋರುತ್ತಿದ್ದು, ಇದನ್ನು ತಡೆಯಲು ಇಲ್ಲಿ ಚಾವಣಿಗೆ ಟರ್ಪಾಲು ಹೊದಿಸಲಾಗಿದೆ. ಎಕ್ಕಾರು ಪಂಚಾಯತ್‌ ಕಟ್ಟಡ ಸುಮಾರು 30 ವರ್ಷಗಳ ಹಿಂದಿನ ಆರ್‌ಸಿಸಿ ಕಟ್ಟಡವಾಗಿದೆ. ಈ ಕಟ್ಟಡದಲ್ಲಿಯೇ ಸಾಮಾನ್ಯ ಸಭೆ, ಗ್ರಾಮ ಸಭೆಗಳು ಮಾತ್ರವಲ್ಲ, ಬೇರೆ ಕಾರ್ಯಕ್ರಮಗಳು ನಡೆಯುತ್ತವೆ. ಅದರೆ ಸುಮಾರು 6 ವರ್ಷಗಳಿಂದ ಈ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ. ಕಟ್ಟಡವೂ ಈಗ ಶಿಥಿಲಗೊಂಡಿದೆ.ಮಳೆ ಬಂದಾಗ ಕಟ್ಟಡದಲ್ಲಿನ ಬಿರುಕುಗಳ ಮೂಲಕ ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ಪಂಚಾಯತ್‌ನ ಕಾರ್ಯ ನಿರ್ವಹಣೆಗೆ ತೊಡಕಾಗುತ್ತಿದೆ.

50 ಸಾವಿರ ಖರ್ಚಾದರೂ ಸೋರಿಕೆ ನಿಲ್ಲಿಸಲಾಗಲಿಲ್ಲ!
ಈ ಕಟ್ಟಡ ಸೋರುತ್ತಿರುವುದರಿಂದ ವರ್ಷ ವರ್ಷ ಪಂಚಾಯತ್‌ಗೆ ಸಮಸ್ಯೆಯಾಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಸುಮಾರು 50 ಸಾವಿರ ಅಂದಾಜು ವೆಚ್ಚದಲ್ಲಿ ಆರ್‌ಸಿಸಿ ಕಟ್ಟಡ ಮೇಲೆ ಕಾಂಕ್ರೀಟಿನ ಲೇಪನ ಮಾಡಲಾಗಿತ್ತು ಇದರಿಂದಲೂ ಇದು ನೀರು
ಸೋರಿಕೆಯನ್ನು ತಡೆಯಲಾಗಲಿಲ್ಲ.

ಎಲ್ಲ ಕೆಲಸ ಇದೇ ಕಟ್ಟಡದಲ್ಲಿ
ಪಂಚಾಯತ್‌ನ ಸಾಮಾನ್ಯ ಸಭೆ ಈಗಲೂ ಇದೇ ಕಟ್ಟಡದಲ್ಲಿ ನಡೆಯುತ್ತಿದೆ. ಕಂಪ್ಯೂಟರ್‌ ಕೊಠಡಿ ಇದರಲ್ಲಿಯೇ ಇದೆ. ಗ್ರಾಮ ಕರಣಿಕರ (ಗ್ರಾಮ ಆಡಳಿತಾಧಿಕಾರಿ) ಕಚೇರಿ ಇದೆ. ಜತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯೂ ಇದೆ. ಗ್ರಾಮ ಕರಣಿಕರ ಕಚೇರಿಯಲ್ಲೂ ಮಳೆಯ ನೀರು ಸೋರಿಕೆಯಾಗುತ್ತಿದೆ.

ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಇಲ್ಲಿನ ಫ್ಯಾನ್‌ನ್ನು ಕಳಚಿ ಇಡಲಾಗಿದೆ. ಫೈಲುಗಳನ್ನು ಇಡಲು ಬೇರೆಯೇ ಕವಾಟು
ಮಾಡಲಾಗಿದೆ.

Advertisement

ಕಳೆದ ಬಾರಿ ಕಂಪ್ಯೂಟರ್‌ಗೆ ಹಾನಿ
ಕಳೆದ ಮಳೆಗಾಲದಲ್ಲಿ ನೀರು ಸೋರಿಕೆಯಿಂದ ಪಂಚಾಯತ್‌ನ ಕಂಪ್ಯೂಟರ್‌ ಮತ್ತು ಫ್ಯಾನ್‌ ಗ ಳಿಗೆ ಹಾನಿಯಾಗಿತ್ತು. ಈ ಬಾರಿ ಪಂಚಾಯತ್‌ ಕೆಲಸ ಕಾರ್ಯಕ್ಕೆ ತೊಂದರೆಯಾಗದಂತೆ ತುರ್ತು ರಕ್ಷಣೆಗಾಗಿ ಕಟ್ಟಡದ ಮೇಲೆ ಟರ್ಪಾಲು ಹೊದಿಕೆ ಹಾಕಲಾಗಿದೆ.

ಹೊಸ ಕಟ್ಟಡ ನಿರ್ಮಾಣ ಯೋಜನೆ ಸುಮಾರು 1 ಕೋಟಿ ರೂಪಾಯಿ ಅನುದಾನದಲ್ಲಿ ಹೊಸ ಕಟ್ಟಡ ರಚನೆಗೆ ಯೋಜನೆಯನ್ನು ಮಾಡಲಾಗಿದೆ. ಒಂದು ಅಂತಸ್ತಿನ ಕಟ್ಟಡ ಇದರಲ್ಲಿ ಪಂಚಾಯತ್‌ ಕಚೇರಿ, ಗ್ರಾಮ ಕರಣಿಕರ ಕಚೇರಿ, ಸಭಾಭವನ ಹಾಗೂ ಇನ್ನಿತರ ಕಚೇರಿಗಳಿಗೆ ಅವಕಾಶವಿದೆ. ಈಗಾಗಲೇ ಎಂಆರ್‌ಪಿಎಲ್‌, ಶಾಸಕರು, ಸಂಸದರಿಗೆ ಮನವಿ
ಮಾಡಲಾಗಿದೆ.
*ಪ್ರವೀಣ್‌ ಆಚಾರ್ಯ,
ಅಧ್ಯಕ್ಷ, ಗ್ರಾ.ಪಂ. ಎಕ್ಕಾರು

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next