ಬಂಟ್ವಾಳ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ಪರಿಣಾಮ ಕಾರ್ಮಿಕ ವರ್ಗ ಐತಿಹಾಸಿಕ ಹೋರಾಟದಿಂದ ಗಳಿಸಿದಂತಹ ಕಾನೂನುಬದ್ಧ ಸೌಲಭ್ಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ. ಶೇಖರ್ ತಿಳಿಸಿದರು.
ಮೇ 1ರಂದು ಬಂಟ್ವಾಳದ ಎ. ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಜರಗಿದ ಮೇ ದಿನಾಚರಣೆ 2019 ನಿಮಿತ್ತ ಆಯೋಜಿಸಿದ ಸಭೆಯಲ್ಲಿ ಅವರು ಮಾತನಾಡಿ, ಕಾರ್ಮಿಕ ವರ್ಗ ಕೂಡಾ ಸರಕಾರಗಳು ಅನುಸರಿಸುವ ತಪ್ಪು ನೀತಿಗಳ ಪ್ರತಿಕೂಲ ಪರಿಣಾಮಗಳ ಬಗ್ಗೆ ಅರಿವೆ ಇಲ್ಲದಂತೆ ಸಂಘಟಿತ ಹೋರಾಟದಲ್ಲಿ ಭಾಗವಹಿಸಲು ನಿರಾಸಕ್ತಿ ತೋರುತ್ತಿವೆ. ಕಾರ್ಮಿಕ ವರ್ಗ ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಾರ್ಮಿಕರಿಗೆ ಅಪಾಯ ಎದುರಾಗಲಿದೆ ಎಂದರು.
ದೇಶದಲ್ಲಿ ಸಂಪತ್ತನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಮಿಕ ವರ್ಗವನ್ನು ಸರಕಾರಗಳು ಕಡೆಗಣಿಸು ತ್ತಿರುವುದನ್ನು ಇತ್ತೀಚೆಗಿನ ದಿನಗಳಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ವೆಂಬಂತೆ ಚುನಾವಣ ಪೂರ್ವದಲ್ಲಿ ಕಾರ್ಮಿಕರಿಗೆ ನೀಡಿದ ಆಶ್ವಾಸನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಡೇರಿಸದಿರುವುದಾಗಿದೆ ಎಂದರು.
ಕೈಗಾರಿಕಾ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ಬದುಕನ್ನು ಕಸಿದುಕೊಳ್ಳುತ್ತಿರುವುದು ವಿಪ ರ್ಯಾಸ. ಈ ಹಿನ್ನೆಲೆಯಲ್ಲಿ ಸರಕಾರದ ನೀತಿ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಹಿರಿಯ ಕಾರ್ಮಿಕ ಮುಂದಾಳು ಪಿ. ವಿಟ್ಟಲ ಬಂಗೇರ ಅವರು ಮಾತನಾಡಿದರು. ಬಂಟ್ವಾಳ ತಾಲೂಕು ಬೀಡಿ ಲೇಬರ್ ಯೂನಿಯನ್ (ಎಐಟಿಯುಸಿ) ಹಾಗೂ ಪಾಣೆಮಂಗಳೂರು ಫಿರ್ಕಾ ಬೀಡಿ ಆ್ಯಂಡ್ ಜನರಲ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಅಧ್ಯಕ್ಷರಾದ ಬಿ. ಬಾಬು ಭಂಡಾರಿ ಹಾಗೂ ಸರಸ್ವತಿ ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಪ್ರಸ್ತಾವಿಸಿ, ಸ್ವಾಗತಿಸಿದರು. ತಾಲೂಕು ಮುಂದಾಳು ಪ್ರೇಮ್‌ನಾಥ್ ಕೆ. ವಂದಿಸಿದರು.