ಅಮರಾವತಿ/ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಇನ್ನೂ ವಿಳಂಬ ನೀತಿ ಆರೋಪಿಸುತ್ತಿದೆ ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಇನ್ನೂ ಎರಡರಿಂದ ಮೂರು ದಿನಗಳ ಒಳಗಾಗಿ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದಿದ್ದಾರೆ. ಈ ಮೂಲಕ ಮತ್ತೂಮ್ಮೆ ಎನ್‌ಡಿಎ ತೊರೆಯುವ ಸುಳಿವನ್ನು ನಾಯ್ಡು ನೀಡಿದ್ದಾರೆ. ಅದಕ್ಕೆ ಉತ್ತರವಾಗಿ ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 14ನೇ ಹಣಕಾಸಿನ ಆಯೋಗದ ಶಿಫಾರಸಿನ ಅನ್ವಯ ಈಶಾನ್ಯ ರಾಜ್ಯಗಳಿಗೆ ಹೊರತು ಪಡಿಸಿ ಸಾಂವಿಧಾನಿಕವಾಗಿ ಇತರ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವ ಅವಕಾಶ ನೀಡಲಾಗಿಲ್ಲ. ಭಾವನಾತ್ಮಕವಾಗಿ ಮಾತನಾಡಿದರೆ ನೆರವಿನ ಮೊತ್ತವನ್ನು ಹೆಚ್ಚು ಮಾಡಲು ಸಾಧ್ಯವಿಲ್ಲ. ಆದರೆ ಆಂಧ್ರಪ್ರದೇಶಕ್ಕೆ ನೀಡುವ ನೆರವಿನಲ್ಲಿ ಕಡಿತ ಮಾಡುವುದಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅಮರಾವತಿಯಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯವನ್ನು ವಿಶೇಷವಾಗಿ ಪರಿಗಣಿಸಬೇಕು. ಕೇಂದ್ರ ಸರ್ಕಾರದ ಜತೆ ಪರಸ್ಪರ ಸಹಕಾರದ ಜತೆಗೆ ಕೆಲಸ ಮಾಡಿದ್ದೇನೆ. ಒಕ್ಕೂಟ ವ್ಯವಸ್ಥೆಗೆ ಅನುಗುಣವಾಗಿ ಕೆಲಸ ಮಾಡಿದ್ದರೂ, ವಿಶೇಷ ಸ್ಥಾನಮಾನ ನೀಡದೇ ಇದ್ದುದರಿಂದ ಆಂಧ್ರಪ್ರದೇಶದ ಜನರಿಗೆ ಅವಮಾನಕ್ಕೆ ಒಳಗಾದ ಅನುಭವವಾಗಿದೆ ಎಂದು ಪ್ರತಿಪಾದಿಸಿದರು. ತಾವು ಈಗ ವಿಚಾರ ಪ್ರಸ್ತಾಪ ಮಾಡದೇ ಇದ್ದರೆ ರಾಜ್ಯದ ಜನರು ತಮ್ಮನ್ನು ಕ್ಷಮಿಸಲಾರರು ಎಂದರು. ಲೋಕಸಭೆಯಲ್ಲಿ ಟಿಡಿಪಿಯ 16 ಸದಸ್ಯರು, ರಾಜ್ಯ ಸಭೆಯಲ್ಲಿ 6 ಸಂಸದರು ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2014ರ ಚುನಾವಣಾ ಪ್ರಚಾರದ ವೇಳೆ “ಮಗು ಜನಿಸಿದ ಬಳಿಕ ತಾಯಿಯನ್ನು ಕಾಂಗ್ರೆಸ್ ಕೊಂದಿತು’ ಎಂದ್ದಿದನ್ನು ಪ್ರಸ್ತಾಪಿಸಿದರು. ತೆಲಂಗಾಣ ರಚನೆ ಮಾಡಿದ ಬಳಿಕ ಆಂಧ್ರಪ್ರದೇಶವನ್ನು ಕಾಂಗ್ರೆಸ್ ನಿರ್ಲಕ್ಷಿಸಿತ್ತು ಎಂದು ಅಂದು ಪ್ರಧಾನಿ ಹೇಳಿದ್ದರು.
ಹೇರಳ ನೆರವು ಖಚಿತ: ಆಂಧ್ರಪ್ರದೇಶ ಮುಖ್ಯಮಂತ್ರಿ ಎಚ್ಚರಿಕೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶೇಷ ಸ್ಥಾನಮಾನಕ್ಕೆ ಸಮಾನವಾಗಿರುವ ಹಣಕಾಸಿನ ನೆರವು ನೀಡಲಾಗುತ್ತದೆ.
14ನೇ ಹಣಕಾಸು ಆಯೋಗದ ಪ್ರಕಾರ ಅಂಥ ಮಾನ್ಯತೆಯನ್ನು ಈಶಾನ್ಯ ರಾಜ್ಯಗಳಿಗೆ ಹೊರತಾಗಿ ನೀಡಲು ಸಾಧ್ಯವಿಲ್ಲ ಎಂದರು. ಕೇಂದ್ರದಿಂದ ಶೇ.90ರಷ್ಟು ನೆರವನ್ನು ವಿಶೇಷ ಅನುದಾನದ ರೂಪದಲ್ಲಿ ನೀಡಲಾಗುತ್ತದೆ. ಬಾಹ್ಯ ನೆರವಿನ ರೂಪದಲ್ಲಿ ಅಂದರೆ ವಿಶ್ವಬ್ಯಾಂಕ್‌ನಿಂದಲೂ ರಾಜ್ಯಕ್ಕೆ ವಿಶೇಷ ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ ಜೇಟ್ಲಿ. ಆಂಧ್ರಕ್ಕೆ 90:10 ರೂಪದಲ್ಲಿ ನೆರವು ನೀಡಲಾಗುತ್ತದೆ ಎಂದೂ ಜೇಟ್ಲಿ ಪ್ರತಿಪಾದಿಸಿದ್ದಾರೆ.
ಬೆಂಬಲ ಹಿಂತೆಗೆತಕ್ಕೆ 10ರ ಗಡುವು?
ಇದೇ ವೇಳೆ ಮಾ.10ರ ಒಳಗಾಗಿ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತಳೆಯದಿದ್ದರೆ ಕೇಂದ್ರ ಸಂಪುಟದಲ್ಲಿ ಸಚಿವರಾಗಿರುವ ಅಶೋಕ್ ಪಶುಪತಿ ಗಜಪತಿ ರಾಜು, ವೈ.ಎಸ್.ಚೌಧರಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಿದ್ದಾರೆ ಎಂದು ಹೇಳಲಾಗಿದೆ.
2016ರಲ್ಲಿ ಆಂಧ್ರಪ್ರದೇಶ ವಿಭಜನೆ ಮಸೂದೆ ಅನು ಮೋದನೆಗೊಂಡ ಬಳಿಕ ಹಣಕಾಸು ಸಚಿವ ಜೇಟಿÉಯವರೇ ಮಾಧ್ಯಮ ದವರ ಮುಂದೆ ವಿಶೇಷ ಸ್ಥಾನಮಾನ ನೀಡುವುದಾಗಿ ವಾಗ್ಧಾನ ಮಾಡಿ ದ್ದರು. ಒಂದೂವರೆ ವರ್ಷ ಕಳೆದರೂ ಯಾವ ಕ್ರಮ ಕೈಗೊಳ್ಳದೇ ಇರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಿ.ಪಿ.ರಾವ್, ಆಂಧ್ರಪ್ರದೇಶ ಕೃಷಿ ಸಚಿವ
ಬಿಜೆಪಿ ನೇತೃತ್ವದ ಎನ್‌ಡಿಎ ತಾನು ನೀಡಿದ್ದ ವಾಗ್ಧಾನವನ್ನು ಮರೆತುಬಿಟ್ಟಿದೆ. ಹೀಗಾಗಿಯೇ ನಾವು ಸಂಸತ್ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದೇವೆ. ಇದಲ್ಲದೆ ನಮಗೆ ಬೇರೆ ದಾರಿಯೇ ಇಲ್ಲವಾಗಿದೆ.
ಸಿ.ಎಂ.ರಮೇಶ್, ಟಿಡಿಪಿ ರಾಜ್ಯಸಭಾ ಸದಸ್ಯ