Advertisement

ಸರ್ದಾರ್‌ ಪಟೇಲ್‌ ಪ್ರತಿಮೆ ಇಂದು ಲೋಕಾರ್ಪಣೆ

05:00 AM Oct 31, 2018 | Karthik A |

ಹೊಸದಿಲ್ಲಿ/ಅಹ್ಮದಾಬಾದ್‌: ಗುಜರಾತ್‌ನ ನರ್ಮದಾ ಜಿಲ್ಲೆಯ ಕೇವಡಿಯಾ ಕಾಲನಿಯಲ್ಲಿ ನಿರ್ಮಾಣವಾಗಿರುವ 182 ಮೀಟರ್‌ ಎತ್ತರದ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷವೆಂದರೆ ಪ್ರತಿ ವರ್ಷದ ಜ.26ರಂದು ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದ ಮಾದರಿಯಲ್ಲೇ ಪಟೇಲ್‌ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ.

Advertisement

ರಾಜ್‌ಪಥ್‌ನಲ್ಲಿ ನಡೆಯುವಂತೆಯೇ ಕೇವಡಿಯಾಗೆ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿರುವ ವಿವಿಧ ಕಲಾ ತಂಡಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ. ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ರ 143ರ ಜನ್ಮದಿನ ಪ್ರಯುಕ್ತ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಪಟೇಲ್‌ರ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರೆ, ಭೂಸೇನೆ, ನೌಕಾಪಡೆ, ವಾಯುಪಡೆಗಳ ಯೋಧರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಯುದ್ಧ ವಿಮಾನಗಳ ಪ್ರದರ್ಶನವೂ ಇರುತ್ತದೆ.

ಮಂಗಳವಾರವೇ ಗುಜರಾತ್‌ ಸರಕಾರದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ತಾಲೀಮು ನಡೆದಿದೆ. ಉದ್ಘಾಟನ ಕಾರ್ಯಕ್ರಮವೇ ಬರೋಬ್ಬರಿ ಮೂರು ಗಂಟೆಗಳ ಕಾಲ ನಡೆಯುವ ಸಾಧ್ಯತೆಯಿದೆ. ಅದು ಮುಕ್ತಾಯಗೊಂಡ ಬಳಿಕವೇ ಪ್ರಧಾನಿ ಮೋದಿ ದಿಲ್ಲಿಗೆ ವಾಪಸಾಗಲಿದ್ದಾರೆ. IAFನ ಸೂರ್ಯಕಿರಣ ವಿಮಾನಗಳು ಆಗಸದಲ್ಲಿ ತ್ರಿವರ್ಣ ಧ್ವಜ ಮಾದರಿಯ ಚಿತ್ತಾರ ನಿರ್ಮಿಸಲಿವೆ. ಜಾಗ್ವಾರ್‌ ಯುದ್ಧ ವಿಮಾನ ಮತ್ತು ಎಂಐ-17 ಹೆಲಿಕಾಪ್ಟರ್‌ಗಳು ಪ್ರತಿಮೆಯ ಸಮೀಪ ಹಾರಾಟ ನಡೆಸಲಿವೆ. ಜತೆಗೆ ಪುಷ್ಪವೃಷ್ಟಿ ಮಾಡಲಿವೆ. ಈ ಕಾರ್ಯಕ್ರಮಕ್ಕೆ ಮುನ್ನ ಪ್ರಧಾನಿ ಮೋದಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏಕತೆಯ ಗೋಡೆಯನ್ನು ಉದ್ಘಾಟಿಸಲಿದ್ದಾರೆ. ಅದರಲ್ಲಿ ವಿವಿಧ ರಾಜ್ಯಗಳಿಂದ ಸಂಗ್ರಹಿಸಲಾಗಿರುವ ಭೂಮಿಯ ಮಾದರಿಯನ್ನು ಇರಿಸಲಾಗುತ್ತದೆ. ಬಳಿಕ ಪ್ರಧಾನಿಯವರು ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಂಗಳವಾರ ರಾತ್ರಿಯೇ ಪ್ರಧಾನಿ ಮೋದಿ ಅಹ್ಮದಾಬಾದ್‌ಗೆ ಆಗಮಿಸಿದ್ದಾರೆ. ಬುಧವಾರ ಬೆಳಗ್ಗೆ ಕೇವಡಿಯಾ ಕಾಲನಿಗೆ ತೆರಳಲಿದ್ದಾರೆ. ಧ್ವನಿ ಮತ್ತು ಬೆಳಕಿನ ಮಾದರಿಯಲ್ಲಿ ಸಿದ್ಧಪಡಿ ಸಲಾಗಿರುವ ಸರ್ದಾರ್‌ ಪಟೇಲ್‌ರ ಜೀವನದ ಬಗೆಗಿನ ಕಾರ್ಯಕ್ರಮವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ದೇಶದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾ ನಿಲಯಗಳು ಏಕತೆಗಾಗಿ ಓಟವನ್ನೂ ಆಯೋ ಜಿಸಿವೆ. ಶಾಲೆಗಳಲ್ಲಿಯೂ 22 ದಿನಗಳ ಕಾಲ ದಿನಕ್ಕೊಂದು ಭಾಷೆಯಲ್ಲಿ ಅಧ್ಯಾಪಕರು ಮತ್ತು ಸ್ನೇಹಿತರನ್ನು ಸ್ವಾಗತಿಸುವ ಕಾರ್ಯಕ್ರಮಗಳೂ ನಡೆಯಲಿವೆ.

Advertisement

ನ.3ರಿಂದ ಸಾರ್ವಜನಿಕರಿಗೆ ಮುಕ್ತ
ನ.3ರಿಂದ ಸರ್ದಾರ್‌ ಪಟೇಲ್‌ರ ಪ್ರತಿಮೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಆನ್‌ ಲೈನ್‌ ನಲ್ಲೂ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ವಯಸ್ಕರಿಗೆ 120 ರೂ. ಹಾಗೂ ಮಕ್ಕಳಿಗೆ 60 ರೂ. ಟಿಕೆಟ್‌ ದರ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next