ಬೆಳಗಾವಿ: ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನಿರ್ಮಿಸಿರುವ, 108 ಅಡಿ ಎತ್ತರದ ನಾಡ ಪ್ರಭು ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆ ನವೆಂಬರ್ 11 ರಂದು ಅನಾವರಣಗೊಳಿಸಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಪವಿತ್ರ ಮೃತ್ತಿಕೆ ಯನ್ನು ಸಂಗ್ರಹಿಸಲಾಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ್ , ಯುವಜನ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ ಅಶ್ವಥ್ ನಾರಾಯಣ್ ಅವರು ಪವಿತ್ರ ಮೃತಿಕೆಯನ್ನು ಸಂಗ್ರಹಿಸಿದರು.
ನಾಡ ಪ್ರಭು ಕೆಂಪೇಗೌಡರ ಕಂಚಿನ ಭವ್ಯ ಪ್ರತಿಮೆಯನ್ನು ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಪ್ರತಿಮೆ ಅನಾವರಣಕ್ಕೆ ಐತಿಹಾಸಿಕ ಮಹತ್ವ ಹೊಂದಿರುವ ಹಾಗೂ ಧಾರ್ಮಿಕ ಕ್ಷೇತ್ರಗಳಾದ ವಿಜಯನಗರ ಜಿಲ್ಲೆಯ ಹಂಪಿ, ಕೂಡಲ ಸಂಗಮ ಮೃತಿಕೆ ಸಂಗ್ರಹಿಸಿ, ಬಳಿಕ ಬೆಳಗಾವಿಯ ಕಿತ್ತೂರು ನಾಡಿನಿಂದ ಮೃತಿಕೆ ಯನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ. ಎಂ. ಬಿ. ಬೋರಲಿಂಗಯ್ಯ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಮಾಳಗಿ ಹಾಜರಿದ್ದರು.