ಶಿವಮೊಗ್ಗ: ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದೇನೆ. ಆದರೆ, ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಆ ದಿಕ್ಕಿನಲ್ಲಿ ನಾಳೆಯಿಂದಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಕೂಡ ಯಡಿಯೂರಪ್ಪ ಮನೆಯಲ್ಲಿ ಕುಳಿತಿದ್ದಾನೆಂದು ಭಾವಿಸುವುದು ಬೇಡ. ನನ್ನ ಕೈ ಕಾಲು ಗಟ್ಟಿ ಇರುವವರೆಗೂ ಪಕ್ಷ ಬಲಿಪಡಿಸಲು ನನ್ನ ಕೈಲಾದ ಕೆಲಸ ಮಾಡುತ್ತೇನೆ. ಪಕ್ಷ ಬಲಪಡಿಸುವುದು ನನ್ನ ಕರ್ತವ್ಯ. ಪಕ್ಷ ಬಹಳಷ್ಟು ನನಗೆ ಕೊಟ್ಟಿದೆ. ಪಕ್ಷದ ಋಣವನ್ನು ತೀರಿಸುವ ಕೆಲಸ ಬದುಕಿನ ಕೊನೆಯವರೆಗೂ ಮಾಡಿದರೂ ಕಡಿಮೆ. ಹಾಗಾಗಿ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಶಿವಮೊಗ್ಗದ ಅಭಿವೃದ್ಧಿಗೆ ಆದಷ್ಟು ಶ್ರಮ ವಹಿಸಿದ್ದೇನೆ. ನಿನ್ನೆ ನರೇಂದ್ರ ಮೋದಿಯವರು ಏರ್ ಪೋರ್ಟ್ ಉದ್ಘಾಟನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿದ್ದೇನೆ. ನರೇಂದ್ರ ಮೋದಿಯವರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ಪ್ರಗತಿ ಮಾಡುತ್ತೇವೆ. ಸಿಎಂ ಬೊಮ್ಮಾಯಿ ಕೂಡ ಮುಖ್ಯಮಂತ್ರಿ ಆಗಿ ಜಿಲ್ಲೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಆ ಬ್ರ್ಯಾಂಡ್ ನ ಬಿಯರ್ ಎಲ್ಲಾ ಕಡೆ ಸಿಗುವಂತೆ ಮಾಡಿ: ಜಿಲ್ಲಾಧಿಕಾರಿಗೆ ಪತ್ರ ಬರೆದ ವ್ಯಕ್ತಿ
ಪ್ರಧಾನಿಯವರು ನನ್ನ ಜೊತೆ ಆತ್ಮೀಯವಾಗಿ ನಡೆದುಕೊಂಡರು. ಮೊದಲಿನಿಂದಲೂ ನನ್ನನ್ನು ಕಂಡರೆ ಅವರಿಗೆ ಬಹಳ ಪ್ರೀತಿ ವಿಶ್ವಾಸ. ಅವರು ಕೊಟ್ಟಿರುವ ಪ್ರೀತಿ ವಿಶ್ವಾಸ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಬರುವಂತಹ ದಿನಗಳಲ್ಲಿ ಅವರ ಅಪೇಕ್ಷೆಯಂತೆ ಪಕ್ಷ ಕಟ್ಟಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಅದೇ ನಾನು ಅವರಿಗೆ ಕೊಡುವಂತಹ ಕೊಡುಗೆ ಎಂದು ಯಡಿಯೂರಪ್ಪ ಹೇಳಿದರು.