Advertisement

ಹೈ ಅಲರ್ಟ್‌ ಮುಂದುವರಿಕೆ

10:48 AM Aug 19, 2019 | Sriram |

ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು ನಿಯೋಜಿಸಿದ್ದರಿಂದ ಉಗ್ರರು ಅಲ್ಲಿಂದ ಇತರ ರಾಜ್ಯಗಳಿಗೆ ನುಸುಳಿದ್ದಾರೆಯೇ?

Advertisement

ಇಂಥ ಅನುಮಾನ ಕೇಂದ್ರ ಗೃಹ ಇಲಾಖೆಗೆ ಬಂದ ಕಾರಣದಿಂದಾಗಿ ತೀವ್ರ ಕಟ್ಟೆಚ್ಚರ ವಹಿಸಲು ಮುನ್ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಸುಮಾರು 300ಕ್ಕೂ ಹೆಚ್ಚು ಉಗ್ರರು ಜಮ್ಮು-ಕಾಶ್ಮೀರದಲ್ಲಿ ಅಡಗಿರುವ ಮಾಹಿತಿಯ ಬಗ್ಗೆ ಆರು ತಿಂಗಳ ಹಿಂದೆಯೇ ಸರಕಾರ ಮಾಹಿತಿ ನೀಡಿತ್ತು. ಕೇಂದ್ರ ಸರಕಾರ ಭದ್ರತೆ ಬಿಗಿಗೊಳಿಸುತ್ತಿದ್ದಂತೆ ಈ ಉಗ್ರರು ಇತರ ರಾಜ್ಯಗಳಿಗೆ ಪರಾರಿಯಾಗಿರಬಹುದು ಎಂಬ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಹೀಗಾಗಿ ಬೆಂಗಳೂರು ಸಹಿತ ರಾಜ್ಯಾದ್ಯಂತ ಹೈ ಅಲರ್ಟ್‌ ಮುಂದುವರಿದಿದೆ. ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಶನಿವಾರದಿಂದಲೇ ಎಲ್ಲೆಡೆ ಭದ್ರತಾ ಸಿಬಂದಿ ತಪಾಸಣೆ ಕೈಗೊಂಡಿದ್ದಾರೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲ ಮಣಿ ಎನ್‌. ರಾಜು ಮತ್ತು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಅವರು ಬೆಂಗಳೂರು ಸೇರಿ ಕಮಿಷನರೆಟ್‌ ವ್ಯಾಪ್ತಿಯ ಅಧಿಕಾರಿಗಳು, ಎಲ್ಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿ ಗಂಟೆಗೊಮ್ಮೆ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಗಡಿ ಪ್ರದೇಶ, ಕರಾವಳಿ ಮತ್ತು ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚು ನಿಗಾ ವಹಿಸುವಂತೆ ಸೂಚಿಸಲಾಗಿದೆ.

ಶನಿವಾರ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿ ರಾಜ್ಯದ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು, ಮಾಲ್‌ಗ‌ಳು, ಜಲಾಶಯಗಳು, ಧಾರ್ಮಿಕ ಕೇಂದ್ರಗಳು, ರೈಲು ನಿಲ್ದಾಣ, ಮೆಟ್ರೋ ಮತ್ತು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬಂದಿ ತಪಾಸಣೆ ನಡೆಸಿದ್ದಾರೆ. ಲೋಹಪರಿಶೋಧಕ ಯಂತ್ರ, ಬ್ಯಾಗ್‌ ಸ್ಕ್ಯಾನರ್‌ ಮೂಲಕ ತಪಾಸಣೆ ಮಾಡಿದ್ದಾರೆ.

Advertisement

ಆಲಮಟ್ಟಿ, ತುಂಗಭದ್ರಾ, ಜೋಗ ಜಲಪಾತ, ಕೆಆರ್‌ಎಸ್‌ ಜಲಾಶಯ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳಾದ ಹಂಪಿ, ಮೈಸೂರು, ವಿಜಯಪುರ ಮತ್ತು ಶಿವಮೊಗ್ಗ, ಮಂಗಳೂರು, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಮತ್ತು ಕರಾವಳಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.

ನಗರ ಪೊಲೀಸ್‌ ಆಯುಕ್ತರ ಸಭೆ
ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯೂ ಪ್ರಮುಖವಾಗಿ ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ನಿಗಾ ವಹಿಸುವಂತೆ ಸೂಚಿಸಿದ ಬೆನ್ನಲ್ಲೇ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಶನಿವಾರ ಬೆಳಗ್ಗೆ ಹೆಚ್ಚುವರಿ ಪೊಲೀಸ್‌ ಆಯುಕ್ತರು, ಎಲ್ಲ ವಲಯ ಡಿಸಿಪಿಗಳ ಸಭೆ ನಡೆಸಿ, ತಮ್ಮ ವ್ಯಾಪ್ತಿಯ ಭದ್ರತೆ ಬಗ್ಗೆ ಗಂಟೆಗೊಮ್ಮೆ ಕಿರಿಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ನೀಡುವಂತೆ ಸೂಚಿಸಿದ್ದಾರೆ.

ರೈಲು, ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ
ಶನಿವಾರ ಬೆಳಗ್ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಲ್ಲಿ ಕಮಾಂಡೊಗಳು ಗಸ್ತು ತಿರುಗಿ ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು.

ಸುಳಿವು ಕೊಟ್ಟ ಉಗ್ರ?
ಪ. ಬಂಗಾಲದಲ್ಲಿ ನಡೆದಿದ್ದ ಬುದ್ವಾìನ್‌ ಸ್ಫೋಟ ಪ್ರಕರಣ ಸಂಬಂಧ ಜೂ.25ರಂದು ಎನ್‌ಐಎ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಜೆಎಂಬಿಯ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ವಿಚಾರಣೆಯ ವೇಳೆ ಕೆಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾನೆ. ಬೆಂಗಳೂರು ಸೇರಿ ಕೆಲವೆಡೆ ಉಗ್ರರು ವಾಸವಿದ್ದಾರೆ. ಅವರ ಮೂಲಕ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂದಿದ್ದಾನೆ ಎನ್ನಲಾಗಿದೆ. ಪ್ರಮುಖವಾಗಿ ಜನನಿಬಿಡ ಪ್ರದೇಶಗಳಲ್ಲಿರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನೇ ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕರಾವಳಿಯಲ್ಲೂ ಕಟ್ಟೆಚ್ಚರ
ಮಂಗಳೂರು/ ಉಡುಪಿ: ಗುಪ್ತಚರ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ಕರಾವಳಿಯಾದ್ಯಂತ ಪೊಲೀಸರು ಶನಿವಾರ ವಿಸ್ತೃತ ಭದ್ರತಾ ಕ್ರಮಗಳನ್ನು ತೆಗೆದುಕೊಂಡರು. ಪ್ರಮುಖ ತಾಣಗಳಲ್ಲಿ ಬಿಗಿ ಬಂದೋಬಸ್ತ್ ಮತ್ತು ಶೋಧ ನಡೆಸಿದರು. ಸಮುದ್ರ ತೀರದಲ್ಲೂ ಕಟ್ಟೆಚ್ಚರ ಘೋಷಿಸಲಾಗಿತ್ತು.

ಅನುಮಾನಾಸ್ಪದ ದೋಣಿ ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ವಿವಿಧ ಉದ್ದಿಮೆಗಳು, ಆಸ್ಪತ್ರೆ, ಮಾಲ್‌ಗ‌ಳು, ರೈಲು ಮತ್ತು
ಬಸ್‌ ನಿಲ್ದಾಣಗಳಲ್ಲಿ ತಪಾಸಣೆ ಕೈಗೊಳ್ಳಲಾಗಿತ್ತು.

ಮಲ್ಪೆ: ದೋಣಿಗಳ ಬಗ್ಗೆ ಶಂಕೆ
ಮಲ್ಪೆ ಸೈಂಟ್‌ ಮೆರೀಸ್‌ ಜೆಟ್ಟಿ ಬಳಿ ಶುಕ್ರವಾರ ರಾತ್ರಿ ಲಂಗರು ಹಾಕಿದ್ದ ತಮಿಳುನಾಡು ಮತ್ತು ಕೇರಳದ ಮೂರು ಮೀನುಗಾರಿಕೆ ದೋಣಿಗಳ ಬಗ್ಗೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದರಿಂದ ಶನಿವಾರ ಕರಾವಳಿ ಕಾವಲು ಪಡೆ ಪೊಲೀಸ್‌ ಮತ್ತು ಸ್ಥಳೀಯ ಪೊಲೀಸರು ವಿಶೇಷ ತಪಾಸಣೆ ನಡೆಸಿದರು. ಸಂಶಯದ ಹಿನ್ನೆಲೆಯಲ್ಲಿ ಬಾಂಬ್‌ ಪತ್ತೆದಳ, ಶ್ವಾನದಳವನ್ನು ಕರೆಸಿಕೊಳ್ಳಲಾಯಿತು. ಕಡಲು ಪ್ರಕ್ಷುಬ್ಧ ಇದ್ದುದರಿಂದ ಅವರು ಮಲ್ಪೆ ಕಡೆಗೆ ಆಗಮಿಸಿದ್ದು ವಿಚಾರಣೆಯ ಬಳಿಕ ಖಚಿತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next