Advertisement

ರಾಜ್ಯಾದ್ಯಂತ ಡೆಂಗ್ಯೂ ಜ್ವರ ಉಲ್ಬಣ: ಮೈಸೂರಿನಲ್ಲಿ ಅಧಿಕ ಪ್ರಕರಣ ದಾಖಲು

08:20 PM Jul 24, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಸತತ ಮಳೆಯ ನಡುವೆಯೇ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದ್ದು, 24 ದಿನಗಳಲ್ಲಿ 1,813 ಪ್ರಕರಣಗಳು ವರದಿಯಾಗಿವೆ.

Advertisement

ರಾಜ್ಯದ ಆಸ್ಪತ್ರೆಗಳಲ್ಲಿ ಜ್ವರ, ಮೈಕೈ ನೋವು, ತಲೆ ನೋವು ಮುಂತಾದ ಡೆಂಗ್ಯೂ ಲಕ್ಷಣಗಳುಳ್ಳವರು ಹೆಚ್ಚು ದಾಖಲಾಗುತ್ತಿದ್ದು, ಜುಲೈ 1ರಿಂದ 24ರ ನಡುವಿನ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 1,294 ಪ್ರಕರಣಗಳು ದೃಢಪಟ್ಟಿವೆ.

ಪ್ರಸ್ತುತ ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ಅತ್ಯಧಿಕ ಪ್ರಕರಣ
ಕಳೆದ 7 ತಿಂಗಳುಗಳಲ್ಲಿ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ 2062 ಹಾಗೂ ರಾಜ್ಯದ 31 ಜಿಲ್ಲೆಯಲ್ಲಿ 2,046 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. 280 ಪ್ರಕರಣಗಳೊಂದಿಗೆ ಮೈಸೂರು ಜಿಲ್ಲೆ ಅಗ್ರ ಸ್ಥಾನದಲ್ಲಿದೆ. ಇಲ್ಲಿ 3,026 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ.

ಉಳಿದಂತೆ ವಿಜಯಪುರ 134, ಶಿವಮೊಗ್ಗ 120, ಬೆಳಗಾವಿ 112, ಚಿತ್ರದುರ್ಗ 104, ಧಾರವಾಡದಲ್ಲಿ 99 ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಕನ್ನಡ ಜಿಲ್ಲೆ ಹೊರತುಪಡಿಸಿದರೆ ಉಳಿದೆಲ್ಲ ಜಿಲ್ಲೆಯಲ್ಲಿ ಎರಡಂಕಿಯ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

Advertisement

2021ರಲ್ಲಿ 7,393 ಮಂದಿ ಡೆಂಗ್ಯೂ ಪೀಡಿತರಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. 2022ರ ಅಂತ್ಯಕ್ಕೆ ರಾಜ್ಯದಲ್ಲಿ 9,620 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, 9 ಮಂದಿ ಮೃತಪಟ್ಟಿದ್ದಾರೆ.

2023ರ ಜ.1ರಿಂದ ಜು.24ರ ವರೆಗೆ ರಾಜ್ಯದಲ್ಲಿ 4108 ಪ್ರಕರಣಗಳು ದಾಖಲಾಗಿವೆ. ಅಧಿಕ ಪ್ರಕರಣಗಳು ಪತ್ತೆಯಾದ ಜಿಲ್ಲೆಗಳಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಕಾರ್ಯಕರ್ತರು, ಆಶಾ ಸ್ವಯಂ ಸೇವಕರು ಮನೆ ಮನೆಗೆ ಭೇಟಿ ಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ.

ಡೆಂಗ್ಯೂ ತಡೆಗೆ ಕ್ರಮ
ಎಲ್ಲ ಖಾಸಗಿ ಆರೋಗ್ಯ ಸಂಸ್ಥೆಗಳಿಂದಲೂ ಡೆಂಗ್ಯೂ ಪ್ರಕರಣಗಳ ಮಾಹಿತಿಯನ್ನು ಆರೋಗ್ಯ ಇಲಾಖೆ ಪಡೆದುಕೊಳ್ಳುತ್ತಿದೆ. 2023ರ ಜು.24ರ ವರೆಗೆ ರಾಜ್ಯದ 32 ತಾಲೂಕುಗಳ 1,086 ಗ್ರಾಮಗಳ 20 ಲಕ್ಷ ಜನರ ಮನೆಗಳಲ್ಲಿ ಈಡೀಸ್‌ ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾ ತಾಣಗಳನ್ನು ನಾಶಪಡಿಸಲಾಗಿದೆ.

2017ರಿಂದೀಚೆಗಿನ ಡೆಂಗ್ಯೂ ವಿವರ
ಇಸವಿ      ಪ್ರಕರಣ         ಮರಣ
2017        17,844              10
2018        4,848               04
2019         18,183             17
2020       3,823               05
2021       7,393                07
2022       9,620              09
2023 (ಜು.24ರ ವರೆಗೆ) 4,108 00

Advertisement

Udayavani is now on Telegram. Click here to join our channel and stay updated with the latest news.

Next