ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೆ ಮನೆಗೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಇತ್ಯರ್ಥಪಡಿಸಿದೆ.
ಲಾಕ್ ಡೌನ್ ಮುಂದುವರಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಿಐಎಲ್ ವಿಚಾರಣೆ ನಡೆಸಿದ ಜಸ್ಟೀಸ್ ಅಶೋಕ್ ಭೂಷಣ್, ಜಸ್ಟೀಸ್ ಸಂಜಯ್ ಕಿಶನ್ ಕೌಲ್ ಮತ್ತು ಜಸ್ಟೀಸ್ ಬಿಆರ್ ಗವಾಯಿ ಸೂಚನೆ ನೀಡಿದ್ದಾರೆ.
“ಈ ಪಿಐಎಲ್ ಗೆ ಸಂಬಂಧಿಸಿದಂತೆ ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕು” ಎಂದು ತಿಳಿಸಿದೆ.