Advertisement
ಮಹಾನಗರ : ರಾಜ್ಯದಲ್ಲಿಯೇ 923 ಚ.ಕಿ.ಮೀ. ವಿಸ್ತೀರ್ಣದ ಅತೀ ದೊಡ್ಡ ತಾಲೂಕು ಎಂಬ ಮಾನ್ಯತೆ ಪಡೆದಿದ್ದ ಮಂಗಳೂರು ತಾ| ಈಗ ಮೂರು ಭಾಗಗಳಾಗಿ ಪ್ರತ್ಯೇಕಗೊಳ್ಳಲಿದೆ. ಮಂಗಳೂರಿನಿಂದ ಈಗಾಗಲೇ ಪ್ರತ್ಯೇಕವಾಗಿರುವ ಮೂಡುಬಿದಿರೆ ಜತೆಗೆ ಇದೀಗ ಮೂಲ್ಕಿ ಹಾಗೂ ಉಳ್ಳಾಲವೂ ಪ್ರತ್ಯೇಕ ತಾಲೂಕುಗಳಾಗಿ ಘೋಷಣೆಯಾಗಿವೆ.
Related Articles
ಹೊಸ ತಾಲೂಕು ಘೋಷಣೆ ಬಳಿಕ ರಾಜ್ಯ ಸರಕಾರ ಕರಡು ಗಜೆಟ್ ನೋಟಿಫೀಕೇಶನ್ ಹೊರಡಿಸಲಿದೆ. ಬಳಿಕ ಗ್ರಾಮ ಹಾಗೂ ಗಡಿ ಗುರುತಿಸಲಿದ್ದು, ಇದಕ್ಕೆ ಸಾರ್ವಜನಿಕರ ಆಕ್ಷೇಪ ಆಲಿಸಿಕೊಂಡು ಸಭೆ ಮಾಡಬೇಕಿದೆ. ಇದೆಲ್ಲ ಪೂರ್ಣವಾದ ಬಳಿಕ ಹೊಸ ತಾಲೂಕಿಗೆ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಆ ಬಳಿಕವಷ್ಟೇ ತಾಲೂಕು ಕಚೇರಿಯ ಕಟ್ಟಡ ನಿರ್ಮಾಣ ಸಂಬಂಧಿತ ಚಟುವಟಿಕೆಗಳು ಆರಂಭಗೊಳ್ಳಲಿವೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಹೊಸ ತಾಲೂಕು ಅನುಷ್ಠಾನವಾಗ ಬೇಕಾದರೆ ಕನಿಷ್ಠ 3 ವರ್ಷಗಳಾದರು ಬೇಕಾಗಬಹುದು.
Advertisement
ಪ್ರತಿ ತಾಲೂಕಿಗೆ 27 ಇಲಾಖೆಗಳುಸದ್ಯ ಮಂಗಳೂರು ತಾಲೂಕಿನಲ್ಲಿ ತಹಶೀಲ್ದಾರ್, ಮೂಲ್ಕಿ- ಮೂಡುಬಿದಿರೆಯಲ್ಲಿ ವಿಶೇಷ ತಹಶೀಲ್ದಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದೆ ತಾಲೂಕಾದ ಅನಂತರ ಉಳ್ಳಾಲವೂ ಸಹಿತ ಮೂಲ್ಕಿ, ಮೂಡುಬಿದಿರೆಗೆ ತಹಶೀಲ್ದಾರ್ ನೇಮಕವಾಗಲಿದೆ. ತಲಾ ಒಬ್ಬೊಬ್ಬ ಶಿಕ್ಷಣಾಧಿಕಾರಿ, ಖಜನಾ ಅಧಿಕಾರಿ, ಕೃಷಿ, ತೋಟಗಾರಿಕೆ, ಪಿಡಬ್ಲ್ಯುಡಿ ಸಹಿತ ಹಲವು ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. 20ರಿಂದ 27ರಷ್ಟು ಇಲಾಖೆಗಳು ಇರಲಿವೆ. ಒಂದು ತಾಲೂಕಿಗೆ 4 ಶಾಸಕರು!
2011ರ ಜನಗಣತಿಯ ಪ್ರಕಾರ ಮಂಗಳೂರು ತಾ| ನಲ್ಲಿ 9,94,602 ಜನಸಂಖ್ಯೆಯಿದೆ. ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.50ರಷ್ಟು ಮಂಗಳೂರು ತಾ| ವ್ಯಾಪ್ತಿಯಲ್ಲಿಯೇ ಬರುತ್ತದೆ. ಮಂಗಳೂರು ತಾಲೂಕಿನಲ್ಲಿ 1 ಮಹಾನಗರ ಪಾಲಿಕೆ, 2 ಪುರಸಭೆ (ಮೂಲ್ಕಿ ಹಾಗೂ ಮೂಡುಬಿದಿರೆ) 1 ಪ. ಪಂ. (ಕೋಟೆಕಾರ್) ಇದೆ. ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಮೂಲ್ಕಿ – ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರಗಳು ಈ ತಾಲೂಕಿನಲ್ಲಿವೆ. ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿಗೆ ತಲಾ ಒಬ್ಬೊಬ್ಬ ಶಾಸಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಮಂಗಳೂರು ತಾಲೂಕಿಗೆ 4 ಶಾಸಕರ ಜವಾಬ್ದಾರಿಯಿದೆ!. ಮೂರು ಮಿನಿ ವಿಧಾನಸೌಧ
ಹೊಸ ತಾ| ರಚನೆಯಾದಂತೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಕಾರ್ಯನಿರ್ವಹಿಸಲು ಮಿನಿ ವಿಧಾನಸೌಧಗಳು ನಿರ್ಮಾಣಗೊಳ್ಳಲಿವೆ. ಇದರಂತೆ ಮೂಡುಬಿದಿರೆಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋ. ರೂ. ಮಂಜೂರಾಗಿದೆ. ಮೂಲ್ಕಿಯಲ್ಲಿ ತಾ|ಕಚೇರಿಗಾಗಿ ಮುಂದಿನ ದಿನದಲ್ಲಿ ಮಿನಿವಿಧಾನಸೌಧ ನಿರ್ಮಾಣವಾಗುವ ನಿರೀಕ್ಷೆಯಿದೆ. ಇಲ್ಲಿನ ಗೇರುಕಟ್ಟೆಯ ಬಳಿಯಲ್ಲಿ 2 ಎಕರೆಯಷ್ಟು ಜಮೀನನ್ನು ಇದಕ್ಕಾಗಿ ಗೊತ್ತುಪಡಿಸಲಾಗಿದೆ. ಇನ್ನು, ಉಳ್ಳಾಲ ತಾಲೂಕು ರಚನೆಯಾದ ಬಳಿಕ ಮಿನಿವಿಧಾನಸೌಧ ದೇರಳಕಟ್ಟೆ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ. ಜನಪರವಾದ ಮಹತ್ವದ ಹೆಜ್ಜೆ
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈ ಹಿಂದೆ 148 ಗ್ರಾಮಗಳಿದ್ದು, ಪ್ರಸ್ತುತ ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ಪ್ರತ್ಯೇಕವಾಗುವ ಹಿನ್ನೆಲೆಯಲ್ಲಿ 76 ಗ್ರಾಮಗಳು ಇದೀಗ ಉಳಿದುಕೊಳ್ಳಲಿವೆ. ಮೂರು ಹೋಬಳಿಗಳ ಜತೆಗೆ ಮಂಗಳೂರು ತಾಲೂಕು ಮುಂದಿನ ದಿನದಲ್ಲಿ ಇನ್ನಷ್ಟು ಪರಿಣಾಮಕಾರಿ ಸೇವೆಗೆ ವಿಶೇಷ ಆದ್ಯತೆ ನೀಡಲು ಸಾಧ್ಯವಾಗಲಿದೆ.
– ಗುರುಪ್ರಸಾದ್, ತಹಶೀಲ್ದಾರ್ ಮಂಗಳೂರು ತಾ| ವಿಶೇಷ ವರದಿ