Advertisement

ರಾಜ್ಯದ ಮೊದಲ ಗ್ರಾಮೀಣ ಎಂಎಫ್ಆರ್‌ ಘಟಕ ಸಿದ್ಧ ! 

07:51 PM Aug 22, 2021 | Team Udayavani |

ಕಾರ್ಕಳ: ಸ್ವಚ್ಛತೆಗೆ ಸಂಬಂಧಿಸಿ ರಾಜ್ಯದಲ್ಲೇ ಮೊದಲ ಮೆಟೀರಿಯಲ್ಸ್‌ ರಿಕವರಿ ಫೆಸಿಲಿಟಿ (ಎಂಆರ್‌ಎಫ್) ಗ್ರಾಮೀಣ ಘಟಕ ಉಡುಪಿ ಜಿಲ್ಲೆಯ ಕಾರ್ಕಳದ ಹಳ್ಳಿಯಲ್ಲಿ  ಸಿದ್ಧಗೊಂಡಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ.

Advertisement

ಪೈಲಟ್‌ ಯೋಜನೆಯಾಗಿ  ರಾಜ್ಯದ ರಾಮನಗರ, ಬಳ್ಳಾರಿ, ಮಂಗಳೂರು, ಉಡುಪಿ ಈ ನಾಲ್ಕು ಜಿಲ್ಲೆಗಳ  ಹಳ್ಳಿಗಳಲ್ಲಿ ತೆರೆಯಲು ರಾಜ್ಯ ಸರಕಾರ ನಿರ್ಧರಿಸಿತ್ತು. ಮೊದಲ ಘಟಕವಾಗಿ ಉಡುಪಿ ಜಿಲ್ಲೆಯಲ್ಲಿ ತೆರೆದು ಅನಂತರ ಇನ್ನು ಮೂರು ಕಡೆ ನೆರವೇರಲಿದೆ. ಅನಂತರದಲ್ಲಿ ರಾಜ್ಯದಲ್ಲಿ  100  ಎಂಆರ್‌ಎಫ್ ಘಟಕಗಳು  ನಿರ್ಮಾಣವಾಗಲಿವೆ.

ನೈರ್ಮಲ್ಯಕ್ಕೆ ಹೆಸ‌ರಾದ ಉಡುಪಿ ಜಿಲ್ಲೆಗೆ ಕೊಡುಗೆಯಾಗಿ ಗ್ರಾಮೀಣ ಪ್ರದೇಶವಾದ ಕಾರ್ಕಳಕ್ಕೆ ತ್ಯಾಜ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ವಿಂಗಡಣೆ ಮಾಡಿ ಮಾರಾಟ ಮಾಡುವ ಎಂಆರ್‌ಎಫ್ ಘಟಕ ಮಂಜೂರಾಗಿತ್ತು. ಸುಮಾರು 3 ಕೋಟಿ ರೂ. ಅಂದಾಜು  ವೆಚ್ಚದ  ಯೋಜನೆ ಇದಾಗಿದ್ದು, ರಾಜ್ಯ ಸರಕಾರ 2.5 ಕೋ.ರೂ. ಅನುದಾನ ಭರಿಸುತ್ತದೆ. ಉಳಿದಂತೆ  ಜಿ.ಪಂ. ಇನ್ನಿತರ  ಮೂಲಗಳಿಂದ ವಿನಿಯೋಗಿಸಲಾಗಿದೆ. ಮೆಷಿನ್‌ಗಳ ಜೋಡಣೆ ಕಾರ್ಯಗಳು ಮುಗಿದಿವೆ. ಈ ಹಿಂದೆಯೆ ಪೂರ್ಣವಾಗಬೇಕಿತ್ತು. ಕೊರೊನಾದಿಂದ  ವಿಳಂಬಗೊಂಡಿತ್ತು.

ಆರಂಭದಲ್ಲಿ 41 ಗ್ರಾ.ಪಂ.ಗಳ ಕಸ ಘಟಕಕ್ಕೆ :

ಕಾಪು, ಕಾರ್ಕಳ, ಹೆಬ್ರಿ ಈ ಮೂರು ತಾ| ಗಳ 41 ಗ್ರಾ.ಪಂ.ಗಳಿಂದ  ಕಸ  ಇಲ್ಲಿಗೆ ಬರುತ್ತದೆ. ಸ್ಥಳೀಯಾಡಳಿತಗಳು ಸಂಗ್ರಹಿಸಿದ ಕಸ ವಿಲೇವಾರಿಗೆ ರೂಟ್‌ ಪ್ಲ್ರಾನ್‌ ಸಿದ್ಧಪಡಿಸಲಾಗುತ್ತದೆ. ಗ್ರಾ.ಪಂ.ಗಳಿಂದ ಘಟಕಕ್ಕೆ  ಬರುವ ಕಸವನ್ನು ಎಂಆರ್‌ಎಫ್ ಘಟಕದಲ್ಲಿ  ಕನ್ವರಲ್‌  ಬೆಲ್ಟ್ಗೆ ಹಾಕಿ 10ರಿಂದ 12ರಷ್ಟು ವಿವಿಧ ತ್ಯಾಜ್ಯಗಳನ್ನು ಸಗ್ರಿಗೇಟ್‌ ಮಾಡಲಾಗುತ್ತದೆ. ಅನಂತರದಲ್ಲಿ ಬೇಲಿಂಗ್‌ ಮಾಡಿದಲ್ಲಿ ವ್ಯಾಲ್ಯೂ ಹೆಚ್ಚಿರುತ್ತದೆ. ಎರಡೂ ರೀತಿಯಲ್ಲಿ ಉತ್ಪನ್ನ ತಯಾರಿಯಾಗುತ್ತದೆ. ಅದನ್ನು  ಕಂಪೆನಿ ಗಳಿಗೆ ಮಾರಾಟ ಮಾಡಲಾಗುತ್ತದೆ.

Advertisement

ಟ್ರಯಲ್‌ ನೋಡಲಾಗುತ್ತಿದೆ :

ಮೆಷಿನ್‌  ಚಾಲುಗೊಳಿಸುವ ಸಿಬಂದಿಗೆ ತರಬೇತಿ ನೀಡಲಾಗಿದೆ. ಟ್ರಯಲ್‌ ಆಗಿ ಯಂತ್ರಗಳು ಈಗ ಕಾರ್ಯಾರಂಭಿಸಿದೆ. ಘಟಕದಲ್ಲಿ 25ಕ್ಕೂ ಅಧಿಕ ಮಂದಿಗೆ ಉದ್ಯೋಗ ಕೂಡ ದೊರಕಲಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಈಗ ಕಾರ್ಯಾಚರಿಸುತ್ತಿರುವ ಕಾರ್ಮಿಕರಿಗೆ ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಎಂಆರ್‌ಎಫ್ ಘಟಕದಿಂದ ಪರಿಸರಕ್ಕೆ  ಹಾನಿಯೂ ಇಲ್ಲ.  ಪರಿಸರ ಸ್ನೇಹಿಯಾಗಿ ಘಟಕ ಕಾರ್ಯಾಚರಿಸಲಿದೆ. ಖಾಸಗಿ ಕಂಪೆನಿಗಳು ಖಾಸಗಿಯಾಗಿ  ಘಟಕಗಳನ್ನು  ಆರಂಭಿಸಿವೆ. ನಗರಗಳಲ್ಲಿ  ಯಶಸ್ವಿಯೂ ಆಗಿದೆ. ಆದರೆ ಗ್ರಾಮೀಣ ಮಟ್ಟದಲ್ಲಿ ಇದೆ ಮೊದಲು ಎಂದು ಘಟಕಗಳ  ಕನ್ಸಲ್ಟೆನ್ಸಿಯಾಗಿರುವ  ಸಾಹಸ್‌ ಸಂಸ್ಥೆಯ ಎಕ್ಸಿಕ್ಯೂಟಿವ್‌ ಶರತ್‌ ತಿಳಿಸಿದ್ದಾರೆ.

ಸಿಎಂ ಉದ್ಘಾಟಿಸುವ ನಿರೀಕ್ಷೆ :

ಜಿಲ್ಲೆಗೆ ಘಟಕ ಮಂಜೂರುಗೊಂಡಾಗ ಆರಂಭದಲ್ಲಿ ಎರಡು ಕಡೆ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಾರ್ಕಳದ  ಶಾಸಕರು ಒತ್ತಡ ತಂದು  ಸತತ ಪ್ರಯತ್ನ  ನಡೆಸಿದ್ದರ ಪರಿಣಾಮ ಕಾರ್ಕಳದಲ್ಲಿ  ಘಟಕ  ಸಿದ್ಧಗೊಂಡಿದೆ. ವಿ. ಸುನಿಲ್‌ಕುಮಾರ್‌ ಈಗ ಸಚಿವರೂ ಆಗಿದ್ದಾರೆ. ರಾಜ್ಯದ ಮೊದಲ ಘಟಕವನ್ನು ಸಿಎಂ  ಲೋಕಾರ್ಪಣೆಗೊಳಿಸುವ ನಿರೀಕ್ಷೆಯಿದೆ.

ಏನಿದು ಎಂಆರ್‌ಎಫ್ ಘಟಕ? :

ಎಂಆರ್‌ಎಫ್ ಘಟಕದಲ್ಲಿ ಘನತ್ಯಾಜ್ಯ ಸಂಗ್ರಹಿಸಿಡಲಾಗುತ್ತದೆ. ಸಂಗ್ರಹಿಸಿದ ಘನ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌, ಪೇಪರ್‌ಗಳನ್ನು ವಿಂಗಡಣೆ ಮಾಡಲಾಗುತ್ತದೆ. ವಿಂಗಡಿಸಿದ ತ್ಯಾಜ್ಯವನ್ನು ಒಟ್ಟು ಮಾಡಿ ದೊಡ್ಡ ದೊಡ್ಡ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತದೆ. ಅದಕ್ಕೆ ಏಜೆನ್ಸಿಗಳನ್ನು ನೇಮಕ ಮಾಡಲಾಗುತ್ತದೆ. ಇದರಿಂದ ಸ್ಥಳೀಯಾಡಳಿತಗಳಿಗೆ ತ್ಯಾಜ್ಯ ಸಂಗ್ರಹಿಸಿಡಲು ಜಾಗದ ಕೊರತೆ ಹಾಗೂ ಹೊರೆ ಕಮ್ಮಿಯಾಗುತ್ತದೆ.  ಆರ್ಥಿಕ  ಬಲ ತುಂಬಲಿದೆ.

ಗ್ರಾಮೀಣ ಘಟಕವಾಗಿ ಕಾರ್ಕಳದ ಎಂಎಫ್ಆರ್‌ ಘಟಕ ರಾಜ್ಯದಲ್ಲಿ ಮೊದಲನೆಯದು. ಘಟಕದ ಎಲ್ಲ ಜೋಡಣೆ, ತಾಂತ್ರಿಕ ಕಾರ್ಯಗಳು ಮುಗಿದಿದೆ. 10 ಟನ್‌ ಸಾಮರ್ಥ್ಯ ಹೊಂದಿದ್ದರೂ ಆರಂಭದಲ್ಲಿ 2 ಟನ್‌ ಬಳಕೆ ಮಾಡಲಾಗುತ್ತದೆ. ಅನಂತರದಲ್ಲಿ ಹೆಚ್ಚಿಸಲಾಗುತ್ತದೆ. ಸಂಬಂಧಿಸಿದವರ ಜತೆ ಚರ್ಚಿಸಿ ಶೀಘ್ರವೇ ಲೋಕಾರ್ಪಣೆ  ದಿನ ಗೊತ್ತುಪಡಿಸಲಾಗುವುದು. -ಡಾ| ನವೀನ್‌ ಭಟ್‌, ಜಿ.ಪಂ. ಸಿಇಒ ಉಡುಪಿ

 

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next