Advertisement

Cauvery: ಕಾವೇರಿ ನೀರಿಗೆ ರಾಜ್ಯದ ಒಮ್ಮತದ ಕೂಗು

11:09 PM Sep 22, 2023 | Team Udayavani |

ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯುಸೆಕ್‌ ನೀರು ಹರಿಸುವಂತೆ ಸುಪ್ರೀಂಕೋರ್ಟ್‌ನ ಮಧ್ಯಾಂತರ ಆದೇಶಕ್ಕೆ ರಾಜ್ಯದ ಹಲವೆಡೆ ಪ್ರತಿರೋಧ ವ್ಯಕ್ತವಾಗಿದೆ. ಈ ನಡುವೆಯೇ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ. “ಕಾವೇರಿ ಗದ್ದಲ” ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರಕಾರ ಅಗತ್ಯ ಸಿದ್ಧತೆಗಳನ್ನೂ ಕೈಗೊಂಡಿದೆ.

Advertisement

ಮುಂದುವರಿದ ಪ್ರತಿಭಟನೆ
ಬೆಂಗಳೂರು: ಶುಕ್ರವಾರವೂ ಮೈಸೂರು, ಮಂಡ್ಯ, ಚಾಮರಾಜನಗರ, ರಾಮ ನಗರ ಸಹಿತ ಹಲವು ಜಿಲ್ಲೆಗಳಲ್ಲಿ ರೈತ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ, ಹೆದ್ದಾರಿ ತಡೆ ನಡೆಸಿದರು. ಮಂಡ್ಯದ ಸರ್‌ ಎಂ.ವಿ. ಪ್ರತಿಮೆ ಮುಂಭಾಗ ನಡೆಯುತ್ತಿರುವ ಧರಣಿಯ ಸ್ಥಳದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಹಿತ ಹಲವರು ಪಾಲ್ಗೊಂಡಿದ್ದರು.

ಸಚಿವರ ಸಭೆಗೆ ಮುತ್ತಿಗೆ ಯತ್ನ
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ರೈತರು ಮೈಸೂರು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ನಡೆಸುತ್ತಿದ್ದ ಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ ಇಂದು ಬಿಜೆಪಿ ಹೋರಾಟ

ಬೆಂಗಳೂರು: ಕಾವೇರಿ ವಿವಾದ ಸಂಬಂಧ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾಗೃತಿ ಸಭೆ ನಡೆಸಲು ನಿರ್ಧರಿಸಿರುವ ಬಿಜೆಪಿ, ಬೆಂಗಳೂರಿನ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

Advertisement

ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇದು ಮುಂದುವರಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ. ಕಾವೇರಿ ವಿಚಾರದಲ್ಲಿ ಸರಕಾರ ಮೊದಲಿಂದಲೂ ಎಡವಟ್ಟು ಮಾಡಿಕೊಂಡಿದೆ. ಸುಪ್ರೀಂಕೋರ್ಟ್‌ನಲ್ಲಿ ಸರಿಯಾಗಿ ವಾದ ಮಾಡದೆ ಮತ್ತೆ 7.5 ಟಿಎಂಸಿ ನೀರು ಬಿಡುವ ಪರಿಸ್ಥಿತಿಗೆ ತಂದಿದೆ. ಇಷ್ಟಾದರೂ ತನ್ನ ಮುಂದಿನ ನಡೆ ಏನೆಂಬುದನ್ನು ಜನರಿಗೆ ತಿಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರಕಾರ ಅಧ್ಯಾದೇಶ ತರಬೇಕಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ರಾಜ್ಯ ಸರಕಾರ ಅಧ್ಯಾದೇಶ ತಂದಿದ್ದಾಗ ಸುಪ್ರೀಂಕೋರ್ಟ್‌ ಅದನ್ನು ತಳ್ಳಿ ಹಾಕಿದೆ. ಅದರ ಬದಲು ಈಗಲಾದರೂ ಸರಕಾರ ಮೇಲ್ಮನವಿ ಸಲ್ಲಿಸಿ ನಮ್ಮಲ್ಲಿ ಮುಂಗಾರು ಮುಕ್ತಾಯವಾಗಿದ್ದು, ತಮಿಳುನಾಡಿಗೆ ಹಿಂಗಾರು ಮಳೆ ಬರುವ ವಿಚಾರಗಳನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಬೇಕು. ಅದನ್ನು ಸುಪ್ರೀಂಕೋರ್ಟ್‌ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟರು.

ಕೇಂದ್ರದ ಮಧ್ಯಸ್ಥಿಕೆ ಅಸಾಧ್ಯ: ಜೋಷಿ
ಹುಬ್ಬಳ್ಳಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜ್ಯ ಸರಕಾರ ಆರಂಭದಿಂದಲೇ ತಪ್ಪು ಹೆಜ್ಜೆ ಇರಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ವಿಚಾರವಾಗಿ ಇತ್ತೀಚೆಗೆ ನಡೆದ ಸಂಸದರ ಸಭೆಯಲ್ಲಿ ಎರಡೂ ರಾಜ್ಯದವರು ಮಾತನಾಡಿಕೊಂಡು ಚರ್ಚಿಸಲು ಸಲಹೆ ನೀಡಿದ್ದೇವೆ. ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ 2,500 ಕ್ಯುಸೆಕ್‌ ನೀರು ಬಿಡುವುದಾಗಿ ಹೇಳುವ ಅಗತ್ಯ ಇರಲಿಲ್ಲ. ರಾಜ್ಯ ಕಾಂಗ್ರೆಸ್‌ ಹಾಗೂ ತಮಿಳುನಾಡಿನ ಡಿಎಂಕೆ ಸರಕಾರದ ಸಂಬಂಧ ಬಹಳ ಉತ್ತಮವಾಗಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಒಂದೆಡೆ ಕುಳಿತು ಮಾತನಾಡಿಕೊಂಡು ಸೌಹಾರ್ದದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದರು.

ಹಲವು ದಶಕಗಳಿಂದ ಕಾವೇರಿ ಸಮಸ್ಯೆ ಜೀವಂತವಿದೆ. ಸಮಸ್ಯೆ ಎದುರಾದಾಗ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಅನಂತರ ವ್ಯವಸಾಯಕ್ಕೆ ಕೊಡಬೇಕು. ಪ್ರತಿ ವರ್ಷ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ನಿಗದಿ ಮಾಡಲಾಗಿದೆ. ಆದರೆ ಮಳೆ ಕಡಿಮೆ ಆದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ಇಲ್ಲದಿರುವುದು ಈಗಿನ ಸಮಸ್ಯೆಗೆ ಕಾರಣವಾಗಿದೆ.
– ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ

Advertisement

Udayavani is now on Telegram. Click here to join our channel and stay updated with the latest news.

Next