Advertisement

ಕೋವಿಡ್ ಹೊಸ ಅಲೆ ಎದುರಿಸಲು ಸಿದ್ಧತೆ ರಾಜ್ಯಗಳು ಸನ್ನದ್ಧ

10:57 PM Dec 22, 2022 | Team Udayavani |

ಚೀನಾದಲ್ಲಿ ಕೊರೊನಾ ಸೋಂಕು ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿರುವಂತೆಯೇ, ಭಾರತದಲ್ಲಿ ಒಮಿಕ್ರಾನ್‌ನ ಉಪ ತಳಿ(ಬಿಎಫ್.7) ಪತ್ತೆಯಾಗಿರುವುದು ಮತ್ತೂಮ್ಮೆ ಎಲ್ಲರನ್ನೂ ಆತಂಕಕ್ಕೆ ನೂಕಿದೆ. ಕೇಂದ್ರ ಸರ್ಕಾರವೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಎಲ್ಲ ರಾಜ್ಯ ಸರ್ಕಾರಗಳೂ ಹೊಸ ಅಲೆಯನ್ನು ಎದುರಿಸಲು ಸಿದ್ಧತೆ ಆರಂಭಿಸಿವೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯಗಳು ಕೈಗೊಳ್ಳುತ್ತಿರುವ ಕ್ರಮಗಳ ಮಾಹಿತಿ ಇಲ್ಲಿದೆ.

Advertisement

ದೆಹಲಿ:

ಸಿಎಂ ಕೇಜ್ರಿವಾಲ್‌ ಅವರು ತಮ್ಮ ನಿವಾಸದಲ್ಲಿ ಗುರುವಾರ ಕೋವಿಡ್‌ ಪರಿಸ್ಥಿತಿ ಕುರಿತು ಸಭೆ ನಡೆಸಿ ಚರ್ಚಿಸಿದ್ದಾರೆ. ಹಲವು ದೇಶಗಳಲ್ಲಿ ಸೋಂಕು ವ್ಯಾಪಿಸುವಿಕೆಗೆ ಕಾರಣವಾಗಿರುವ ಒಮಿಕ್ರಾನ್‌ ಉಪತಳಿಯು ದೆಹಲಿಯಲ್ಲಿ ಈವರೆಗೆ ಪತ್ತೆಯಾಗಿಲ್ಲ. ಆದರೆ, ಎಕ್ಸ್‌ಬಿಬಿ ಎಂಬ ಉಪತಳಿಯು ಶೇ92ರಷ್ಟು ಸ್ಯಾಂಪಲ್‌ಗ‌ಳಲ್ಲಿ ಪತ್ತೆಯಾಗಿದೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ. ಪ್ರಸ್ತುತ ದಿನಕ್ಕೆ 2,500 ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಇದನ್ನು 1 ಲಕ್ಷಕ್ಕೇರಿಸಲಾಗುವುದು. 8 ಸಾವಿರ ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದಿದ್ದಾರೆ. ವ್ಯಾಪಾರಿಗಳು, ಅಂಗಡಿ ಮಾಲೀಕರು ಮಾಸ್ಕ್ ಧರಿಸುವಂತೆ ದೆಹಲಿಯ ಎಲ್ಲ ವ್ಯಾಪಾರಿ ಒಕ್ಕೂಟಗಳು ಸೂಚನೆ ನೀಡಿವೆ.

ಗುಜರಾತ್‌:

ಇತ್ತೀಚೆಗೆ ಬಿಎಫ್.7 ತಳಿಯು ರಾಜ್ಯದ ಮೂವರಲ್ಲಿ ಕಂಡುಬಂದಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗುಜರಾತ್‌ ಆರೋಗ್ಯ ಸಚಿವ ರಿಷಿಕೇಶ್‌ ಪಟೇಲ್‌ ಹೇಳಿದ್ದಾರೆ. ಗುರುವಾರ ಸಂಪುಟ ಸಭೆಯ ಬಳಿಕ ವಿವಿಧ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಲಾಗಿದೆ. ಎಲ್ಲ ರೀತಿಯ ಪರಿಸ್ಥಿತಿಗಳಿಗೂ ಸಿದ್ಧವಾಗುವಂತೆ ಸೂಚಿಸಲಾಗಿದೆ.

Advertisement

ಆಂಧ್ರಪ್ರದೇಶ:

ರಾಜ್ಯದಲ್ಲಿ ಸಾಕಷ್ಟು ಸಿಬ್ಬಂದಿ, ಹಾಸಿಗೆಗಳು, ಔಷಧಗಳು ಹಾಗೂ ಆಮ್ಲಜನಕ ಲಭ್ಯವಿದ್ದು, ಯಾವುದೇ ಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿದ್ದೇವೆ ಎಂದು ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ. ವಿಜಯವಾಡದಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ ಕೂಡ ಅಸ್ತಿತ್ವದಲ್ಲಿದ್ದು, ಪಾಸಿಟಿವ್‌ ಸ್ಯಾಂಪಲ್‌ಗ‌ಳನ್ನು ಕಡ್ಡಾಯವಾಗಿ ಇಲ್ಲಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದೆ.

ಉತ್ತರಾಖಂಡ:

ಸಾಂಕ್ರಾಮಿಕವನ್ನು ತಡೆಯುವ ಉದ್ದೇಶದಿಂದ ಎಲ್ಲರಿಗೂ ಬೂಸ್ಟರ್‌ ಡೋಸ್‌ ನೀಡುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಶುಕ್ರವಾರದಿಂದಲೇ ಎಲ್ಲ ಕಡೆ ಕ್ಯಾಂಪ್‌ಗ್ಳನ್ನು ನಡೆಸಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತದೆ ಎಂದು ಸಿಎಂ ಪುಷ್ಕರ್‌ ಸಿಂಗ್‌ ಧಮಿ ಹೇಳಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ನಿಯಂತ್ರಣ ಕೊಠಡಿಗಳನ್ನು ಪುನಾರಂಭಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಮಹಾರಾಷ್ಟ್ರ:

ಕೊರೊನಾ ಪರೀಕ್ಷೆಗಳನ್ನು ಹೆಚ್ಚಳ ಮಾಡುವಂತೆ ಎಲ್ಲ ಜಿಲ್ಲಾಡಳಿತ ಮತ್ತು ನಗರ ಪಾಲಿಕೆಗಳಿಗೆ ಮಹಾ ಆರೋಗ್ಯ ಇಲಾಖೆ ಸೂಚಿಸಿದೆ. ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌, ವ್ಯಾಕ್ಸಿನೇಷನ್‌ ಮತ್ತು ಕೊರೊನಾ ನಡವಳಿಕೆಯಂಥ 5 ಅಂಶಗಳ ಯೋಜನೆಯನ್ನು ಪಾಲಿಸುವಂತೆ ಜಿಲ್ಲೆಗಳಿಗೆ ನಿರ್ದೇಶಿಸಲಾಗಿದೆ.

ಪಂಜಾಬ್‌:

ಸಿಎಂ ಭಗವಂತ್‌ ಮಾನ್‌ ಅವರು ಗುರುವಾರ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 9 ಕೊರೊನಾ ಪಾಸಿವಿಟ್‌ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವ ಚೇತನ್‌ ಸಿಂಗ್‌ ಹೇಳಿದ್ದಾರೆ.

ಉತ್ತರಪ್ರದೇಶ:

ಅಧಿಕಾರಿಗಳೊಂದಿಗೆ ಸಿಎಂ ಯೋಗಿ ಆದಿತ್ಯನಾಥ್‌ ಮಹತ್ವದ ಸಭೆ ನಡೆಸಿದ್ದಾರೆ. ಆಸ್ಪತ್ರೆಗಳು, ಬಸ್‌, ರೈಲ್ವೆ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್ಧಾರಣೆ ಮಾಡುವಂತೆ ಜನರಲ್ಲಿ ಅರಿವು ಮೂಡಿಸಿ ಎಂದು ಸಿಎಂ ಸೂಚಿಸಿದ್ದಾರೆ. ಆತಂಕ ಪಡದೇ, ಅಲರ್ಟ್‌ ಆಗಿರುವಂತೆಯೂ ಸಲಹೆ ನೀಡಿದ್ದಾರೆ.

ಪಶ್ಚಿಮ ಬಂಗಾಳ:

ಪರಿಸ್ಥಿತಿ ನಿಯಂತ್ರಣದಲ್ಲಿದ್ದರೂ ನಾವು ಜಾಗರೂಕರಾಗಿರಬೇಕು. ಕೂಡಲೇ ಕೊರೊನಾ ಸ್ಥಿತಿ ಕುರಿತು ನಿಗಾ ವಹಿಸಲು ತಜ್ಞರ ಸಮಿತಿಯೊಂದನ್ನು ರಚಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ಸಿಎಂ ಮಮತಾ ಬ್ಯಾನರ್ಜಿ ಸೂಚಿಸಿದ್ದಾರೆ. ವಂಶವಾಹಿ ಪರೀಕ್ಷೆಯನ್ನು ಮುಂದುವರಿಸುವಂತೆಯೂ ನಿರ್ದೇಶಿಸಿದ್ದಾರೆ.

ತಮಿಳುನಾಡು:

ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲ ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಬೇಕು. ರೋಗಲಕ್ಷಣ ಕಂಡುಬಂದವರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸ್ಟಾಲಿನ್‌ ಸೂಚಿಸಿದ್ದಾರೆ. ಜತೆಗೆ, ಯಾರೂ ಭಯಪಡಬೇಕಾಗಿಲ್ಲ. ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ನಿಯಮ ಪಾಲಿಸುತ್ತೇವೆ; ಯಾತ್ರೆ ನಿಲ್ಲಿಸಲ್ಲ :
ಕೊರೊನಾ ಸಂಬಂಧಿ ನಿಯಮಗಳನ್ನು ಪಕ್ಷ ಪಾಲಿಸಲಿದೆ. ಆದರೆ, ಭಾರತ್‌ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಕಾಂಗ್ರೆಸ್‌ ಗುರುವಾರ ಸ್ಪಷ್ಟಪಡಿಸಿದೆ. ಇನ್ನೊಂದೆಡೆ, ಯಾತ್ರೆಯನ್ನು ನಿಲ್ಲಿಸಲೆಂದೇ ಸರ್ಕಾರವು ಹೊಸ ಹೊಸ ನೆಪಗಳನ್ನು ಹೇಳುತ್ತಿದೆ ಎಂದು ಪಕ್ಷದ ನಾಯಕ ರಾಹುಲ್‌ಗಾಂಧಿ ಆರೋಪಿಸಿದ್ದಾರೆ. ಇದೇ ವೇಳೆ, ಜಾಗತಿಕವಾಗಿ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಬಿಜೆಪಿ ರಾಜಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜನಾಕ್ರೋಶ ರ್ಯಾಲಿಯನ್ನು ರದ್ದು ಮಾಡಿದೆ.

ಎಕ್ಸ್‌ಬಿಬಿ ಉಪತಳಿ ಸುಳ್ಳು ಸುದ್ದಿ :
“ಒಮಿಕ್ರಾನ್‌ನ ಉಪತಳಿ “ಎಕ್ಸ್‌ಬಿಬಿ’ ಪತ್ತೆಯಾಗಿದ್ದು, ಇದು ಡೆಲ್ಟಾ ಉಪತಳಿಗಿಂತ ಐದು ಪಟ್ಟು ಅಪಾಯಕಾರಿಯಾಗಿದೆ. ಇದರಿಂದ ಸಾವಿನ ಸಂಖ್ಯೆಯು ಹೆಚ್ಚಾಗಬಹುದು. ಇತರೆ ಉಪತಳಿಗಳಿಗೆ ಹೋಲಿಸಿದರೆ ಇದರು ಗುಣಲಕ್ಷಣಗಳು ತೀರ ಭಿನ್ನ,’ ಎಂಬ ಸುದ್ದಿಯೊಂದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ಸುಳ್ಳು ಸುದ್ದಿ. ಇದನ್ನು ಜನರು ನಂಬಬಾರದು ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ.‌

Advertisement

Udayavani is now on Telegram. Click here to join our channel and stay updated with the latest news.

Next