ಬೆಂಗಳೂರು : ಸ್ವಾಮೀಜಿಗಳು ತಲೆಯ ಮೇಲೆ ಬಟ್ಟೆ ಹಾಕಿಕೊಳ್ಳುವುದಿಲ್ಲವೇ ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿರುದ್ಧ ಬಿಜೆಪಿ ಪಾಳಯ ಮುಗಿಬಿದ್ದಿದೆ. ಸಚಿವ ಬಿ.ಸಿ ನಾಗೇಶ್, ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,ಹಿಜಾಬ್ ವಿವಾದ ಕಾಂಗ್ರೆಸ್ ಪ್ರೇರಿತ ಸಮಸ್ಯೆ.ವ್ಯವಸ್ಥಿತವಾಗಿ ಪ್ರಚೋದನೆ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಹಿಂದುಗಳ ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಸ್ಲಿಂ ಸಮುದಾಯದ ತುಷ್ಠೀಕರಣ ಮಾಡುತ್ತಿದ್ದಾರೆ. ಅವರಿಗೆ ಹಿಂದೂ ಧರ್ಮವನ್ನ ಅವಹೇಳನ ಮಾಡುವುದೇ ಕೆಲಸ .ಸಿದ್ದರಾಮಯ್ಯ ಹಿಂದೂ ಕೇಸರಿಪೇಟ ಹಾಕಿದರೆ ಅದನ್ನ ಕಿತ್ತು ಎಸೆಯುತ್ತಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ನೀತಿಯನ್ನು ಮುಂದುವರಿಸುತ್ತಲೇ ಇದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ : ಮುಸ್ಲಿಂ ಹುಡುಗಿಯರು ತಲೆಗೆ ದುಪಟ್ಟ ಹಾಕಿದರೆ ತಪ್ಪೇನು,ಸ್ವಾಮೀಜಿಗಳು ತಲೆಗೆ ಬಟ್ಟೆ ಹಾಕಲ್ವಾ?
ಶಾಲಾ ಪಠ್ಯ ಪರಿಷ್ಕರಣೆಯನ್ನು ನಾನು ಸ್ವಾಗತಿಸುತ್ತೇನೆ. ಯಾರ ಯಾರದ್ದೋ ವೈಭವೀಕರಣಕ್ಕೆ ಕಡಿವಾಣ ಹಾಕಬೇಕಿದೆ. ವೈಭವೀಕರಣ ತೆಗೆದು ವಾಸ್ತವಿಕತೆಯ ಪಾಠ ಅಳವಡಿಸಲಿ ಎಂದರು. ಟಿಪ್ಪು, ಅಕ್ಬರ್, ಬಾಬರ್ ನ್ನ ವೈಭವೀಕರಿಸಿ ಪಠ್ಯದಲ್ಲಿ ಸೇರಿಸಲಾಗಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ಶಿವಾಜಿ ಕುರಿತ ಇತಿಹಾಸ ತಿಳಿಸಬೇಕಿದೆ ಎಂದರು.
”ಮಾನ್ಯ ಸಿದ್ದರಾಮಯ್ಯನವರೇ, ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ.ಮೊದಲನೆಯದಾಗಿ ಹಿಜಾಬ್, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ.ಹಿಜಾಬ್ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಾಬ್‌ಗೆ ಅವಕಾಶ ನಿರಾಕರಿಸಲಾಗಿದೆ, ಅಷ್ಟೇ” ಎಂದು ಬಿಜೆಪಿ ಟ್ವೀಟ್ ಮಾಡಿದೆ.