ಮೈಸೂರು: ಸಿಎಎ ಮತ್ತು ಎನ್.ಆರ್.ಸಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಪರ ನಾಡಿನ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಪ್ರತಿಕ್ರಿಯೆ ನೀಡಿದರು.
ಮೈಸೂರಿನ ಕುವೆಂಪುನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಮರ ನಡುವೆ ಒಡೆದು ಆಳುವ ನೀತಿ ಅನುಸರಿಸಿದರು. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರೂ ಕೂಡ ಅದೇ ತಂತ್ರ ಅನುಸರಿಸಿದರು. ಕಾಂಗ್ರೆಸ್ ಪಕ್ಷ ಈಗಲೂ ಅದನ್ನೇ ಮಾಡುತ್ತಿದೆ. ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಂಡಿದೆ. ಇತ್ತೀಚೆಗೆ ಬಿಜೆಪಿಗೂ ಕಾಂಗ್ರೆಸ್ ನ ರೋಗ ಬಂದಂತಿದೆ. ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ. ಅವರಿಗೆ ಸ್ವಂತದ್ದು ಅಂತಾ ಏನೂ ಇಲ್ಲ. ಅವರನ್ನು ಕೆಳಗಿಳಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಜೆ.ಎನ್.ಯು ನಲ್ಲಿರುವ ವಿದ್ಯಾರ್ಥಿಗಳಿಗೆ ಗಲಾಟೆ ಮಾಡುವುದು ಬಿಟ್ಟು ಬೇರೇನೂ ಗೊತ್ತಿಲ್ಲಾ. ಅದನ್ನೇ ಇತರ ವಿವಿ ಗಳ ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ ಎಂದು ಎಸ್ ಎಲ್ ಭೈರಪ್ಪ ಹೇಳಿದರು.
ಸಿಎಎ ಮತ್ತು ಎನ್.ಆರ್.ಸಿ ವಿಚಾರದಲ್ಲಿ ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ. ಸರ್ಕಾರ ಏನೇ ಮಾಡಿದರೂ ಟೀಕಿಸುವುದೇ ಪ್ರತಿಪಕ್ಷಗಳ ಕೆಲಸವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷಗಳು ಸರ್ಕಾರದ ಒಳ್ಳೆಯ ಕೆಲಸಗಳನ್ನು ಮೆಚ್ಚಬೇಕು. ಜವಾಬ್ದಾರಿಯುತ ಪ್ರತಿಪಕ್ಷ ಇಲ್ಲದಿರುವುದರಿಂದ ಈ ರೀತಿ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿ.ವಿ ಕ್ಯಾಂಪಸ್ ನಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೇರೆ ವಿವಿಯ ಗಾಳಿ ಇಲ್ಲಿಗೂ ಬೀಸಿದೆ. ವಿದ್ಯಾರ್ಥಿಗಳನ್ನೂ ದಿಕ್ಕು ತಪ್ಪಿಸಲಾಗುತ್ತಿದೆ. ಜನರ ತೆರಿಗೆ ಹಣದಿಂದ ವಿ.ವಿ ಗಳು ನಡೆಯುತ್ತಿವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಓದಿನತ್ತ ಗಮನ ಹರಿಸಬೇಕು. ಬರೀ ಪ್ರತಿಭಟನೆ ಮಾಡುತ್ತಾ ಧಿಕ್ಕಾರ ಕೂಗಿದರೇ ಏನು ಪ್ರಯೋಜನ ಎಂದು ಹೇಳಿದರು.
ಪ್ರಗತಿಪರರು ಅಂದರೆ ಯಾರು? ಎಂದು ಪ್ರಶ್ನಿಸಿದ ಅವರು, ಸಾಹಿತಿಗಳಿಗೆ ಯಾವುದೇ ಅಜೆಂಡಾ ಇರಬಾರದು. ಸಾಹಿತಿಗಳು ಸ್ವತಂತ್ರವಾಗಿ ಯೋಚನೆ ಮಾಡಬೇಕು. ನಾನು ಯಾವುದೇ ಗುಂಪಿಗೆ ಸೇರಿದವನಲ್ಲ. ಪ್ರೊಫೆಸರ್ ಗಳು ಪ್ರೊಫೆಸರ್ ಗಳಾಗಿರುವುದೇ ಜಾತಿಯಿಂದ ಎಂದರು.