Advertisement

ಕುಮಟಳ್ಳಿಗೆ ಅನ್ಯಾಯ ಆಗಬಾರದು: ಸಚಿವ ಬಿ.ಸಿ. ಪಾಟೀಲ್

03:07 PM Feb 23, 2020 | Suhan S |

ಚಿತ್ರದುರ್ಗ: ಮಹೇಶ್ ಕುಮಟಳ್ಳಿಗೆ ಅನ್ಯಾಯ ಆಗಬಾರದು.ಅದು ನಮ್ಮ ಒತ್ತಾಯ ಕೂಡಾ. ಈ ಬಗ್ಗೆ ಮುಖ್ಯಮಂತ್ರಿ ಬಳಿಯೂ ಒತ್ತಾಯ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

Advertisement

ಭಾನುವಾರ ಚಿತ್ರದುರ್ಗದ ಮಾದಾರ ಚನ್ನಯ್ಯ ಹಾಗೂ ಮಡಿವಾಳ ಮಾಚಿದೇವ ಗುರುಪೀಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಟಳ್ಳಿಯವರು ತ್ಯಾಗ ಮಾಡಿ ಬಂದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಸಿಎಂಗೆ ಮನವಿ‌ ಮಾಡುತ್ತೇನೆ. ಸಿಎಂ ಬಿಎಸ್ ವೈ ಅವರಿಗೆ ನ್ಯಾಯ ದೊರಕಿಸುವ ಕೆಲ‌ಸ ಮಾಡುತ್ತಾರೆ ಎಂದು ರಮೇಶ್ ಜಾರಕಿಹೊಳಿ  ಹೇಳಿಕೆಗೆ ಪೂರಕವಾಗಿ ಪ್ರತಿಕ್ರಿಯಿಸಿದರು.

17 ಜನ ಶಾಸಕರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರು ಚುನಾವಣೆಗೆ ನಿಲ್ಲಲಿಲ್ಲ, ಕೆಲವರು ಸೋತಿದ್ದಾರೆ. ಅವರಿಗೆ ಕಾನೂನು ತೊಡಕಿದೆ. ಅವರು ಗೆದ್ದು ಮಂತ್ರಿಗಳಾಗಬಹುದು ಎಂಬ ಸುಪ್ರೀಂ ಕೋರ್ಟ್ ಆದೇಶ ಇದೆ. ಅವರಿಗೂ ಸೂಕ್ತ ಸ್ಥಾನ ಕಲ್ಪಿಸುವುದಾಗಿ ಸಿಎಂ ಬಿಎಸ್ ವೈ ಹೇಳಿದ್ದಾರೆ ಎಂದರು.

ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್  ನೀಡಿದ ಬಿ.ಸಿ. ಪಾಟೀಲ್,  ಒಳಗಿನ, ಹಿಂದಿನ, ಮುಂದಿನ ಬಾಗಿಲಲ್ಲಿ ಸರ್ಕಾರ ಹಿಡಿಯಲು ಇವರು ಮಾಡಿದ್ದೇನು. ಸಿದ್ದರಾಮಯ್ಯನವರು ಈಗ ಹತಾಶರಾಗಿದ್ದಾರೆ. ಅವರು ನಮ್ಮನ್ನು ನೆನಪಿಸಿಕೊಳ್ಳಬೇಕು. ನಮ್ಮಿಂದ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ‌ ಸಿಕ್ಕಿದೆ. ಇಲ್ಲದಿದ್ರೆ ಅವರಿಗೆ ಸರ್ಕಾರಿ ಕಾರು, ಬಂಗ್ಲೆ, ಇಲ್ಲದೆ ಯಾರದೋ ಹೆಸರಿನಲ್ಲಿ ಬಂಗ್ಲೆಯಲ್ಲಿ ವಾಸ ಮಾಡಬೇಕಾಗಿತ್ತು. ನಾವು 17ಜನ ರಾಜಿನಾಮೆ ಕೊಟ್ಟು ಸರ್ಕಾರ ಬಿದ್ದಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ಸ್ಥಾನ‌ ಸಿಕ್ಕಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರಿಗೆ ಒಳಗೊಳಗೆ ನಮ್ಮ ಮೇಲೆ ಪ್ರೀತಿ ಇದೆ. ವಿರೋಧ ಪಕ್ಷದ ನಾಯಕ‌ ಆದ ಮೇಲೆ‌ ವಿರೋಧಿಸಲೇ ಬೇಕಲ್ಲಾ ಎಂದರು.

ಬಿಜೆಪಿ ಆಡಳಿತದಲ್ಲಿ ರಾಜ್ಯ ಪೊಲೀಸ್ ರಾಜ್ ಆಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವವರು ಟೀಕಿಸುವುದು ಸಹಜ. ಪೊಲೀಸರು ನಿಸ್ಪಕ್ಷಪಾತವಾಗಿ ಇರುತ್ತಾರೆ. ಕಾಮಾಲೆ‌ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅನ್ನುವ ಹಾಗೆ,  ವಿರೋಧ ಪಕ್ಷದವರಿಗೆ ಪೋಲೀಸವರು ಏನೇ ಮಾಡಿದ್ರು ತಪ್ಪು ಅನ್ನಿಸುತ್ತೆ‌. ಬಿಜೆಪಿ ಪರವಾಗಿದ್ದಾರೆ ಎಂಬ ಭಾವನೆ ಬರುತ್ತೆ. ಹಾಗೆ ಹೇಳಿ‌ ಪೊಲೀಸರ ನೈತಿಕತೆಯನ್ನು ಕಡಿಮೆ ಮಾಡಬಾರದು ಎಂದರು.

Advertisement

ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡು ಹೊಡೆಯುವ ಕಾನೂನು ಬೇಕು:  ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತಾನಾಡಿದ ಅವರು,  ಅಂಥವರನ್ನು ಕಂಡಲ್ಲಿ‌ ಗುಂಡಿಟ್ಟು ಕೊಲ್ಲುವಂತ ಕಾನೂನು ತರಬೇಕು. ತಿನ್ನೋದು ಭಾರತದ ಅನ್ನ, ಕುಡಿಯೋದು ಭಾರತದ ನೀರು, ಗಾಳಿ, ಪಾಕಿಸ್ಥಾನಕ್ಕೆ ಜಿಂದಾಬಾದ್ ಎಂದು‌ ಹೇಳುವುದಾದರೆ ಯಾಕೆ ಇಲ್ಲಿರಬೇಕು ಎಂದು ಪ್ರಶ್ನಿಸಿದರು. ಇಂಥವರನ್ನ ಬಗ್ಗು ಬಡೆಯಲು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು. ಅದಕ್ಕಾಗಿ ನಾನು ಪ್ರಧಾನಿಯವರಿಗೆ ಒತ್ತಾಯಿಸುತ್ತೇನೆ ಎಂದರು.

ರಾಜ್ಯದಲ್ಲಿ ಕ್ಯಾಸಿನೋ ತರೆಯುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿಕೆಯನ್ನು ಬಿ.ಸಿ ಪಾಟೀಲ್ ಸಮರ್ಥಿಸಿಕೊಂಡರು. ಕ್ಯಾಸಿನೋ ತೆರೆಯುವುದರಲ್ಲಿ ತಪ್ಪೇನೂ‌ ಇಲ್ಲ. ಜನರು‌ ಕ್ಯಾಸಿನೋ ಆಡಲು ದೇಶ, ವಿದೇಶಗಳಿಗೆ ಹೋಗುತ್ತಾರೆ. ನಮ್ಮ ದುಡ್ಡು ಹೋಗಿ‌ ಶ್ರೀಲಂಕಾ,  ಸಿಂಗಾಪುರ ಸೇರುತ್ತದೆ. ಅದು‌ ನಮ್ಮ ದೇಶಕ್ಕೆ ಕೊರತೆ ಆಗೋದಿಲ್ಲವೇ ?ಟೂರಿಸಂ ಅನ್ನೋದು ಮಳೆ ಇಲ್ಲದ ಬೆಳೆ ಇದ್ದಂತೆ. ಅದನ್ನು ಕಾನೂನು ಚೌಕಟ್ಟಿನಲ್ಲಿ ನಿಯಮಿತವಾಗಿ‌ ಮಾಡಲಿ ಎಂದರು.

ಇದೇ ವೇಳೆ ನೀರಾ ಬಾರ್ ತರೆಯುವ ಅಬಕಾರಿ ಸಚಿವ ನಾಗೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರೈತರಿಗೆ ಅನುಕೂಲ ಆಗುವುದಾದರೆ ನೀರಾ ಬಾರ್ ತೆರೆಯುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಎಚ್.ಡಿ. ದೇವೇಗೌಡರು ತೆಂಗಿನಿಂದ ನೀರಾ ತೆಗೆಯಲು ಹೋರಾಟ ಮಾಡಿದ್ದರು. ಚನ್ನಪಟ್ಟಣದಿಂದ ಪಾದಯಾತ್ರೆ ಕೂಡ ಮಾಡಿರಲಿಲ್ಲವೇ ಎಂದು ನೆನಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next