ಗಂಗಾವತಿ: ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗ್ಗೆ ಕ್ಷುಲ್ಲಕ ವಿಚಾರಕ್ಕಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೀಳಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹಾಲುಮತ ಕುರುಬ ಸಮಾಜದ ಮುಖಂಡ ಡ್ಯಾಗಿ ರುದ್ರೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ತಾಲೂಕಿನ ವಿಠಲಾಪೂರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ವೃತ್ತದ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿದ್ದರಾಮಯ್ಯನವರಿಗೆ ಎಲ್ಲಾ ಜನಾಂಗ ಮತ್ತು ಪಕ್ಷಗಳಲ್ಲಿ ಅಭಿಮಾನಿಗಳಿದ್ದು ಕೀಳಾಗಿ ಮಾತನಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಸಿದ್ದರಾಮಯ್ಯನವರ ಹೇಳಿಕೆಯನ್ನು ತಿರುಚಿ ಜಾತಿ ಜಗಳ ಹಚ್ಚುವ ಮಾಧ್ಯಮಗಳನ್ನು ಜನರು ತಿರಸ್ಕಾರ ಮಾಡುವ ಕಾಲ ದೂರವಿಲ್ಲ. ಆದರೂ ಮೂಲ ಗ್ರಹಪೀಡತ ಕೆಲವರು ಪದೇ ಪದೇ ಸಿದ್ದರಾಮಯ್ಯನವರ ಹೆಸರನ್ನು ಎಳೆದು ತರುವ ಮೂಲಕ ಅವಮಾನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಫೋಟೋ, ಸ್ಟೇಟಸ್ ಹಾಕುವ ಮೂಲಕ ತಮ್ಮ ಕೀಳುತನ ತೋರಿಸುತ್ತಿದ್ದು ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಸಾಪಟ್ಟಣ ನಂಜುಂಡೇಶ್ವರ ಮಠದ ಸಿದ್ದರಾಮಯ್ಯ ಸ್ವಾಮಿ ಮಾತನಾಡಿ, ಎಲ್ಲಾ ಹಿಂದುಳಿದ ಜನಾಂಗದವರು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿರೇಶ ಆದಾಪೂರ, ಸಗರಪ್ಪ, ಹನುಮೇಶ ಡ್ಯಾಗಿ,ನಾಗರಾಜ ಕನಕಗಿರಿ, ಬೆಟ್ಟಪ್ಪ, ದೇವಪ್ಪ, ಮಾರುತಿ, ವಿರುಪಣ್ಣ, ರಾಮಣ್ಣ ಸೇರಿ ಮತ್ತಿತ್ತರರಿದ್ದರು.