Advertisement

ಜಿಲ್ಲೆಯ ಪಡಿತರ ಚೀಟಿಯಲ್ಲಿ 2.70 ಲಕ್ಷ ಗೃಹಲಕ್ಷ್ಮೀಯರು

01:36 PM Jul 20, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಗೆ ಬುಧವಾರ ಅಧಿಕೃತವಾಗಿ ರಾಜ್ಯಾದ್ಯಂತ ಚಾಲನೆ ಸಿಕ್ಕಿದ್ದು ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವರದಿ ಪ್ರಕಾರ ಬರೋಬ್ಬರಿ 2.70 ಲಕ್ಷ ಮಂದಿ ಫ‌ಲಾನುಭವಿಗಳು ಗೃಹ ಲಕ್ಷ್ಮಿ  ಯೋಜನೆಗೆ ಒಳಪಡಲಿದ್ದಾರೆಂದು ಅಂದಾಜಿಸಲಾಗಿದೆ.

Advertisement

ಹೌದು, ಜಿಲ್ಲೆಯ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ವ್ಯಾಪ್ತಿಯ ಎಎವೈ ಹಾಗೂ ಬಿಪಿಎಲ್‌ ಪಡಿತರ ಚೀಟಿಗಳ ಆಧಾರದಲ್ಲಿ ಯಜಮಾನಿ ಮಹಿಳೆ ಎಂದು ನಮೂದು ಆಗಿರುವ ಮಹಿಳೆಯರು ಮಾತ್ರ ಗೃಹಲಕ್ಷ್ಮೀ ಯೋಜನೆಗೆ ಸೇರಲಿದ್ದಾರೆ. ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಾರ ಜಿಲ್ಲೆಯ 28,420 ಅಂತ್ಯೋದಯ ಅನ್ನ ಯೋಜನೆ (ಎಎವೈ) ಕಾರ್ಡ್‌, ಆದ್ಯತಾ ಪಡಿತರ ಚೀಟಿ (ಬಿಪಿಎಲ್‌) ಒಟ್ಟು 2,79,968 ಕಾರ್ಡ್‌ ಹಾಗೂ ಎಪಿಎಲ್‌ ಕಾರ್ಡ್‌ ಸಂಖ್ಯೆ ಒಟ್ಟು 27,029 ಕಾರ್ಡ್‌ ಸೇರಿ ಒಟ್ಟು 3,27,417 ಕಾರ್ಡ್‌ಗಳಿವೆ. ಆದರೆ, ಆ ಪೈಕಿ ಮಹಿ ಳಾ ಮುಖ್ಯಸ್ಥರ ಹೆಸರಲ್ಲಿರುವ ಪಡಿತರ ಚೀಟಿ ಗಳ ಲೆಕ್ಕಾಚಾರ ನೋಡಿದರೆ ಜಿಲ್ಲೆಯಲ್ಲಿಒಟ್ಟು 27,029 ಎಎವೈ ಕಾರ್ಡ್‌, 2,59,854 ಬಿಪಿಎಲ್‌, 12,794 ಎಪಿಎಲ್‌ ಕಾರ್ಡ್‌ ಸೇರಿ ಒಟ್ಟು 2,99,677 ಕಾರ್ಡ್‌ಗಳಿವೆ.

ನೋಂದಣಿ ಅಭಿಯಾನಕ್ಕೆ ಚಾಲನೆ: ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ., ಪ್ರೋತ್ಸಾಹ ಧನ ನೀಡುವ ಗೃಹ ಲಕ್ಷ್ಮೀ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ ಯೋಜನೆಯಡಿ ಫ‌ಲಾನುಭವಿಗಳ ನೋಂದಣಿಗೆ ಚಾಲನೆ ನೀಡಿದ್ದು, ವಿಶೇಷವಾಗಿ ಗ್ರಾಮ ಒನ್‌, ಕರ್ನಾಟಕ ಒನ್‌ ಹಾಗೂ ಗ್ರಾಪಂಗಳ ಬಾಪೂಜಿ ಕೇಂದ್ರಗಳಲ್ಲಿ ಫ‌ಲಾನುಭವಿಗಳು ಆಗಲು ಅರ್ಹ ಇರುವ ಗೃಹ ಲಕ್ಷ್ಮೀಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ನಗರ ಪ್ರದೇಶದಲ್ಲಿ ಜನತೆ ಕರ್ನಾಟಕ ಒನ್‌ನಲ್ಲಿ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ನೋಂದಣಿಗೆ ಏನು ದಾಖಲೆ ಇರಬೇಕು?: ಗೃಹಲಕ್ಷ್ಮೀ ಯೋಜನೆಯಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಕಡ್ಡಾಯವಾಗಿ ಪಡಿತರ ಚೀಟಿ ಸಂಖ್ಯೆ, ಆಧಾರ್‌ ಕಾರ್ಡ್‌ ಮತ್ತು ಆಧಾರ್‌ ಜೋಡಣೆ ಆಗಿರುವ ಬ್ಯಾಂಕ್‌ ಪಾಸ್‌ ಬುಕ್‌, ಪತಿಯ ಆಧಾರ್‌ ಕಾರ್ಡ್‌ ಕಡ್ಡಾಯವಾಗಿ ನೋಂದಣಿ ವೇಳೆ ತರಬೇಕು.

ಎಸ್‌ಎಂಎಸ್‌ ಮಾಡಿ ಮಾಹಿತಿ ಪಡೆಯಿರಿ: ಜಿಲ್ಲೆಯಲ್ಲಿರುವ ಪ್ರತಿ ಫ‌ಲಾನುಭವಿಗಳು ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ, ಮತ್ತು ಸ್ಥಳವನ್ನು 1902ಗೆ ಕಾಲ್‌ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಂಎಸ್‌ ಮೂಲಕ ಸಂದೇಶ ಕಳುಹಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಒಂದು ವೇಳೆ ನಿಗದಿತ ದಿನಾಂಕದಂದು ಹೋಗಲು ಸಾಧ್ಯವಾಗದೇ ಇದ್ದಲ್ಲಿ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 ರಿಂದ 7 ಗಂಟೆಯೊಳಗೆ ಭೇಟಿ ನೀಡಿ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.

Advertisement

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ವಿತರಿಸಿರುವ ಪಡಿತರ ಚೀಟಿಗಳಲ್ಲಿ ಯಜಮಾನಿ ಮಹಿಳೆ ಎಂದು ನಮೂದು ಆಗಿರುವವರನ್ನು ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಪರಿಗಣಿಸಲಾಗಿದೆ. ಸುಮಾರು 2.70 ಲಕ್ಷ ಮಂದಿ ಫ‌ಲಾನುಭವಿಗಳಾಗುವ ಸಾಧ್ಯತೆಯಿದ್ದು ನೋಂದಣಿ ಆರಂಭಗೊಂಡಿದೆ. ● ಅಶ್ವತ್ಥಮ್ಮ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಬಳ್ಳಾಪುರ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next