Advertisement

ಸ್ಟೇಟ್‌ಬ್ಯಾಂಕ್‌-ನೆಲ್ಲಿಕಾಯಿ ರಸ್ತೆ ಏಕಮುಖ; ಸಂಚಾರ ಬದಲಾವಣೆಗೆ ಆಕ್ಷೇಪ

01:03 PM Jul 19, 2022 | Team Udayavani |

ಸ್ಟೇಟ್‌ಬ್ಯಾಂಕ್‌: ಸ್ಟೇಟ್‌ ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ ಸ್ಮಾರ್ಟ್‌ಸಿಟಿ ಮೂಲಕ ಅಭಿವೃದ್ಧಿಯಾಗುತ್ತಿದ್ದಂತೆ, ಅದಕ್ಕೆ ಸಂಪರ್ಕ ಕಲ್ಪಿಸುವ ನೆಲ್ಲಿಕಾಯಿ ರಸ್ತೆ ಮಾತ್ರ ಏಕಮುಖ ಸಂಚಾರಕ್ಕೆ ಬದಲಾಗಿದ್ದು, ಸ್ಥಳೀಯ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.

Advertisement

ಬಂದರು ಪೊಲೀಸ್‌ ಠಾಣೆಯ ಪಕ್ಕದ ಪೆಟ್ರೋಲ್‌ ಬಂಕ್‌ ಬಳಿಯಿಂದ ಹ್ಯಾಮಿಲ್ಟನ್‌ ಸರ್ಕಲ್‌ ಗೆ ತೆರಳುವ ನೆಲ್ಲಿಕಾಯಿ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ. ಇಲ್ಲಿ ಹ್ಯಾಮಿಲ್ಟನ್‌ ಸರ್ಕಲ್‌ನಿಂದ ಬಂದರು ಪೊಲೀಸ್‌ ಠಾಣೆ ಕಡೆಗೆ ಬರಲು ಮಾತ್ರ ಅವಕಾಶ ನೀಡಲಾಗಿದೆ.

ಹೀಗಾಗಿ, ಬಂದರು ಪೊಲೀಸ್‌ ಠಾಣೆ ಕಡೆಯಿಂದ ರೊಸಾರಿಯೋ ಕಡೆಗೆ ತೆರಳಬೇಕಾದರೆ ಪರ್ಯಾಯವಾಗಿ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌, ಕ್ಲಾಕ್‌ ಟವರ್‌, ಎ.ಬಿ. ಶೆಟ್ಟಿ ಸರ್ಕಲ್‌ ಮುಖೇನ ರೊಸಾರಿಯೋ ಕಡೆಗೆ ತೆರಳಬೇಕು ಅಥವಾ ಬಂದರು ಪೊಲೀಸ್‌ ಠಾಣೆ ಮುಂಭಾಗದಿಂದ ಬದ್ರಿಯಾ ಕಾಲೇಜು ಸಂಪರ್ಕ ರಸ್ತೆಯ ಮೂಲಕ ತೆರಳಬಹುದಾಗಿದೆ.

ʼಸದಾ ಸಂಚಾರ ದಟ್ಟಣೆ ಇರುವ ನಗರದ ಮುಖ್ಯ ರಸ್ತೆಯ ಸಂಚಾರ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ನೆಲ್ಲಿಕಾಯಿ ರಸ್ತೆಯನ್ನು ಏಕಮುಖ ಮಾಡಲಾಗಿದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ. ಆದರೆ “ಪರ್ಯಾಯವಾಗಿ ಬಳಕೆಗೆ ಇರುವ ಒಂದು ರಸ್ತೆ ಮತ್ತಷ್ಟು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇನ್ನೊಂದು ರಸ್ತೆಯಲ್ಲಿ ಸುತ್ತೂ ಬಳಸಿ ಹೋಗಬೇಕಾಗಿದೆ’ ಎಂಬುದು ಸ್ಥಳೀಯರ ವಾದ.

ಬಂದರು ಪೊಲೀಸ್‌ ಠಾಣೆ ಮುಂಭಾಗದಿಂದ ಬದ್ರಿಯಾ ಕಾಲೇಜು (ನಾರಾಯಣ ಹೊಟೇಲ್‌ ಮುಂಭಾಗ) ರಸ್ತೆಯನ್ನು ಪರ್ಯಾ ಯವಾಗಿ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಮೊದಲೇ ಸಂಚಾರ ದಟ್ಟಣೆಯಿಂದ ನಲುಗಿರುವ ಈ ರಸ್ತೆಯ ಎರಡೂ ಬದಿಯಲ್ಲಿ ಲೋಡಿಂಗ್‌-ಅನ್‌ಲೋಡಿಂಗ್‌ ಕಾರಣದಿಂದ ಪಾರ್ಕಿಂಗ್‌ ಕಿರಿಕಿರಿ ತಪ್ಪಿದ್ದಲ್ಲ. ಇಂತಹ ರಸ್ತೆಯಲ್ಲಿ ಇದೀಗ ಹೆಚ್ಚುವರಿಯಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಸಂಚಾರ ದಟ್ಟಣೆ ಇಲ್ಲಿ ಅಧಿಕವಾಗಿದೆ.

Advertisement

‌ಸಮಸ್ಯೆ ಆಗಬಾರದು: ಸ್ಮಾರ್ಟ್‌ಸಿಟಿ ಮೂಲಕ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಆದರೆ ಉತ್ತಮ. ಆದರೆ ಅದರಿಂದಾಗಿ ನಿತ್ಯ ಸಂಚಾರ ನಡೆಸುವ ವಾಹನದವರಿಗೆ ಸಮಸ್ಯೆ ಆಗಬಾರದು. ನೆಲ್ಲಿಕಾಯಿ ರಸ್ತೆಯಲ್ಲಿ ಸುಗಮ ಸಂಚಾರ ನಡೆಯುತ್ತಿತ್ತು. ಆದರೆ ಅದನ್ನು ಏಕಮುಖ ಮಾಡಿ ಈಗ ಸಮಸ್ಯೆ ಅನುಭವಿಸುವಂತಾಗಿದೆ. ಪರ್ಯಾಯವಾಗಿರುವ ರಸ್ತೆಗಳು ಇಕ್ಕಟ್ಟಾಗಿರುವಾಗ ಸಮರ್ಪಕವಾಗಿದ್ದ ರಸ್ತೆಯನ್ನು ಏಕಮುಖ ಮಾಡಿದ್ದು ಸರಿಯಲ್ಲ. – ಅಬ್ದುಲ್‌ ಲತೀಫ್‌, ಸ್ಥಳೀಯ ಕಾರ್ಪೊರೇಟರ್‌

ಪರಿಶೀಲಿಸಿ ಕ್ರಮ: ನೆಲ್ಲಿಕಾಯಿ ರಸ್ತೆ ಏಕಮುಖ ಮಾಡಿರುವ ಬಗ್ಗೆ ಕೆಲವರಿಂದ ಆಕ್ಷೇಪ ಕೇಳಿಬಂದಿದೆ. ಇದರ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಶೀಘ್ರದಲ್ಲಿ ಒಂದು ಅಂತಿಮ ತೀರ್ಮಾನ ಮಾಡಲಾಗುವುದು. – ಪ್ರೇಮಾನಂದ ಶೆಟ್ಟಿ, ಮೇಯರ್‌, ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next