Advertisement

ಮಂಜುನಾಥ್‌, ನಲಪಾಡ್‌, ರಕ್ಷಾ ನಡುವೆ ಪೈಪೋಟಿ

01:26 AM Jan 11, 2021 | Team Udayavani |

ಬೆಂಗಳೂರು: ತೀವ್ರ ಕುತೂಹಲ ಹಾಗೂ ಪೈಪೋಟಿಗೆ ಕಾರಣವಾಗಿರುವ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಹತ್ತು ಜಿಲ್ಲೆಗಳಲ್ಲಿ ರವಿವಾರ ಮತದಾನ ನಡೆದು ಮೊದಲ ದಿನ 59,418 ಮತ ಚಲಾವಣೆಯಾಗಿದೆ.

Advertisement

ಇದೇ ಮೊದಲ ಬಾರಿಗೆ ಆನ್‌ಲೈನ್‌ ಮತದಾನ ನಡೆದಿರುವುದು ವಿಶೇಷ. ಒಟ್ಟು 4.20 ಲಕ್ಷ ಮತದಾರ ರಿದ್ದು ಸೋಮವಾರ ಮತ್ತು ಮಂಗಳವಾರವೂ ಮತದಾನ ನಡೆಯಲಿದೆ.

ಎನ್‌ಎಸ್‌ಯುಐ ಅಧ್ಯಕ್ಷ ಎಚ್‌.ಎಸ್‌. ಮಂಜುನಾಥ್‌, ಮಾಜಿ ಸಚಿವ ಎಂ.ಆರ್‌. ಸೀತಾರಾಮ್‌ ಪುತ್ರ ರಕ್ಷಾ ರಾಮಯ್ಯ, ಶಾಸಕ ಎನ್‌.ಎ. ಹ್ಯಾರೀಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ನಡುವೆ ಪೈಪೋಟಿಯಿದೆ ಎಂದು ಹೇಳಲಾಗಿದೆ. ಸಂದೀಪ್‌ ನಾಯಕ್‌, ಭವ್ಯಾ, ಖಾಲೀದ್‌ ಸಹ ಕಣದಲ್ಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಿಥುನ್‌ ರೈ ಶನಿವಾರ ದಿಢೀರ್‌ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರಿಂದ ಮಂಜುನಾಥ್‌ ಹಾಗೂ ರಕ್ಷಾ ರಾಮಯ್ಯ ಅವರಿಗೆ ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೊದಲ ದಿನ ಬೆಂಗಳೂರು ದಕ್ಷಿಣ, ಕೋಲಾರ, ಮೈಸೂರು ನಗರ, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ, ಬಳ್ಳಾರಿ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಿಕ್ಕೋಡಿಯಲ್ಲಿ ಮತದಾನ ನಡೆಯಿತು.

Advertisement

ತಾಂತ್ರಿಕ ತೊಂದರೆಯಿಂದಾಗಿ ಆ್ಯಪ್‌ ಕೈಕೊಟ್ಟ ಹಿನ್ನೆಲೆಯಲ್ಲಿ ಎರಡು ಗಂಟೆ ಮತದಾನದ ಸಮಯ ವಿಸ್ತರಿಸಲಾಗಿತ್ತು. ಬೆಳಗ್ಗೆ 9ರಿಂದ 4ರ ವರೆಗೆ ನಿಗದಿಯಾಗಿತ್ತಾದರೂ ತಾಂತ್ರಿಕ ಸಮಸ್ಯೆ ಎದುರಾಗಿ ಮತದಾನ ಸ್ಥಗಿತಗೊಂಡ ಕಾರಣ ಚುನಾವಣಾಧಿಕಾರಿಗಳು ಮತದಾನದ ಸಮಯವನ್ನು  6 ಗಂಟೆವರೆಗೆ ವಿಸ್ತರಿಸಿದರು.

ದ.ಕ. ಜಿಲ್ಲೆಯಲ್ಲಿ ಇಂದು ಮತದಾನ :

ಸೋಮವಾರ ಬೆಂಗಳೂರು ಕೇಂದ್ರ, ವಿಜಯಪುರ, ಬಳ್ಳಾರಿ ಗ್ರಾಮಾಂತರ, ದಕ್ಷಿಣ ಕನ್ನಡ, ಗದಗ,  ಹುಬ್ಬಳ್ಳಿ ಧಾರವಾಡ, ಕೊಪ್ಪಳ, ಮೈಸೂರು ಗ್ರಾಮಾಂತರ, ತುಮಕೂರು, ಉತ್ತರ ಕನ್ನಡ, ಯಾದಗಿರಿ  ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಯೂತ್‌ ಕಾಂಗ್ರೆಸ್‌ ಚುನಾವಣೆಯಲ್ಲಿ  ಹಸ್ತಕ್ಷೇಪ ಇಲ್ಲ: ಡಿ.ಕೆ. ಶಿವಕುಮಾರ್‌ :

ಬೆಂಗಳೂರು: ‘ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ ಪಾರದರ್ಶಕವಾಗಿ ನಡೆಯಲಿ. ಪಕ್ಷ ಸಂಘಟನೆ ಮಾಡುವ ಉತ್ತಮ ನಾಯಕನ ಆಯ್ಕೆಯಾಗಲಿ ಎಂಬುದು ತಮ್ಮ ಆಶಯ. ತಾವು ಈ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ರವಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ನಾಯಕರು ಬೆಳೆಯಬೇಕೆಂಬುದು ರಾಜೀವ್‌ ಗಾಂಧಿ ಅವರ ಚಿಂತನೆ. ಅದಕ್ಕಾಗಿ ಅವರು ಸಂವಿಧಾನ ತಿದ್ದುಪಡಿ ತಂದರು. ನಾವು ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿಲ್ಲಿಸಿದ್ದೇವೆ. ಹೀಗಾಗಿ ಯೂತ್‌ ಕಾಂಗ್ರೆಸ್‌ ಚುನಾವಣೆ ನಡೆಯುತ್ತಿದೆ ಎಂದರು.

ಮಂಗಳೂರಿನಲ್ಲಿ ಮಿಥುನ್‌ ರೈಗೆ ಹೆಚ್ಚಿನ ಜವಾಬ್ದಾರಿ ಇದೆ. ಹಿಂದೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ನಾನು ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸಲಹೆ ಕೊಟ್ಟೆ  ಎಂದು ಡಿಕೆಶಿ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next