Advertisement

ಪಡಿತರ ಪಡೆಯಲು ಪಡಿಪಾಟಲು

10:12 AM Jan 25, 2020 | mahesh |

ಕೋಟ: ರಾಜ್ಯಾದ್ಯಂತ ಪಡಿತರ ವಿತರಣೆ ಸರ್ವರ್‌ನಲ್ಲಿ ದೋಷ ಹಲವು ದಿನಗಳಿಂದ ಮುಂದುವರಿದಿದ್ದು, ಫಲಾನುಭವಿಗಳಿಗೆ ಸಕಾಲದಲ್ಲಿ ಆಹಾರ ಸಾಮಗ್ರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲಸಕ್ಕೆ ರಜೆ ಹಾಕಿ ದಿನವಿಡೀ ಅಂಗಡಿ ಮುಂದೆ ಕಾದು ಸುಸ್ತಾಗುವ ಜನರು ಸಿಬಂದಿ ಮತ್ತು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಹೊಸ ವ್ಯವಸ್ಥೆಯಲ್ಲಿ ಜಾರಿಯಾದ ಮೇಲೆ ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರು ಬೆರಳಚ್ಚು ನೀಡಿದರಷ್ಟೇ ಆಹಾರ ಧಾನ್ಯ ಪಡೆಯಬಹುದಾಗಿದೆ. ಆದರೆ ಸರ್ವರ್‌ ಸಮಸ್ಯೆಯಿಂದ ಬೆರಳಚ್ಚು ದಾಖಲಾಗುತ್ತಿಲ್ಲ. ಜತೆಗೆ ಈಗ ಮಾಸಾಂತ್ಯ ಸಮೀಪಿಸಿರುವುದರಿಂದ ಕೆಲವೇ ದಿನಗಳಲ್ಲಿ ಪಡಿತರ ವಿತರಣೆ ಸ್ಥಗಿತಗೊಳ್ಳಲಿದೆ. ಹೀಗಾಗಿ ಪಡಿತರ ಕೈತಪ್ಪಲಿದೆ ಎನ್ನುವ ಭಯದಿಂದ ಜನರು ಅಂಗಡಿ ಮುಂದೆ ಸಾಲುಗಟ್ಟುತ್ತಿದ್ದಾರೆ. ಸರ್ವರ್‌ ಸಮಸ್ಯೆಯಿಂದ ಜನದಟ್ಟಣೆ ಹೆಚ್ಚಿದೆ.

ಬೆಳಗ್ಗಿನಿಂದ ಸಂಜೆಯ ವರೆಗೆ ಕಾದರೂ ಪಡಿತರ ಸಿಗದೆ ಫಲಾನುಭವಿಗಳು ಸಿಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ವರ್‌ ಸಮಸ್ಯೆಯಿಂದ ವಿಳಂಬ ಆಗುತ್ತಿದೆ ಎಂದರೂ ಕೇಳುತ್ತಿಲ್ಲ. ಪ್ರತಿದಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುವುದು ಸಿಬಂದಿಯ ಪಾಡಾಗಿದೆ. ರಾಜ್ಯ ಮಟ್ಟದ ಸಮಸ್ಯೆಯಾದ್ದರಿಂದ ಅಧಿಕಾರಿಗಳೂ ಅಸಹಾಯಕರಾಗಿದ್ದಾರೆ.

ಕೆವೈಸಿಯಿಂದ ಸಮಸ್ಯೆ?
ಅಕ್ರಮ ಪಡಿತರ ಕಾರ್ಡ್‌ ಪತ್ತೆ ಹಚ್ಚುವುದಕ್ಕಾಗಿ ಎಲ್ಲ ಪಡಿತರ ಕಾರ್ಡ್‌ದಾರರು ಕಡ್ಡಾಯವಾಗಿ ಬೆರಳಚ್ಚು ದಾಖಲಿಸುವ (ಕೆವೈಸಿ) ಪ್ರಕ್ರಿಯೆ ನಡೆಯುತ್ತಿದೆ. ಆದರೆ ಇದಕ್ಕೆ ಪ್ರತ್ಯೇಕ ಸರ್ವರ್‌ ವ್ಯವಸ್ಥೆ ಕಲ್ಪಿಸದಿರುವುದರಿಂದ ಒಂದೇ ಸರ್ವರ್‌ನಲ್ಲಿ ಅದು ದಾಖಲಾಗುತ್ತಿದೆ. ಲಕ್ಷಾಂತರ ಪಡಿತರದಾರರು ಬೆರಳಚ್ಚು ದಾಖಲಿಸಲು ಮುಗಿಬಿದ್ದು ಸರ್ವರ್‌ ಹ್ಯಾಂಗ್‌ ಆಗಿತ್ತು. ಪಡಿತರಕ್ಕೆ ಸಮಸ್ಯೆಯಾಗುತ್ತದೆ ಎನ್ನುವುದರಿಂದ ಕೆವೈಸಿ ನೋಂದಣಿ ಸ್ಥಗಿತಗೊಳಿಸಲು ಇಲಾಖೆ ಕ್ರಮ ಕೈಗೊಂಡಿದೆ. ಆದರೂ ಸರ್ವರ್‌ ದೋಷ ಬಗೆಹರಿದಿಲ್ಲ.

ಕೆಲಸಕ್ಕೆ ರಜೆ ಹಾಕಿ 2-3 ದಿನಗಳಿಂದ ಪಡಿತರ ಅಂಗಡಿಗೆ ಭೇಟಿ ನೀಡುತ್ತಿದ್ದೇವೆ. ಅತ್ತ ಕೆಲಸವೂ ಇಲ್ಲ, ಇತ್ತ ಪಡಿತರವೂ ಇಲ್ಲ ಎನ್ನುವಂತಾಗಿದೆ. ಕೆವೈಸಿ ತೆಗೆದುಕೊಳ್ಳುವುದಕ್ಕೆ ಹಿಂದೆ ಈ ಸಮಸ್ಯೆ ಇರಲಿಲ್ಲ. ತಂತ್ರಜ್ಞಾನ ಜಾಸ್ತಿಯಾದಂತೆ ಸಮಸ್ಯೆಯೂ ಜಾಸ್ತಿ. ಸಮಸ್ಯೆ ಸರಿಯಾಗದಿದ್ದರೆ ಈ ತಿಂಗಳ ಪಡಿತರ ಮುಂದಿನ ತಿಂಗಳು ಸಿಗುವ ಹಾಗೆ ವ್ಯವಸ್ಥೆ ಮಾಡಬೇಕು.
– ಗುಲಾಬಿ ಕೋಟ, ಪಡಿತರ ಫಲಾನುಭವಿ

Advertisement

ಪಡಿತರ ವಿತರಣೆಗೆ ಸರ್ವರ್‌ ಸಮಸ್ಯೆ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಆದರೆ ರಾಜ್ಯ ಮಟ್ಟದಲ್ಲೇ ಸಮಸ್ಯೆ ಇರುವುದರಿಂದ ಪರಿಹಾರ ಅಸಾಧ್ಯವಾಗಿದೆ. ಪಡಿತರಕ್ಕೆ ಸಮಸ್ಯೆಯಾಗಬಾರದು
ಎನ್ನುವ ನಿಟ್ಟಿನಲ್ಲಿ ಕೆವೈಸಿ ನೋಂದಣಿ ಸ್ಥಗಿತಗೊಳಿಸಿದ್ದೇವೆ. ಸರ್ವರ್‌ ದುರಸ್ತಿ ಕಾರ್ಯ ಚಾಲನೆಯಲ್ಲಿದೆ. ಇದರಿಂದಾಗಿ ಪಡಿತರ ವಂಚಿತರಾದವರಿಗೆ ಮುಂದಿನ ತಿಂಗಳು ಹೆಚ್ಚುವರಿ ವಿತರಿಸಲು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.
– ಬಿ.ಕೆ ಕುಸುಮಾಧರ, ಉಪ ನಿರ್ದೇಶಕ (ಪ್ರಭಾರ), ಆಹಾರ ಇಲಾಖೆ, ಉಡುಪಿ

– ರಾಜೇಶ ಗಾಣಿಗ ಅಚ್ಲಾಡಿ,

Advertisement

Udayavani is now on Telegram. Click here to join our channel and stay updated with the latest news.

Next