ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಹೋರಾಟಕ್ಕೆ ಅಧಿಕೃತ ಚಾಲನೆ ನೀಡಿದ ದಿನವೇ ಅದೇ ರಾಜ್ಯಪಾಲರು ಮತ್ತು ವಿಪಕ್ಷಗಳ ವಿರುದ್ಧ ಕಾಂಗ್ರೆಸ್ ನಾಯಕರು ರಾಜಕೀಯ ಹೋರಾಟದ ರಣಕಹಳೆ ಮೊಳಗಿಸಿದರು. ಆ ಮೂಲಕ ಸಿದ್ದರಾಮಯ್ಯ ಬೆನ್ನಿಗೆ ತಾವೆಲ್ಲರೂ ಗಟ್ಟಿಯಾಗಿ ನಿಂತಿರುವುದಾಗಿ ಸಂದೇಶ ರವಾನಿಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ವಿರುದ್ಧ ಸೋಮವಾರ ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಾಂಗ್ರೆಸ್ ಗುಡುಗಿತು. ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯಪಾಲರು ತಾವು ನೀಡಿದ ಅನುಮತಿಯನ್ನು ಹಿಂಪಡೆಯಬೇಕು. ಇಲ್ಲವೇ ತಾವೇ ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಬೇಕು’ ಕಾರ್ಯಕರ್ತರು ಆಗ್ರಹಿಸಿದರು.
ಬಹುಮತದ ಸರಕಾರವೊಂದನ್ನು ಅಸ್ಥಿರಗೊಳಿಸುವ ಪ್ರಯತ್ನ ಇದಾಗಿದೆ. ಹಾಗಾಗಿ, ರಾಜ್ಯಪಾಲರ ಅನುಮತಿ ವಾಪಸ್ ಪಡೆಯಲು ಸೂಚಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿಯನ್ನೂ ಸಲ್ಲಿಸಿದರು. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಬೀದಿಗಿಳಿದು ಟೈರ್‌ಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಮಧ್ಯೆ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಚಿವರು ಸೇರಿ ಇಡೀ ಸರ್ಕಾರ, ಆಡಳಿತಾರೂಢ ಕಾಂಗ್ರೆಸ್ ಶಾಸಕರು, ಪರಿಷತ್ತಿನ ಸದಸ್ಯರು, ಪಕ್ಷದ ಹಿರಿಯ-ಕಿರಿಯ ನಾಯಕರು, ಮಹಿಳಾ ಮಣಿಗಳು ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಪರ ದನಿ ಎತ್ತುವ ಮೂಲಕ ಶಕ್ತಿ ಪ್ರದರ್ಶಿಸಿದರು. ಜಿಲ್ಲಾ ಹಾಗೂ ಕೆಲ ತಾಲೂಕು ಕೇಂದ್ರಗಳಲ್ಲಿ ವಿವಿಧ ಸ್ಥರದ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಜ್ಯಪಾಲರ ಪ್ರತಿಕೃತಿ ದಹನ ವೇಳೆ ಇಬ್ಬರಿಗೆ ತಗಲಿದ ಬೆಂಕಿ
ಬಾಗಲಕೋಟೆ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಇಬ್ಬರು ಕಾರ್ಯಕರ್ತರಿಗೆ ಬೆಂಕಿ ತಗಲಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ರಾಜ್ಯಪಾಲ ಗೆಹ್ಲೋಟ್ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆಗ ಪ್ರತಿಕೃತಿಗೆ ಹಚ್ಚಿದ್ದ ಬೆಂಕಿ ಇಬ್ಬರಿಗೆ ತಗಲಿತು. ಓರ್ವನ ಎದೆ, ಮುಖಕ್ಕೆ ಸುಟ್ಟ ಗಾಯಗಳಾದರೆ, ಮತ್ತೂಬ್ಬನ ಕೈ, ಕಾಲಿಗೆ ಬೆಂಕಿ ತಗಲಿದೆ.