Advertisement

Bidar: ನ.7ರಿಂದ ರಾಜ್ಯಾದ್ಯಂತ ‘ಅಕ್ಷರ ಜ್ಯೋತಿ’ ಯಾತ್ರೆ

06:43 PM Oct 17, 2024 | Team Udayavani |

ಬೀದರ್:‌ ಕರ್ನಾಟಕದ ಸುವರ್ಣ ಸಂಭ್ರಮ ಪ್ರಯುಕ್ತ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ ರಾಜ್ಯಾದ್ಯಂತ ನ.7 ರಿಂದ ಡಿ.10 ರವರೆಗೆ ‘ಅಕ್ಷರ ಜ್ಯೋತಿ ಯಾತ್ರೆʼ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ ತಿಳಿಸಿದರು.

Advertisement

ಕ.ಕ ಪ್ರತಿಷ್ಠಾನದ ಕಳೆದ 14 ವರ್ಷಗಳಿಂದ ಬೀದರ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀನ ವಿಕಾಸಕ್ಕಾಗಿ ಶ್ರಮಿಸುತ್ತಿದೆ. 2014ರಲ್ಲಿ ಬೀದರ ಜಿಲ್ಲೆಯಲ್ಲಿ 60 ದಿನಗಳ ಅಕ್ಷರ ಜ್ಯೋತಿ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಈಗ ರಾಜ್ಯಾದ್ಯಂತ 63 ದಿನಗಳ ಯಾತ್ರೆ ಆಯೋಜಿಸಲಾಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತಿರುವಿನ ಘಟ್ಟಗಳು. ದೇಶದ ಸಮೃದ್ಧ ಮಾನವ ಸಂಪನ್ಮೂಲ ಸೃಷ್ಟಿಯಾಗುವ ಸಮಯ. ಈ ಹಂತದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ವಿದ್ಯಾರ್ಥಿಗಳು ಉದ್ದೇಶಿಸಿ ಗುರಿಯಿಂದಲೇ ದೂರವಾಗಬಹುದು. ಹಾಗಾಗಿ ಈ ಅವಧಿಯಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರೇರಣೆ, ಸರಿಯಾದ ಮಾರ್ಗದರ್ಶನ ಮತ್ತು ಸೂಕ್ತ ಸಮಾಲೊಚನೆಯ ಮೂಲಕ ಸರಿ ದಾರಿ ತೋರುವ ಅವಶ್ಯಕವಿದೆ. ಭವಿಷ್ಯದ ಕುಡಿಗಳಾಗಿರುವ ಮಕ್ಕಳು ವಿದ್ಯಾವಂತರು ಆಗುವುದರ ಜತೆಗೆ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕೆಂಬುದು ಯಾತ್ರೆಯ ಉದ್ದೇಶವಾಗಿದೆ ಎಂದರು.

ತುಮಕೂರು ಶ್ರೀ ಸಿದ್ಧಗಂಗಾ ಮಠದಿಂದ ನ.7ರಂದು ಆರಂಭಗೊಳ್ಳುವ ಯಾತ್ರೆಯು ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ ಜತೆಗೆ ಗೋವಾ, ಮಹಾರಾಷ್ಟ್ರದ ಗಡಿ ಜಿಲ್ಲೆಗಳ ಮೂಲಕ ಸಂಚರಿಸಿ ಡಿ. 10ರಂದು ಬೀದರಗೆ ಆಗಮಿಸಿ ಸಮಾರೋಪಗೊಳ್ಳುವುದು. ಪ್ರತಿ ಜಿಲ್ಲೆಯಲ್ಲಿ ಒಂದು ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ ನಡೆಸಲಾಗುವುದು. ಇದಕ್ಕಾಗಿ ಪ್ರತಿಷ್ಠಾನದ ನಾಲ್ವರು ಸಂಪನ್ಮೂಲ ವ್ಯಕ್ತಿಗಳು ಜೊತೆಯಾಗಿ ಇರುವರು ಎಂದು ಹೇಳಿದರು.

ಯಾತ್ರೆಯ ಉದ್ದೇಶಗಳು

Advertisement

ವ್ಯಕ್ತಿತ್ವ ವಿಕಸನದ ಜತೆಗೆ ಫಲಿತಾಂಶ ಸುಧಾರಣೆಯ ಮಾರ್ಗೋಪಾಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹುಟ್ಟಿಸಿ, ಉನ್ನತ ಕನಸುಗಳನ್ನು ಬಿತ್ತುವುದು. ಮಕ್ಕಳಲ್ಲಿ ಸಕರಾತ್ಮಕ ಚಿಂತನೆ ಬೆಳೆಸುವುದು. ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿ ಉನ್ನತ ಸಾಧನೆಯ ಹುಚ್ಚು ಹೆಚ್ಚಿಸುವುದು. ವೈಚಾರಿಕ- ವೈಜ್ಷಾನಿಕ ಮನೋಭಾವ ಬೆಳೆಸುವುದು. ಯುವ ಶಕ್ತಿಯನ್ನು ಸತ್ಕಾರ್ಯಗಳ ಮೂಲಕ ದೇಶ ಕಟ್ಟುವ ಕಾರ್ಯದೆಡೆಗೆ ಸಕ್ರಿಯರನ್ನಾಗಿಸುವುದು. ಶಿಕ್ಷಣ ಎಂದರೆ ಕೇವಲ ಪುಸ್ತಕದ ಕಲಿಕೆ ಮಾತ್ರ ಅಲ್ಲ, ಸಂಸ್ಕೃತಿ, ಸದ್ಗುಣ, ಸಂಸ್ಕಾರಗಳ ಸಮ್ಮಿಲನ ಎಂಬ ಅರಿವು ಮೂಡಿಸುವುದು. ಮೌಲ್ಯಗಳು ಬಿತ್ತುವ ಮೂಲಕ ಸುಸಂಸ್ಕೃತ ಜನಾಂಗ ನಿರ್ಮಾಣ ಮಾಡುವುದು. ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಎಂದು ಸರ್ಕಾರ ಘೋಷಣೆ ಮಾಡುವುದ ಹಿನ್ನಲೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಈ ಬಗ್ಗೆ ರಾಷ್ಟ್ರ- ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸುವಂತೆ ಕುಲಪತಿಗಳಿಗೆ ವಿನಂತಿಸುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಿದ್ದಯ್ಯಾ ಕಾವಡಿ, ಹಾವಶೆಟ್ಟಿ ಪಾಟೀಲ, ಮಾಣಿಕಪ್ಪ ಗೋರನಾಳೆ, ಪಂಡಿತ ಬಾಳೂರೆ, ಶಿವರಾಜ ಮದಕಟ್ಟಿ, ಪ್ರಭು ತಟಪಟ್ಟಿ, ಶಿವಾಜಿರಾವ ಮಾನೆ, ರಾಜೇಂದ್ರಕುಮಾರ ಮಣಗೇರೆ, ಮನೋಜಕುಮಾರ ಬುಕ್ಕಾ ಮತ್ತು  ರಾಜಕುಮಾರ ಧುಮ್ಮನಸೂರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next