Advertisement

ರಾಜ್ಯದ ವಿಶ್ವವಿದ್ಯಾಲಯಗಳ ರೇಟಿಂಗ್‌ ಪ್ರಕಟ

11:28 PM Sep 17, 2019 | Team Udayavani |

ಬೆಂಗಳೂರು: ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮಂಗಳವಾರ 2019-20ನೇ ಸಾಲಿನ ರಾಜ್ಯದ ವಿಶ್ವವಿದ್ಯಾಲಯಗಳ ರೇಟಿಂಗ್‌ ಪ್ರಕಟಿಸಿದ್ದು, ಬಹುತೇಕ ಎಲ್ಲ ವಿಭಾಗಗಳಲ್ಲೂ ಖಾಸಗಿ ವಿಶ್ವವಿದ್ಯಾಲಯಗಳು ಅಗ್ರಸ್ಥಾನ ಪಡೆದಿವೆ.

Advertisement

ರಾಜ್ಯದ ಸುಮಾರು 60 ವಿಶ್ವವಿದ್ಯಾಲಯಗಳಿದ್ದು, ಈ ಪೈಕಿ 43 ವಿವಿಗಳ ಸಮಗ್ರ ಮೌಲ್ಯಮಾಪನಕ್ಕೊಳಪಡಿಸಿ ನೀಡಿದ ರೇಟಿಂಗ್‌ ಇದಾಗಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ (MAHE) ಡೀಮ್ಡ್ ವಿಶ್ವವಿದ್ಯಾಲಯವು ಸಂಸ್ಥಾಪಿತ ವಿಭಾಗದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು, ಅನ್ವೇಷಣಾ ವಿಭಾಗದಲ್ಲಿ ಐದು ಸ್ಟಾರ್‌ಗಳನ್ನು ಗಳಿಸಿದ ಏಕೈಕ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಈ ಸಂಸ್ಥೆಯನ್ನು “ಅತ್ಯುತ್ತಮ ಸಂಸ್ಥೆ’ (ಇನ್‌ಸ್ಟಿಟ್ಯೂಷನ್‌ ಆಫ್ ಎಮಿನೆನ್ಸ್‌) ಎಂದು ಗುರುತಿಸಿತ್ತು.

ಈ ರೇಟಿಂಗ್‌ಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್‌ ಫ್ರೆಮ್‌ವರ್ಕ್‌ (ಕೆ-ಸಫ್ì)-2019 ರಚಿಸಲಾಗಿತ್ತು. ಇದು ರಾಜ್ಯದ ವಿವಿಗಳನ್ನು 10 ವರ್ಷ ಮೇಲ್ಪಟ್ಟವುಗಳನ್ನು ಸಂಸ್ಥಾಪಿತ, 5ರಿಂದ 10 ವರ್ಷದೊಳಗಿದ್ದರೆ ಯುವ ಮತ್ತು 5 ವರ್ಷದೊಳಗಿದ್ದರೆ ಹೊಸ ಹಾಗೂ ಕೃಷಿ, ತೋಟಗಾರಿಕೆ, ಸಂಸ್ಕೃತ ಮತ್ತಿತರ ವಿವಿಗಳನ್ನು ವಿಶೇಷ ಎಂದು ವಿಭಾಗಿಸಿತ್ತು.

ನಾಲ್ಕೂ ವಿಭಾಗಗಳಲ್ಲಿ ಮೊದಲ ಸ್ಥಾನಗಳನ್ನು ಕ್ರಮವಾಗಿ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌, ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿವಿ, ಪಿಇಎಸ್‌ ವಿವಿ ಹಾಗೂ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಗ್ರ ಸ್ಥಾನ ಗಳಿಸಿವೆ. ಯುವ ವಿವಿಗಳ ವಿಭಾಗದಲ್ಲಿ ಜೆಎಸ್‌ಎಸ್‌ ಮತ್ತು ಜೈನ್‌ ವಿವಿಗಳೆರಡೂ ಸಮಗ್ರ ಸಾಧನೆಯಲ್ಲಿ ಹಾಗೂ ಮೂಲಸೌಕರ್ಯ, ಸಾಮಾಜಿಕ ಪರಿಣಾಮ ವಿಭಾಗಗಳಲ್ಲಿ ಐದು ಸ್ಟಾರ್‌ಗಳನ್ನು ಗಳಿಸಿವೆ.

ಸಂಶೋಧನೆಯಲ್ಲಿ ಜೆಎಸ್‌ಎಸ್‌ ಮತ್ತು ನಿಟ್ಟೆ ವಿವಿ ಐದು ಸ್ಟಾರ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿವೆ. ಈ ವಿಭಾಗದಲ್ಲಿ 11 ವಿವಿಗಳಿದ್ದವು. ಹೊಸ ವಿವಿಗಳ ವಿಭಾಗದಲ್ಲಿ ಪಿಇಎಸ್‌ ಮತ್ತು ಎಂ.ಎಸ್‌. ರಾಮಯ್ಯ ವಿವಿ ಐದು ಸ್ಟಾರ್‌ ಗಳಿಸಿವೆ. ಆದರೆ, ಈ ವಿಭಾಗದಲ್ಲಿ ಸಂಶೋಧನೆಯಲ್ಲಿ ಒಂದೇ ಒಂದು ವಿವಿ 5 ಸ್ಟಾರ್‌ಗಳನ್ನು ಗಿಟ್ಟಿಸಿಕೊಂಡಿಲ್ಲ. ಅಂದಹಾಗೆ ಈ ವಿಭಾಗದಲ್ಲಿ ಎಂಟು ವಿವಿಗಳಿದ್ದವು. ಇದರಲ್ಲಿ ಎಂಟು ವಿವಿಗಳಿದ್ದವು.

Advertisement

ವಿಶೇಷ ವಿವಿಗಳ ವಿಭಾಗದಲ್ಲಿ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸಮಗ್ರ ಸಾಧನೆಯಲ್ಲಿ 5 ಸ್ಟಾರ್‌ಗಳನ್ನು ಗಳಿಸಿವೆ. ಆದರೆ, ಈ ವಿಭಾಗದಲ್ಲಿ ಕೂಡ ಅನ್ವೇಷಣೆಯಲ್ಲಿ ಯಾವ ವಿವಿಯೂ ಐದು ಸ್ಟಾರ್‌ಗಳನ್ನು ಗಳಿಸಿಲ್ಲ. ಈ ರೇಟಿಂಗ್‌ನಿಂದ ಮುಂದಿನ ದಿನಗಳಲ್ಲಿ ವಿವಿಗಳ ಶೈಕ್ಷಣಿಕ ಸುಧಾರಣೆಗೆ ಅನುಕೂಲ ಆಗಲಿದೆ ಎಂದು ವರದಿಯಲ್ಲಿ ತಜ್ಞರು ತಿಳಿಸಿದ್ದಾರೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ, ರೇಟಿಂಗ್‌ ಪಟ್ಟಿ ನೋಡಿದಾಗ ವಿಶ್ವವಿದ್ಯಾಲಯಗಳು ಬೋಧನೆಯಲ್ಲಿ ಮುಂದಿದ್ದರೂ ಸಂಶೋಧನೆಯಲ್ಲಿ ಹಿಂದಿರುವುದು ಕಂಡುಬರುತ್ತದೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಒತ್ತುಕೊಡುವ ಅವಶ್ಯಕತೆ ಇದೆ. ಜತೆಗೆ ರೇಟಿಂಗ್‌ ಅನ್ನು ಹೆಚ್ಚು ಜನಪ್ರಿಯಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ಬೆನ್ನಲ್ಲೇ ಅದಕ್ಕೆ ತಕ್ಕಂತೆ ಗುಣಮಟ್ಟದ ವೇಗ ಹೆಚ್ಚಾಗುತ್ತಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಿದೆ. ಶಿಕ್ಷಣದ ಬಹುಮುಖ್ಯ ಉದ್ದೇಶ ಸಾಮಾಜಿಕ ಪರಿಣಾಮ. ಆದರೆ, ಸುಶಿಕ್ಷಿತರಲ್ಲೇ ಸಾಮಾಜಿಕ ಹೊಣೆಗಾರಿಕೆ ಕಡಿಮೆ ಆಗುತ್ತಿದೆ. ಹಾಗಿದ್ದರೆ, ವಿಶ್ವವಿದ್ಯಾಲಯಗಳು ನೀಡುತ್ತಿರುವ ಡಿಗ್ರಿಗಳಿಂದ ಏನಾದರೂ ಬದಲಾವಣೆ ಆಗುತ್ತಿದೆಯೇ? ಈ ಬಗ್ಗೆಯೂ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದೂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗನಾಥ್‌ ಮಾತನಾಡಿ, ವಿವಿಗಳ ಮಾದರಿಯಲ್ಲೇ ಕಾಲೇಜುಗಳಿಗೂ ರೇಟಿಂಗ್‌ ನೀಡಬೇಕು. ಆಗ, ವಿವಿಗಳ ಶೈಕ್ಷಣಿಕ ಗುಣಮಟ್ಟ ಇನ್ನಷ್ಟು ಸುಧಾರಣೆ ಆಗಲಿದೆ ಎಂದರು. ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಡಾ.ರಾಜಕುಮಾರ್‌ ಖತ್ರಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಎಸ್‌.ಎ. ಕೋರಿ ಮತ್ತಿತರರು ಉಪಸ್ಥಿತರಿದ್ದರು.

ಯಾವ್ಯಾವ ವಿವಿಗೆ ಎಷ್ಟು ರೇಟಿಂಗ್‌?:-
ಸಂಸ್ಥಾಪಿತ ವಿವಿಗಳ ವಿಭಾಗ (10 ವರ್ಷ ಮೇಲ್ಪಟ್ಟ)
5 ಸ್ಟಾರ್‌ಗಳಿಸಿದ ವಿವಿ: ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌.
4 ಸ್ಟಾರ್‌ಗಳಿಸಿದ ವಿವಿ: ಕೆಎಲ್‌ಇ, ಕುವೆಂಪು, ಕರ್ನಾಟಕ, ವಿಟಿಯು,ಮಂಗಳೂರು, ಬೆಂಗಳೂರು, ಗುಲ್ಬರ್ಗ, ಮೈಸೂರು.
3 ಸ್ಟಾರ್‌ಗಳಿಸಿದ ವಿವಿ: ಶ್ರೀ ದೇವರಾಜ ಅರಸು ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌ ಆಂಡ್‌ ರಿಸರ್ಚ್‌, ತುಮಕೂರು.

ಹೊಸ ವಿವಿಗಳ ವಿಭಾಗ (5 ವರ್ಷದೊಳಗಿನ)
5 ಸ್ಟಾರ್‌ಗಳಿಸಿದ ವಿವಿ: ಪಿಇಎಸ್‌, ಎಂ.ಎಸ್‌. ರಾಮಯ್ಯ.
4 ಸ್ಟಾರ್‌ಗಳಿಸಿದ ವಿವಿ: ರೇವಾ, ದಯಾನಂದ ಸಾಗರ, ಕೆಎಲ್‌ಇ ತಾಂತ್ರಿಕ ವಿವಿ.
3 ಸ್ಟಾರ್‌ಗಳಿಸಿದ ವಿವಿ: ಪ್ರಸಿಡೆನ್ಸಿ , ಜೆಎಸ್‌ಎಸ್‌ ಆಂಡ್‌ ಟಿ, ರೈ ವಿವಿ.

ಯುವ ವಿವಿಗಳ ವಿಭಾಗ (5-10 ವರ್ಷ)
5 ಸ್ಟಾರ್‌ಗಳಿಸಿದ ವಿವಿ: ಜೆಎಸ್‌ಎಸ್‌, ಜೈನ್‌.
4 ಸ್ಟಾರ್‌ಗಳಿಸಿದ ವಿವಿ: ನಿಟ್ಟೆ, ಎನೆಪೊಯಾ, ಕ್ರೈಸ್ಟ್‌, ಬಿಎಲ್‌ಡಿಇ, ವಿಜಯನಗರ ಶ್ರೀಕೃಷ್ಣ ದೇವರಾಯ, ಅಲಾಯನ್ಸ್‌.
3 ಸ್ಟಾರ್‌ಗಳಿಸಿದ ವಿವಿ: ಶ್ರೀ ಸಿದ್ಧಾರ್ಥ್ ಅಕಾಡೆಮಿ ಆಫ್ ಹೈಯರ್‌ ಎಜುಕೇಷನ್‌, ರಾಣಿ ಚೆನ್ನಮ್ಮ, ದಾವಣಗೆರೆ.

ವಿಶೇಷ ವಿವಿಗಳ ವಿಭಾಗ
5 ಸ್ಟಾರ್‌ಗಳಿಸಿದ ವಿವಿ: ಧಾರವಾಡ ಕೃಷಿ ವಿವಿ, ಬೆಂಗಳೂರು ಕೃಷಿ ವಿವಿ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿವಿ.
4 ಸ್ಟಾರ್‌ಗಳಿಸಿದ ವಿವಿ: ಎಸ್‌ವಿವೈಎಎಸ್‌ಎ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿವಿ, ಬಾಗಲಕೋಟೆಯ ತೋಟಗಾರಿಕಾ ವಿವಿ, ರಾಯಚೂರಿನ ಕೃಷಿ ವಿಜ್ಞಾನಗಳ ವಿವಿ, ಕರ್ನಾಟಕ ರಾಜ್ಯ ಮಹಿಳಾ ವಿವಿ.
3 ಸ್ಟಾರ್‌ಗಳಿಸಿದ ವಿವಿ: ಕನ್ನಡ ವಿವಿ, ಮೈಸೂರಿನ ಗಂಗೂಬಾಯಿ ಹಾನಗಲ್‌ ಸಂಗೀತ ನೃತ್ಯಕಲಾ ವಿವಿ, ಕರ್ನಾಟಕ ಸಂಸ್ಕೃತ ವಿವಿ, ಕರ್ನಾಟಕ ಜಾನಪದ ವಿವಿ.

Advertisement

Udayavani is now on Telegram. Click here to join our channel and stay updated with the latest news.

Next