ದಾವಣಗೆರೆ: ರಾಜ್ಯದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಕ್ಷ ಬಲಪಡಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರತ್ಯೇಕ ತಂಡಗಳಲ್ಲಿ 50 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಪ್ರಶಿಕ್ಷಣ ವರ್ಗ ಸಮಾರೋಪದಲ್ಲಿ ಮಾತನಾಡಿದ ಅವರು, ಎರಡೂ ತಂಡಗಳ ರಾಜ್ಯ ಪ್ರವಾಸದ ದಿನಾಂಕ, ಸ್ಥಳ ನಿಗದಿಯಾಗಿದೆ. ನಳಿನ್‌ಕುಮಾರ್ ಕಟೀಲ್ ನೇತೃತ್ವದ ತಂಡ ಸಂಘಟನೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ತಂಡ ರಾಜಕೀಯ ಕಾರ್ಯಕ್ರಮಗಳ ಪ್ರವಾಸ ಕೈಗೊಳ್ಳಲಿದೆ ಎಂದರು.
ಬಳ್ಳಾರಿಯಲ್ಲಿ ಸೆ. 25 ಅಥವಾ 26ರಂದು ಎಸ್‌ಟಿ ಮೋರ್ಚಾದ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುವರು. ಎಸ್‌ಟಿ ಮೋರ್ಚಾದಂತೆ ಮಂಗಳೂರಿನಲ್ಲಿ ಯುವ ಮೋರ್ಚಾ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ ಸಮಾವೇಶಗಳನ್ನು ಜನೋತ್ಸವದ ಮಾದರಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಸ್ಟಿ ಜನಾಂಗಕ್ಕೆ ಹೇಳಿದಂತೆ ಶೇ. 7.5 ಮೀಸಲಾತಿ ಕೊಡುವುದಿಲ್ಲ ಎಂದು ಕೆಲವರು ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಮತ್ತೆ ಮುಖ್ಯಮಂತ್ರಿ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಮುಂದೆಯೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಒಳಗೊಂಡಂತೆ ವಿಪಕ್ಷಗಳಿಗೆ ಅಭ್ಯರ್ಥಿಗಳೇ ಸಿಗಲಿಲ್ಲ. ಅಮಾಯಕರನ್ನು ನಿಲ್ಲಿಸಿ ಬಲಿಕೊಡುವಂತಾಯಿತು.
ಅದೇ ರೀತಿ ವಿಧಾನಸಭಾ ಚುನಾವಣೆಯಲ್ಲೂ ವಿಪಕ್ಷ ಗಳಿಗೆ ಅಭ್ಯರ್ಥಿಗಳೇ ಸಿಗಲ್ಲ ಎಂದು ಟೀಕಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಮಾತನಾಡಿ, ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಎಸ್‌ಟಿ ಸಮುದಾಯ ಬಿಜೆಪಿಗೆ ಇನ್ನೂ ಹೆಚ್ಚಿನ ಬಲ ತುಂಬಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಶೇ. 7.5 ಮೀಸಲಾತಿಗೆ ಒತ್ತಾಯಿಸಿ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ
210 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಶೇ.7.5 ಮೀಸಲಾತಿ ಸೌಲಭ್ಯ ಒದಗಿಸಬೇಕು. ನಾಯಕ ಸಮಾಜ ಹಿಂದೆ, ಈಗ, ಮುಂದೆಯೂ ಬಿಜೆಪಿ ಪರವಾಗಿ ಇರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಶೇ. 7.5 ಮೀಸಲಾತಿ ಸೌಲಭ್ಯದ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಆದಷ್ಟು ಬೇಗ ಶೇ. 7.5 ಮೀಸಲಾತಿ ಸೌಲಭ್ಯ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಸ್‌ಟಿ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಸತ್ಯನಾರಾಯಣ ರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಓಲೇಕಾರ್, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಸುಧಾ ಜಯರುದ್ರೇಶ್, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣ ಕುಮಾರ್ ಇದ್ದರು.
ಬಿಜೆಪಿ ವಿಶೇಷ ಮತ್ತು ವಿಶಿಷ್ಟ ಪಕ್ಷ. ಪಕ್ಷದ ಕಾರ್ಯಕರ್ತರು ಶಿಸ್ತು, ಸಂಯಮ, ಸಂಘಟನೆ, ಕಾರ್ಯ, ಕಾರ್ಯಕರ್ತ, ಕಾರ್ಯಕ್ರಮ ಎಂಬ ಅಂಶಗಳೊಂದಿಗೆ ಪಕ್ಷದೊಂದಿಗೆ ಜೋಡಿಸಿಕೊಳ್ಳಬೇಕು. ಕೆಳ ಹಂತದವರೆಗೆ ಕೆಲಸ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು.
ಮಹೇಶ ಟೆಂಗಿನಕಾಯಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ