ಮೈಸೂರು: ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ 24ರಿಂದ ತಾವು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರು ಸುತ್ತಿನ ಪ್ರಚಾರ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ 150 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದು, ಇನ್ನುಳಿದ ಕ್ಷೇತ್ರಗಳಿಗೆ ಈ ಸುತ್ತಿನಲ್ಲಿ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 26, 27ರಂದು ಕರ್ನಾಟಕ ಪ್ರವಾಸ ಕೈಗೊಂಡು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೇ 3, 4 ಮತ್ತು 5ರಂದು ಎರಡನೇ ಸುತ್ತಿನ ಹಾಗೂ ಮೇ 8, 9ರಂದು ಅಂತಿಮ ಸುತ್ತಿನ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹೈಕಮಾಂಡ್‌ಗೆ ಬಿಟ್ಟದ್ದು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎಂಬ ಯಡಿಯೂರಪ್ಪಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಯಡಿಯೂರಪ್ಪಶಿಕಾರಿಪುರದಿಂದ ಗೆದ್ದು ತೋರಿಸಲಿ, ನಾನು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ.
ಆದರೆ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಬಾದಾಮಿಗೆ ನನ್ನನ್ನು ಕರೆದುಕೊಂಡು ಹೋಗಲು ನಿನ್ನೆಯಿಂದ ಇಲ್ಲೇ ಬಂದು ಉಳಿದಿದ್ದಾರೆ ನೋಡಿ ಎಂದು ಹೇಳಿದರು.
ಅಂಬಿಗೆ ಟಿಕೆಟ್: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಂಬರೀಶ್‌ಗೆ ಟಿಕೆಟ್ ನೀಡಲಾಗಿದೆ. “ಬಿ’ ಫಾರಂ ನೀಡುವುದು ಪಕ್ಷದ ಅಧ್ಯಕ್ಷರಾದ್ದರಿಂದ ಅವರು “ಬಿ’ ಫಾರಂ ಪಡೆದಿದ್ದಾರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ, ಪಕ್ಷ ಟಿಕೆಟ್ ಕೊಟ್ಟ ಮೇಲೆ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕಷ್ಟೆ. ಈ ಬಗ್ಗೆ ಅಂಬರೀಶ್ ಜೊತೆಗೆ ನಾನೇನು ಮಾತನಾಡಲು ಹೋಗಲ್ಲ ಎಂದರು.
ಶಾ ಜೈನರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದೂವಲ್ಲ, ಜೈನರು. ಅವರು ಹಿಂದೂ ಆಗಿದ್ದರೆ ದಾಖಲೆಗಳನ್ನು ತೋರಿಸಲಿ ಎಂದು ಮತ್ತೆ ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಚಾಮುಂಡೇಶ್ವರಿ, ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ಅವರು ಗೆಲ್ಲುತ್ತಾರೆ.
-ಆರ್.ಬಿ.ತಿಮ್ಮಾಪುರ, ಸಚಿವ