ಬೆಂಗಳೂರು: ಗಣೇಶ ಹಬ್ಬದ ಬಳಿಕ ಎಲ್ಲರೂ ಸೇರಿ ರಾಜ್ಯ ಪ್ರವಾಸ ಮಾಡುತ್ತೇವೆ. ನಾನೊಬ್ಬನೇ ರಾಜ್ಯ ಪ್ರವಾಸ ಮಾಡುವ ಪ್ರಶ್ನೆಯಿಲ್ಲ. ಎಲ್ಲರೂ ಜೊತೆಯಾಗಿ ರಾಜ್ಯ ಪ್ರವಾಸ ಮಾಡುತ್ತೇವೆ. ಯಾವ ಜಿಲ್ಲೆಗಳಿಗೆ ಹೋಗಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ದಿನಗಳ ಬಳಿಕ ಶಿವಮೊಗ್ಗ, ಶಿಕಾರಿಪುರಕ್ಕೆ ಹೋಗುತ್ತಿದ್ದೇನೆ. ವಾಪಸ್ ಬಂದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಇತರ ಮುಖಂಡರ ಜೊತೆ ಚರ್ಚೆ ರಾಜ್ಯ ಪ್ರವಾಸ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಮೈಸೂರು ಯುವತಿ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಕ್ತಿಮೀರಿ ಪ್ರಾಮಾಣಿಕವಾಗಿ ಅಪರಾಧಿಗಳನ್ನು ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತವಾಗಿ ಅಪರಾಧಿಗಳು ಸಿಕ್ಕೆ ಸಿಗುತ್ತಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಮುಂದೆ ಈ ರೀತಿಯ ಘಟನೆ ಆಗದಂತೆ ಅವರಿಗೆ ಶಿಕ್ಷೆ ಕೊಡಲು ಯಾವುದೇ ಹಿಂದೆ ಮುಂದೆ ನೋಡುವುದಿಲ್ಲ ಎಂದರು.
ಇದನ್ನೂ ಓದಿ:‘ಹೀಗೆ ಬಂದು ಹಾಗೆ ಹೋದ್ರು’..: ಐದು ನಿಮಿಷಕ್ಕೆ ಸೀಮಿತವಾಯ್ತು ಗೃಹ ಸಚಿವರ ಘಟನಾ ಸ್ಥಳ ಭೇಟಿ
ಸಿಎಂ, ಪೊಲೀಸ್ ಇಲಾಖೆ, ಗೃಹ ಸಚಿವರು ಎಲ್ಲರೂ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇಂದು ನಾಳೆಯೊಳಗಾಗಿ ಅಪರಾಧಿಗಳನ್ನು ಹಿಡಿದೇ ಹಿಡಿಯುತ್ತೇವೆ. ಅವರಿಗೆ ಸರಿಯಾದ ಕ್ರಮ ತೆಗೆದುಕೊಂಡು ಇನ್ನು ಮುಂದೆ ಈ ರೀತಿ ಆಗದಂತೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.
ಮೈಸೂರು ಘಟನೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ ಎಂಬ ವಿಪಕ್ಷ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟರು.