ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ ಪದಗ್ರಹಣ ಮಾಡುವುದರೊಂದಿಗೆ ಜೆಡಿಎಸ್-ಕಾಂಗ್ರೆಸ್ ಸರಕಾರದ ಪತನದ ಬಳಿಕ ನೆಲೆಸಿದ್ದ ರಾಜಕೀಯ ಗೊಂದಲಗಳು ಒಂದು ಹಂತಕ್ಕೆ ತಾರ್ಕಿಕ ಅಂತ್ಯ ಕಂಡಂತಾಗಿದೆ. ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಧಾರಾಳವಾಗಿಯೇ ಇರುವ ಯಡಿಯೂರಪ್ಪನವರಿಂದ ರಾಜ್ಯ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಒಂದರ್ಥದಲ್ಲಿ ನಿರೀಕ್ಷೆಗಳ ಬೆಟ್ಟವೇ ಅವರ ಬೆನ್ನ ಮೇಲಿದೆ. ಈ ನಿರೀಕ್ಷೆಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಬಿಜೆಪಿ ಸರಕಾರದ ಭವಿಷ್ಯ ನಿಂತಿದೆ.
2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತಕ್ಕೆ ಅಗತ್ಯವಿರುವಷ್ಟು ಸಂಖ್ಯಾಬಲ ಇಲ್ಲದೆ ಅಧಿಕಾರ ವಂಚಿತವಾಗಬೇಕಾಯಿತು. ಅನಂತರ ನಡೆದ ವಿಚಿತ್ರ ಬೆಳವಣಿಗೆಗಳೆಲ್ಲ ರಾಜಕೀಯದ ನೈತಿಕ ಅಧಃಪತನಕ್ಕೊಂದು ನಿದರ್ಶನ ವಾಯಿತು. 37 ಸ್ಥಾನಗಳನ್ನು ಗಳಿಸಿದ್ದ ಪಕ್ಷವೊಂದು 78 ಸ್ಥಾನ ಗಳಿಸಿದ ಪಕ್ಷದ ನೆರವಿನಿಂದ ಸರಕಾರ ರಚಿಸಿದ್ದು, ಅನಂತರ ಈ ಸರಕಾರವನ್ನು ಉಳಿಸಿಕೊಳ್ಳಲು 14 ತಿಂಗಳಲ್ಲಿ ನಡೆಸಿದ ಕಸರತ್ತುಗಳನ್ನೆಲ್ಲ ನೋಡಿ ರಾಜ್ಯದ ಜನರು ಬೇಸತ್ತು ಹೋಗಿದ್ದಾರೆ. ರಾಜಕೀಯದ ಕುರಿತು ರಾಜ್ಯಾದ್ಯಾಂತ ಒಂದು ರೀತಿಯ ಜುಗುಪ್ಸೆಯ ಭಾವನೆ ಹರಡಿರುವ ಸಂದರ್ಭದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ಕಳೆದ 14 ತಿಂಗಳಲ್ಲಿ ಜನರಿಗೆ ಸರಕಾರ ಇದೆ ಎಂಬ ಅನುಭವವೇ ಆಗಿರಲಿಲ್ಲ. ಬರ ಸೇರಿದಂತೆ ಹಲವು ಸಮಸ್ಯೆಗಳು ಸುಡುತ್ತಿರುವಾಗಲೂ ನಾಯಕರು ಅಧಿಕಾರದ ಪಗಡೆಯಾಟದಲ್ಲಿ ನಿರತರಾಗಿದ್ದರು. ಯಾವ ಸಚಿವನೂ, ಯಾವುದೇ ಇಲಾಖೆಯೂ ಜನಪರ ಕೆಲಸಗಳನ್ನು ಮಾಡಿದ ಉದಾಹರಣೆಯಿಲ್ಲ. ಆಡಳಿತ ನಡೆಸುತ್ತಿರುವವರಿಗೇ ಈ ಸರಕಾರ ಎಷ್ಟು ದಿನ ಬಾಳಿಕೆ ಬಂದೀತು ಎಂಬ ಖಾತರಿಯಿಲ್ಲದಿದ್ದ ಕಾರಣ ಒಂದು ರೀತಿಯ ಅರಾಜಕ ಸ್ಥಿತಿಯಲ್ಲಿತ್ತು ರಾಜ್ಯ. ಹೊಸ ಸರಕಾರಕ್ಕೆ ಹದಗೆಟ್ಟ ಆಡಳಿತವನ್ನು ಸುಸೂತ್ರಗೊಳಿಸುವುದೇ ಮೊದಲ ಸವಾಲಾಗಲಿದೆ.
ಯಡಿಯೂರಪ್ಪನವರನ್ನು ರಾಜಕೀಯದ ದುರಂತ ನಾಯಕ ಎಂದೇ ಬಣ್ಣಿಸಲಾಗುತ್ತದೆ. ಈ ಮೊದಲು ಮೂರು ಸಲ ಮುಖ್ಯಮಂತ್ರಿಯಾದರೂ ಒಮ್ಮೆಯೂ ಅವರಿಗೆ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. 2007ರಲ್ಲಿ ಜೆಡಿಎಸ್ ಜೊತೆಗೆ ಮಾಡಿಕೊಂಡ 20-20 ಒಪ್ಪಂದದಂತೆ ದ್ವಿತೀಯಾರ್ಧದಲ್ಲಿ ಮುಖ್ಯಮಂತ್ರಿಯಾದರೂ ಬಹುಮತ ಸಾಬೀತುಪಡಿಸಲಾಗದೆ 7 ದಿನಗಳಲ್ಲಿ ನಿರ್ಗಮಿಸಬೇಕಾಯಿತು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರಕಾರ ರಚಿಸಿ ಬಳಿಕ ಆಪರೇಶನ್ ಕಮಲ ಮೂಲಕ ಬಹುಮತ ಗಳಿಸಿಕೊಂಡರೂ ಭ್ರಷ್ಟಾಚಾರದ ಆರೋಪ ಇನ್ನಿಲ್ಲದಂತೆ ಕಾಡಿತು. ಯಡಿಯೂರಪ್ಪನವರು ಜೈಲಿಗೂ ಹೋಗಬೇಕಾಯಿತು ಹಾಗೂ ರಾಜ್ಯ ಈ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. 2018ರ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾದ ಹಿನ್ನೆಲೆಯಲ್ಲಿ ಸರಕಾರ ರಚಿಸಲು ಕೋರಿಕೆ ಮಂಡಿಸಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಹುಮತ ಸಿಗದೆ ಎರಡೇ ದಿನದಲ್ಲಿ ನಿರ್ಗಮಿಸಬೇಕಾಯಿತು. ಇದೀಗ ನಾಲ್ಕನೇ ಪಾಳಿ. ಈ ಸಲವೂ ಸ್ಪಷ್ಟ ಬಹುಮತ ಇಲ್ಲ. ಆದರೂ ಬಹುಮತ ಸಾಬೀತುಗೊಳಿಸುವ ವಿಶ್ವಾಸದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ.
ಯಡಿಯೂರಪ್ಪ ಉತ್ತಮ ಆಡಳಿತಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ತೀರಾ ಸಾಮಾನ್ಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಅವರಿಗೆ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳ ಅರಿವು ಇದೆ. ಅದರಲ್ಲೂ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ರೈತರ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿ ಅವರು. ರೈತಬಂಧು ಎಂದು ಜನರಿಂದ ಪ್ರೀತಿಯಿಂದ ಕರೆಸಿಕೊಂಡಿದ್ದಾರೆ. ಆದರೆ ದುಡುಕಿನ ಸ್ವಭಾವ, ಮುಂಗೋಪ ಮತ್ತಿತರ ದೌರ್ಬಲ್ಯಗಳನ್ನು ಅವರು ಮೆಟ್ಟಿ ನಿಲ್ಲಬೇಕಾಗಿದೆ. ಸ್ವಜನ ಪಕ್ಷಪಾತ ಮಾಡುತ್ತಾರೆ ಎಂಬ ಆರೋಪವನ್ನು ಹುಸಿ ಮಾಡಬೇಕು. ಹಿಂದಿನ ಅವಧಿಯಲ್ಲಿ ನಡೆದಿರುವಂಥ ಅಪಸವ್ಯಗಳಿಗೆಲ್ಲ ಅವಕಾಶ ಕೊಡಬಾರದು.ಮೊದಲಾಗಿ ದಾರಿ ತಪ್ಪಿಸುವ ಭಟ್ಟಂಗಿ ಪಡೆಯನ್ನು ದೂರವಿಡಬೇಕು. ಆಡಳಿತದಲ್ಲಿ ತುಸು ಬಿಗಿ ಹಿಡಿತ ಇಟ್ಟುಕೊಂಡು ಇನ್ನುಳಿದಿರುವ ಮೂರೂ ಚಿಲ್ಲರೆ ವರ್ಷದಲ್ಲಿ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿಯತ್ತ ಮುನ್ನಡೆಸಿದರೆ ಇಷ್ಟೆಲ್ಲ ಕಷ್ಟಪಟ್ಟು ಸರಕಾರ ರಚಿಸಿದ್ದಕ್ಕೆ ಸಾರ್ಥಕವಾಗಬಹುದು.