Advertisement

ರಾಜ್ಯದ ತೆರಿಗೆ ಆದಾಯ ಆಶಾದಾಯಕ

12:30 AM Jun 30, 2018 | |

27,567ಕೋಟಿ ಜಿಎಸ್‌ಟಿಯಿಂದ ಸಂಗ್ರಹವಾದ ರಾಜ್ಯ ಪ್ರಮಾಣದ ತೆರಿಗೆ 
6,245ಕೋಟಿ ಕೇಂದ್ರದಿಂದ ಪರಿಹಾರ ರೂಪದಲ್ಲಿ ಬಂದಿರುವ ಹಣ
5.25ಲಕ್ಷ. ವ್ಯಾಟ್‌ ಪದ್ಧತಿಯಿದ್ದಾಗ ರಾಜ್ಯದಲ್ಲಿದ್ದ ತೆರಿಗೆದಾರರು
7ಲಕ್ಷ ಜಿಎಸ್‌ಟಿ ಜಾರಿ ಬಳಿಕ ರಾಜ್ಯದಲ್ಲಿರುವ ತೆರಿಗೆದಾರರು 
1.75 ಲಕ್ಷ ಜಿಎಸ್‌ಟಿ ಬಳಿಕ ರಾಜ್ಯದಲ್ಲಿ ಹೆಚ್ಚಿದ ತೆರಿಗೆದಾರರು

Advertisement

ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾಗಿ ವರ್ಷ ತುಂಬುತ್ತಿದೆ. ರಾಜ್ಯ ಸರ್ಕಾರಕ್ಕೆ ತೆರಿಗೆ ಆದಾಯ ದೃಷ್ಟಿಯಿಂದ ಜಿಎಸ್‌ಟಿ ಆಶಾದಾಯಕವಾಗಿದ್ದರೆ, ಆಯ್ದ ವಲಯಗಳ ವ್ಯವಹಾರದಲ್ಲಿ ಹಿಂಜರಿಕೆ ಮುಂದುವರಿದಿದ್ದು, ಉದ್ಯಮಿಗಳು ಚೇತರಿಕೆಯ ನಿರೀಕ್ಷೆಯಲ್ಲಿದ್ದಾರೆ. ಮುಖ್ಯವಾಗಿ ಬ್ರಾಂಡೆಡ್‌ ಆಹಾರ ಧಾನ್ಯ, ಬೇಳೆಕಾಳುಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿರುವುದರಿಂದ ಬ್ರಾಂಡ್‌ರಹಿತ, ನಕಲಿ ಬ್ರಾಂಡ್‌ನ‌ ಆಹಾರಧಾನ್ಯಗಳು ದೊಡ್ಡ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿವೆ. ಇದರಿಂದ ಬೆಲೆ ಮಾತ್ರವಲ್ಲದೆ ಗುಣಮಟ್ಟದ ಬಗ್ಗೆ ಕೂಡಾ ಗೊಂದಲ ಸೃಷ್ಟಿಯಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ.

ರಾಜ್ಯದ ಜನ ಬಳಸುವ ಪ್ರಮುಖ ಆಹಾರ ಪದಾರ್ಥದಲ್ಲೊಂದಾದ ಅಕ್ಕಿ ವಹಿವಾಟಿನ ಮೇಲೆ ಜಿಎಸ್‌ಟಿ ವ್ಯತಿರಿಕ್ತ ಪರಿಣಾಮ ಬೀರಿದಂತಿದೆ. ಬಹುತೇಕ ಬ್ರಾಂಡೆಡ್‌ ಅಕ್ಕಿ ವಹಿವಾಟು ಸ್ಥಗಿತಗೊಂಡು ಶೇ.50ರಷ್ಟು ವಹಿವಾಟು ಕುಸಿದಿದೆ. ಇಷ್ಟೇ ಪ್ರಮಾಣದ ಅಕ್ಕಿ ಹೊರ ರಾಜ್ಯಗಳಿಂದ ಪೂರೈಕೆಯಾಗುತ್ತಿದ್ದು, ರಾಜ್ಯದ ರೈತರಿಗೆ, ಗಿರಣಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂಬ ಮಾತಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮವೂ ವಹಿವಾಟು ವೃದ್ಧಿಯ ನಿರೀಕ್ಷೆಯಲ್ಲಿದೆ.

ಸಣ್ಣ ಕೈಗಾರಿಕೆ ಸೇರಿದಂತೆ ಭಾರಿ ಕೈಗಾರಿಕಾ ವಲಯದಲ್ಲಿ ಜಿಎಸ್‌ಟಿ ಬಗ್ಗೆ ಋಣಾತ್ಮಕ ಭಾವನೆಯಿಲ್ಲದಿದ್ದರೂ ತೆರಿಗೆ ವಿವರ ಸಲ್ಲಿಕೆ, ಹುಟ್ಟುವಳಿ  ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಹಿಂಪಡೆಯುವುದು ಸೇರಿದಂತೆ ಇತರೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳು ನಿವಾರಿಸಿ, ಇನ್ನಷ್ಟು ಸರಳಗೊಳಿಸಬೇಕು ಎಂಬುದು ಉದ್ಯಮ ವಲಯದ ಅಪೇಕ್ಷೆ. ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ವಹಿವಾಟು ಕುಸಿದಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ, ವಾಣಿಜ್ಯ ಮಾಲ್‌, ಸೂಪರ್‌ ಮಾರ್ಕೆಟ್‌, ಔಷಧೋದ್ಯಮ, ಸರಕು ಸಾಗಣೆ ವಲಯಗಳು ಚೇತರಿಸಿಕೊಂಡಿದ್ದು, ವಹಿವಾಟುಗಳು ಬಹುತೇಕ ಸಹಜ ಸ್ಥಿತಿಗೆ ಮರಳಿವೆ. ಅದೇ ರೀತಿ ಆಟೋಮೊಬೈಲ್‌ ಕ್ಷೇತ್ರದಲ್ಲಿ ವಾಹನ ಖರೀದಿ ಪ್ರಕ್ರಿಯೆಗೆ ಹಿನ್ನೆಡೆಯಾಗಿಲ್ಲ. ವಾರ್ಷಿಕ ಏರಿಕೆ ಪ್ರಮಾಣ ಮುಂದುವರಿದಿದೆ. 

ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ರಾಜ್ಯ ಪ್ರಮಾಣ 27,567 ಕೋಟಿ ರೂ. (2017ರ ಜುಲೈ 1 ರಿಂದ ಮಾರ್ಚ್‌ 31, 2018 ವರೆಗೆ) ತೆರಿಗೆ ಸಂಗ್ರಹವಾಗಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ರೂಪದಲ್ಲಿ ಜುಲೈನಿಂದ ಮಾರ್ಚ್‌ ವರೆಗೆ 6,245 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ.

Advertisement

ಶೇ.14ರ ಗುರಿ ತಲುಪಿಲ್ಲ ದೇಶ 
ದೇಶಾದ್ಯಂತ ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಸಂಗ್ರಹ ಸ್ಥಿರವಾಗಿದೆ ಎನ್ನಬಹುದು. ಅಷ್ಟರ ಮಟ್ಟಿಗೆ ತೆರಿಗೆದಾರರು, ಗ್ರಾಹಕರು ಹೊಸ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಶೇ.14ರಷ್ಟು ತೆರಿಗೆ ಸಂಗ್ರಹ ಪ್ರಗತಿ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ತೆರಿಗೆ ಸಂಗ್ರಹ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರೀಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಎಂ.ಎನ್‌.ಶ್ರೀಕರ್‌, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ

ಸಂಗ್ರಹ ಆಶಾದಾಯಕ
ಜಿಎಸ್‌ಟಿ ಜಾರಿ ಬಳಿಕ ರಾಜ್ಯ ವಾಣಿಜ್ಯ ತೆರಿಗೆ ಆದಾಯ ಸಂಗ್ರಹಣೆ ಉತ್ತಮವಾಗಿದೆ. ವ್ಯಾಟ್‌ ಪದ್ಧತಿಗೆ ಹೋಲಿಸಿದರೆ ಜಿಎಸ್‌ಟಿಯಡಿ ತೆರಿಗೆದಾರರ ಸಂಖ್ಯೆಯಲ್ಲಿ 1.75 ಲಕ್ಷ ಏರಿಕೆಯಾಗಿದೆ.  ಕೇಂದ್ರ ಸರ್ಕಾರದ ಪರಿಹಾರವೂ ಒಳಗೊಂಡಂತೆ ಶೇ.14ರಷ್ಟು ಪ್ರಗತಿ ಸಾಧಿಸಿದೆ. ಕೇಂದ್ರೀಯ ತೆರಿಗೆ ಆದಾಯ ವೃದ್ಧಿಯಾಗದಿದ್ದರೂ ತಟಸ್ಥವಾಗಿರುವುದು ಆಶಾದಾಯಕ ಎಂದು ಕೇಂದ್ರೀಯ ತೆರಿಗೆ ಇಲಾಖೆ ತಿಳಿಸಿದೆ.ಒಟ್ಟಾರೆ ಜಿಎಸ್‌ಟಿ ಜಾರಿ ಆರಂಭದ ಸಂದರ್ಭಕ್ಕೂ ವರ್ಷ ಪೂರೈಸುತ್ತಿರುವ ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಸಾಕಷ್ಟು ಸರಕು ಸೇವೆಗಳ ಮೇಲಿನ ತೆರಿಗೆ ಇಳಿಕೆಯಾಗಿದೆ. ತಾಂತ್ರಿಕ ಅಡಚಣೆಗಳು ಗಣನೀಯವಾಗಿ ಕಡಿಮೆಯಾಗಿದ್ದು, ಇನ್ನಷ್ಟು ಸರಳಗೊಳ್ಳಬೇಕಿದೆ. ಮಾಸಿಕ ರಿಟರ್ನ್ಸ್ ಸಲ್ಲಿಕೆ ಸಹಿತ ಇತರೆ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು, ಹಿನ್ನಡೆ ಅನುಭವಿಸುತ್ತಿರುವ ಉದ್ಯಮಗಳ ಚೇತರಿಕೆಗೆ ಗಮನ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.

“ಔಷಧಗಳ ಪೈಕಿ ಶೇ.85ರಷ್ಟು ಔಷಧಗಳಿಗೆ ಶೇ.12ರಷ್ಟು ತೆರಿಗೆಯಿದ್ದು, ಜಿಎಸ್‌ಟಿ ಸಂಬಂಧ ಗೊಂದಲ ಮುಂದುವರಿದಿದೆ. ಹಿಂದಿನ ವ್ಯಾಟ್‌ ವ್ಯವಸ್ಥೆಯಲ್ಲಿ ಅವಧಿ ಮುಗಿದ ಔಷಧಗಳನ್ನು ಹಿಂದಿರುಗಿಸಿದಾಗ ತೆರಿಗೆ ಮೊತ್ತ ಮರು ಪಾವತಿಯಾಗುತ್ತಿತ್ತು. ಆದರೆ ಜಿಎಸ್‌ಟಿಯಡಿ ತೆರಿಗೆ ಮೊತ್ತ ವಾಪಸ್ಸಾಗುತ್ತಿಲ್ಲ. ಇದರಿಂದ ವರ್ಷದಿಂದೀಚೆಗೆ ತೀವ್ರ ನಷ್ಟವಾಗುತ್ತಿದೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಗಮನಕ್ಕೆ ತರಲಾಗಿದ್ದು, ಪರಿಶೀಲಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಔಷಧ ಉದ್ಯಮದಲ್ಲಿ ಶೇ. 7ರಿಂದ ಶೇ.8ರಷ್ಟು ನಷ್ಟ ಅನುಭವಿಸುವಂತಾಗಿದೆ’ಎನ್ನುತ್ತಾರೆೆ ಬೃಹತ್‌ ಬೆಂಗಳೂರು ಕೆಮಿಸ್ಟ್‌ ಮತ್ತು ಡ್ರಗಿಸ್ಟ್‌ ಸಂಘದ ಅಧ್ಯಕ್ಷ ಎಂ.ಕೆ.ಮಾಯಣ್ಣ.

ಇನ್ನೂ ಕರ್ನಾಟಕ ಹೊಸೈರಿ ಮತ್ತು ಗಾರ್ಮೆಂಟ್ಸ್‌ ಸಂಘದ ನಿಕಟಪೂರ್ವ ಅಧ್ಯಕ್ಷ ದಿಲೀಪ್‌ ಜೈನ್‌ “ಗಾರ್ಮೆಂಟ್‌ ವಲಯದಲ್ಲಿ ನೋಟು ಅಮಾನ್ಯ ಬಳಿಕ ಕುಸಿದ ವ್ಯವಹಾರ ನಂತರ ಚೇತರಿಕೆ ಕಂಡಿಲ್ಲ. ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ಶೇ.40ರಷ್ಟು ವಹಿವಾಟು ಕುಸಿದಿತ್ತು. ನಂತರ ಚೇತರಿಕೆ ಕಾಣುತ್ತಿದೆ. ಈಗಲೂ ಶೇ.20ರಷ್ಟು ವಹಿವಾಟು ಕುಸಿತ ಮುಂದುವರಿದಿದೆ. ಜವಳಿ ಕ್ಷೇತ್ರದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿರುವುದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಇದೆ.’ಎನ್ನುತ್ತಾರೆ.

ಪರಿಣತರ ಮಾತಿನಲ್ಲಿ ಕರ್ನಾಟಕದ ವಲಯವಾರು ಸ್ಥಿತಿಗತಿ
ನೋಟು ಅಮಾನ್ಯದ ಬೆನ್ನಲ್ಲೇ ಜಾರಿಯಾದ ಜಿಎಸ್‌ಟಿಯಿಂದಾಗಿ ಹೋಟೆಲ್‌ ಉದ್ಯಮದ ವಹಿವಾಟು ಶೇ.20ರಿಂದ ಶೇ.30ರಷ್ಟು ಕುಸಿದಿದ್ದು, ಈವರೆಗೆ ಚೇತರಿಸಿಕೊಂಡಿಲ್ಲ. ಆರಂಭದಲ್ಲಿ ಹವಾನಿಯಂತ್ರಿತ ಹೋಟೆಲ್‌ಗೆ ದುಬಾರಿ ತೆರಿಗೆ ವಿಧಿಸಿ ನಂತರ ಇಳಿಸಿದರೂ ಗ್ರಾಹಕರಲ್ಲಿ ದುಬಾರಿ ಎಂಬ ಭಾವನೆ ಹಾಗೆ ಉಳಿದಿದೆ. ಕೇಟರಿಂಗ್‌ಗೆ ಶೇ.18ರಷ್ಟು ತೆರಿಗೆಯಿದ್ದು, ಇದರ ಇಳಿಕೆಗೆ ಒತ್ತಾಯಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಹೋಟೆಲ್‌-ರೆಸ್ಟೋರೆಂಟ್‌ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್‌ ಹೇಳಿದರು.  ಇನ್ನು ಬ್ರಾಂಡೆಡ್‌ ಅಕ್ಕಿಗೆ ಶೇ.5ರಷ್ಟು ತೆರಿಗೆ ವಿಧಿಸಿರುವುದರಿಂದ ತಲೆಮಾರುಗಳಿಂದ ಬ್ರಾಂಡ್‌ ಉತ್ಪನ್ನ ಮಾರುತ್ತಿದ್ದವರು ವ್ಯವಹಾರ ಸ್ಥಗಿತಗೊಳಿಸುವಂತಾಗಿದೆ. ಅಕ್ಕಿ ವ್ಯವಹಾರ ಶೇ.50ರಷ್ಟು ಕುಸಿದಿದೆ. ಬ್ರಾಂಡೆಡ್‌ ಗೊಂದಲದಿಂದ ಹೊರರಾಜ್ಯದಿಂದ ಭಾರಿ ಪ್ರಮಾಣದಲ್ಲಿ ಅಕ್ಕಿ ಪೂರೈಕೆಯಾಗುತ್ತಿದೆ. ಬ್ರಾಂಡ್‌ರಹಿತ, ಗುಣಮಟ್ಟವಿಲ್ಲದ ಅಕ್ಕಿ ಪೂರೈಕೆ ಹೆಚ್ಚಾಗಿದೆ. ಇದರಿಂದ ರೈತರು, ಗಿರಣಿದಾರರು ನಷ್ಟ ಅನುಭವಿಸುವಂತಾಗಿದ್ದು, ಗ್ರಾಹಕರಿಗೂ ಗುಣಮಟ್ಟದ ಅಕ್ಕಿ ಸಿಗದಂತಾಗಿದೆ. ಹಾಗಾಗಿ ಕಾನೂನು ಹೋರಾಟ ನಡೆಸಲು ಚಿಂತಿಸಲಾಗಿದೆ ಎಂದು ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ ಎನ್‌. ರಾವ್‌  ಎಚ್ಚರಿಸಿದರು. 

ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಅವರ ಪ್ರಕಾರ ಸರಕು ಸಾಗಣೆ ವಲಯದ ವಹಿವಾಟು ಸಹಜ ಸ್ಥಿತಿಗೆ ಮರಳಿದ್ದರೂ ರಿಟರ್ನ್ಸ್ ಸಲ್ಲಿಕೆಯಲ್ಲಿನ ಸಂಕೀರ್ಣತೆಯಿಂದ ಗೊಂದಲ ಹೆಚ್ಚಾಗಿದೆ. ಪ್ರತಿ ವಹಿವಾಟಿಗೂ ಆಡಿಟರ್‌ಗಳನ್ನು ಸಂಪರ್ಕಿಸಿ ಲೆಕ್ಕಾಚಾರ ನಡೆಸಬೇಕಾದ ಸ್ಥಿತಿ ಇದೆ. ಸರಕು ಸಾಗಣೆ ಕ್ಷೇತ್ರದಲ್ಲಿ ತೆರಿಗೆ ವ್ಯಾಪ್ತಿಗೆ ಒಳಪಡುವ ವ್ಯವಹಾರದ ಬಗ್ಗೆ ಗೊಂದಲ ಇನ್ನೂ ಇದೆ. ಒಟ್ಟಲ್ಲಿ ಪ್ರಕ್ರಿಯೆಗಳು ಇನ್ನಷ್ಟು ಸರಳವಾಗಬೇಕಿದೆ ಎನ್ನುತ್ತಾರವರು. “”ಜಿಎಸ್‌ಟಿ ಜಾರಿ ಬಳಿಕ ಆಹಾರ ಧಾನ್ಯ, ಬೇಳೆಕಾಳುಗಳ ವಹಿವಾಟು ಶೇ.50ರಷ್ಟು ಕುಸಿದಿದ್ದು, ಈ ಮಟ್ಟದ ಇಳಿಕೆಗೆ ಕಾರಣವೇ ಗೊತ್ತಾಗದಾಗಿದೆೆ. ಬ್ರಾಂಡ್‌ಗಿಂತ ಬ್ರಾಂಡ್‌ರಹಿತ ಆಹಾರ ಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಗುಣಮಟ್ಟದ ಬಗ್ಗೆ ಗೊಂದಲ ಮುಂದು ವರಿದಿದೆ” ಎನ್ನುತ್ತಾರೆ ಬೆಂಗಳೂರು ಧಾನ್ಯ ವರ್ತಕರ ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್‌.

“”ಜಿಎಸ್‌ಟಿ ಜಾರಿಯಾದ ಆರಂಭದಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಶೇ.20ರಷ್ಟು ಇಳಿಕೆ ಕಂಡಿತ್ತು. ನಂತರ ಗೊಂದಲ ನಿವಾರಣೆಯಾಗಿ, ಜನರಲ್ಲಿ ಜಾಗೃತಿ ಮೂಡಿದ ಬಳಿಕ ವಹಿವಾಟು ವೃದ್ಧಿಸಲಾರಂಭಿಸಿದ್ದು, ಉದ್ಯಮ ಬಹುತೇಕ ಸಹಜ ಸ್ಥಿತಿಗೆ ಮರಳಿದೆ” ಎನ್ನುವ ಗುಣಾತ್ಮಕ ನುಡಿಗಳು  ಕೆಆರ್‌ಇಡಿಎಐ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎನ್‌. ಹರಿ ಅವರದ್ದು.

ರಾಜ್ಯ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ. ಮನೋಹರ್‌,  “”ಜಿಎಸ್‌ಟಿ ಜಾರಿಯಾದ ಆರಂಭದಲ್ಲಿನ ಬಹುತೇಕ ತಾಂತ್ರಿಕ ಅಡಚಣೆಗಳು ನಿವಾರಣೆಯಾಗಿವೆ. ಮಾಸಿಕ ರಿಟರ್ನ್ಸ್ ಸಲ್ಲಿಕೆ ಇನ್ನಷ್ಟು ಸರಳವಾಗಬೇಕು. ಗರಿಷ್ಠ ಶೇ.28ರಷ್ಟು ತೆರಿಗೆಯಿರುವ ಕಚ್ಚಾ ಪದಾರ್ಥ, ಸಿದ್ಧ ಸರಕಿನ ತೆರಿಗೆ ಇಳಿಕೆಯಾದರೆ ಒಳಿತು. ಇ-ವೇ ರಸೀದಿ ವ್ಯವಸ್ಥೆಯಿಂದ ನ್ಯಾಯಯುತ ವ್ಯವಹಾರ ಮಾಡುವವರಿಗೆ ಅನುಕೂಲವಾಗಿದೆ. ತಾಂತ್ರಿಕ ಸಂಕೀರ್ಣತೆ ಇನ್ನಷ್ಟು ಸರಳವಾದರೆ ಒಳಿತು” ಎನ್ನುವ ಸಲಹೆ ನೀಡುತ್ತಾರೆ.

ಎಫ್ಕೆಸಿಸಿಐ ನಿಕಟಪೂರ್ವ ಅಧ್ಯಕ್ಷ ಕೆ.ರವಿ ಅವರ ಪ್ರಕಾರ ಆರಂಭದಲ್ಲಿದ್ದ ತಾಂತ್ರಿಕ ತೊಡಕುಗಳು ನಿವಾರಣೆಯಾಗಿವೆ. ಕೆಲ ತೆರಿಗೆ ಪ್ರಮಾಣವೂ ಪರಿಷ್ಕರಣೆಯಾಗಿದೆ. ಇ-ವೇ ರಸೀದಿ ವ್ಯವಸ್ಥೆಯಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ಸಣ್ಣ ಕೈಗಾರಿ ಕೆಗಳಿಗೆ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸರಳಗೊಂಡಿದೆ. ಕೆಲ ಅಡಚಣೆಗಳ ಹೊರತಾಗಿ ಒಟ್ಟಾರೆ ಕೈಗಾರಿಕೋದ್ಯಮ ವಲಯಕ್ಕೆ ಆಶಾದಾಯಕವಾಗಿದೆ.

“”ಜಿಎಸ್‌ಟಿಯಡಿ ಮಾಸಿಕ ರಿಟರ್ನ್ಸ್ ಸಲ್ಲಿಕೆ ಸಂಕೀರ್ಣವಾಗಿದ್ದು, ಸಣ್ಣ ಉದ್ದಿಮೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹುಟ್ಟುವಳಿ ತೆರಿಗೆ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಪಡೆಯುವ ಪ್ರಕ್ರಿಯೆಯು ಸುಧಾರಣೆಯಾಗಬೇಕಿದೆ. ಗ್ರಾಮಾಂತರ ಪ್ರದೇಶದ ಸಣ್ಣ ಉದ್ದಿಮೆದಾರರು ಈ ಪ್ರಕ್ರಿಯೆಗಳನ್ನು ನಡೆಸಲು ತೊಂದರೆಯಾಗುತ್ತಿದ್ದು, ಆಡಿಟರ್‌ಗಳನ್ನು ಅವಲಂಬಿಸಬೇಕಿದೆ. ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಸರಳಗೊಳಿಸಬೇಕಿದೆ” ಎನ್ನುವುದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅಭಿಪ್ರಾಯ.

“”ಜಿಎಸ್‌ಟಿ ಅನುಷ್ಠಾನವಾದ ಆರಂಭಿಕ ಮೂರು ತಿಂಗಳಲ್ಲಿ ವಹಿವಾಟಿನಲ್ಲಿ ಇಳಿಕೆಯಾಗಿತ್ತು. ಆಯ್ದ ಉತ್ಪನ್ನಗಳ ಬೆಲೆ ಇಳಿಕೆಯಾಗುವ ನಿರೀಕ್ಷೆಯಲ್ಲಿ ಜನ ಖರೀದಿಗೆ ಹಿಂದೇಟು ಹಾಕಿದಂತ್ತಿತ್ತು. ಕ್ರಮೇಣ ಜಿಎಸ್‌ಟಿ ಬಗೆಗಿನ ಜಾಗೃತಿ ಹೆಚ್ಚಿದಂತೆ ವಹಿವಾಟು ಚೇತರಿಕೆ ಕಾಣುತ್ತಿದೆ. ವಹಿವಾಟಿನ ವಾರ್ಷಿಕ ಪ್ರಗತಿ ದರ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿದ್ದರೂ ಸಹಜ ಸ್ಥಿತಿಗೆ ಮರಳುತ್ತಿದೆ” ಎನ್ನುತ್ತಾರೆ ಗರುಡಾ ಮಾಲ್‌ನ ಮ್ಯಾನೇಜರ್‌ ನಂದೀಶ್‌. 

ಆಶಾದಾಯಕ ವಲಯ
ಆಟೋಮೊಬೈಲ್‌, ಸರಕು ಸಾಗಣೆ
ರಿಯಲ್‌ ಎಸ್ಟೇಟ್‌ ವಲಯ, ಕೈಗಾರಿಕೋದ್ಯಮ, ಸಣ್ಣ ಕೈಗಾರಿಕೆ

ಸಂಕಷ್ಟದ ವಲಯ
ಅಕ್ಕಿ ಉತ್ಪಾದನೆ- ಮಾರಾಟ
ಆಹಾರಧಾನ್ಯ, ಬೇಳೆಕಾಳು
ಹೋಟೆಲ್‌ ,ಗಾರ್ಮೆಂಟ್‌ ಉದ್ಯಮ

2016-17ಕ್ಕೆ ಹೋಲಿಸಿದರೆ 
2017-18 ರಲ್ಲಿ ವಾಹನ ನೋಂದಣಿ ಏರಿಕೆ

ದ್ವಿಚಕ್ರ ವಾಹನ                            8.88%
ಕಾರುಗಳು                                  9.02 %
ಯಂತ್ರೋಪಕರಣ ವಾಹನಗಳು         6.71 %
ಲಘು ಸರಕು ಸಾಗಣೆ ವಾಹನಗಳು      8.87%
ಮೋಟಾರ್‌ ಕ್ಯಾಬ್‌ಗಳು (ಟ್ಯಾಕ್ಸಿ)        11.18%

ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next