Advertisement

State Railway Project; ಸಚಿವ ಅಶ್ವಿ‌ನಿ ವೈಷ್ಣವ್‌ ಜತೆ ಎಚ್‌ಡಿಕೆ ಚರ್ಚೆ

09:03 PM Jun 19, 2024 | Team Udayavani |

ಬೆಂಗಳೂರು: ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಒಂದು ವಾರದಿಂದ ರಾಜ್ಯದಲ್ಲೇ ಇದ್ದ ಎಚ್‌.ಡಿ. ಕುಮಾರಸ್ವಾಮಿ, ಬುಧವಾರ ನವದೆಹಲಿ ತಲುಪಿದ್ದು, ರಾಜ್ಯದ ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

Advertisement

ಬುಧವಾರ ಮುಂಜಾನೆ 4.30ಕ್ಕೆ ಬೆಂಗಳೂರಿನಿಂದ ಹೊರಟು 9 ಗಂಟೆಗೆ ದೆಹಲಿ ತಲುಪಿದ ಅವರು, ರೈಲ್ವೆ ಭವನಕ್ಕೆ ತೆರಳಿ ಸಚಿವ ಅಶ್ವಿ‌ನಿ ವೈಷ್ಣವ್‌ ಅವರನ್ನು ಭೇಟಿ ಮಾಡಿ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಹಾಗೂ ಹಾಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದು, ಹೊಸ ರೈಲ್ವೆ ಕಾಮಗಾರಿಗಳಿಗೆ ಅನುಮೋದನೆ ನೀಡುವುದು, ಹಣಕಾಸಿನ ಅನುದಾನ ಒದಗಿಸುವ ಬಗ್ಗೆ ಸಮಾಲೋಚನೆ ನಡೆಸಿದರು.

ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕಾಲದಲ್ಲಿ ಮಂಜೂರಾಗಿದ್ದ ಕನಕಪುರ- ಮಳವಳ್ಳಿ ಮಾರ್ಗವಾಗಿ ಬೆಂಗಳೂರು – ಸತ್ಯಮಂಗಲ – ಚಾಮರಾಜನಗರ ನಡುವಿನ ರೈಲ್ವೆ ಯೋಜನೆಯನ್ನು ಕೈಗೆತ್ತಿಕೊಂಡು ಆದಷ್ಟು ಶೀಘ್ರ ಪೂರ್ಣಗೊಳಿಸಲು ಮನವಿ ಮಾಡಿದರು.

ರಾಜ್ಯದ ವಿದ್ಯಮಾನ ಚರ್ಚೆ:
ಗೃಹ ಸಚಿವ ಅಮಿತ್‌ ಶಾ ಅವರ ನಿವಾಸಕ್ಕೂ ತೆರಳಿದ ಕುಮಾರಸ್ವಾಮಿ, ರಾಜ್ಯದ ಹಲವು ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಉದ್ಯೋಗ ಭವನದಲ್ಲಿ ವಿವಿಧ ನಿಯೋಗಗಳ ಭೇಟಿ ಮಾಡಿದ ಅವರು, ಉಕ್ಕು ಮತ್ತು ಭಾರೀ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸವರ್ಮ ಅವರನ್ನೂ ಒಳಗೊಂಡು ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದಾರೆ.

ಉದ್ಯೋಗ ಭವನದಲ್ಲಿಅಧಿಕಾರಿಗಳ ಜತೆಗೆ ಸಭೆ ನಡೆಸಿದ ಎಚ್‌ಡಿಕೆ, ನಂತರ ಭಾರತ್‌ ಹೆವಿ ಎಲೆಕ್ಟ್ರಿಕಲ್‌ ಕಂಪನಿ (ಬಿಎಚ್‌ಇಎಲ್‌) ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡರು. ವಿದ್ಯುತ್‌, ರಕ್ಷಣೆ, ಕೈಗಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ವಲಯಗಳಲ್ಲಿ ಬಿಎಚ್‌ಇಎಲ್‌ ಕಾರ್ಯಚಟುವಟಿಕೆ ಕುರಿತು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಸದಾಶಿವಮೂರ್ತಿ ಅವರು ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು. ಈ ವೇಳೆ ಸಚಿವಾಲಯದ ಕಾರ್ಯದರ್ಶಿ ಕಮರನ್‌ ರಿಜ್ವಿ ಸೇರಿದಂತೆ ಮತ್ತಿತರರು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next