ಬೆಂಗಳೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ 6 ತಿಂಗಳು ಬಾಕಿ ಇರುವಂತೆಯೇ ಮೂರೂ ಪಕ್ಷಗಳ ಶಾಸಕರಿಗೆ “ಆಂತರಿಕ ಸಮೀಕ್ಷೆಗಳದ್ದೇ’ ಚಿಂತೆಯಾಗಿದೆ.
ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಗಳ ವರದಿ ಬಗ್ಗೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ. ವಿಧಾನ ಮಂಡಲದ ಮೊಗಸಾಲೆಯಲ್ಲೂ ಈ ಸಮೀಕ್ಷೆಯ ಅಂಕಿ ಅಂಶಗಳೇ ಚರ್ಚೆಯ ಅಂಶಗಳು. ಜತೆಗೆ, ತಮ್ಮ “ಸುರಕ್ಷಿತ’ ಹಾದಿಯ ಬಗ್ಗೆಯೂ ಶಾಸಕರು ಚಿಂತಿಸತೊಡಗಿದ್ದಾರೆ.
ಬಿಜೆಪಿ ಆಂತರಿಕ ಸಮೀಕ್ಷೆ ಒಪ್ಪದ ಕಾಂಗ್ರೆಸ್ ನಾಯಕರು, ಸಿದ್ದರಾಮೋತ್ಸವ ಬಳಿಕ ನಮ್ಮ ಸ್ಥಿತಿ ಉತ್ತಮವಾಗಿದೆ. ಭಾರತ್ ಜೋಡೋ ಯಾತ್ರೆಯ ಅನಂತರ ಅತ್ಯುತ್ತಮ ಗೊಳ್ಳಲಿದೆ ಎನ್ನತೊಡಗಿದ್ದಾರೆ. ಕಾಂಗ್ರೆಸ್, ಮುಂಬಯಿ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.
ಆದರೆ ಬಿಜೆಪಿ ಲೆಕ್ಕಾಚಾರವೇ ಬೇರೆ. ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ನಡು ವಿನ ಆಂತರಿಕ ಸಂಘರ್ಷದಿಂದ ಕಾಂಗ್ರೆಸ್‌ಗೆ ಹಿನ್ನೆಡೆ ಯುಂಟಾಗಲಿದೆ. ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯ ನಾಥ್ “ಹವಾ’ ನಮ್ಮನ್ನು ದಡ ಮುಟ್ಟಿ ಸೀತು ಎಂಬುದು ಬಿಜೆಪಿ ನಂಬಿಕೆ. ಕರಾವಳಿ ಮತ್ತು ಮಲೆನಾಡು ಜತೆಗೆ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 15 ಹೆಚ್ಚು ಸ್ಥಾನ ಗೆಲ್ಲುವ ಲೆಕ್ಕಾಚಾರ ಬಿಜೆಪಿಯದ್ದು. ಕಾಂಗ್ರೆಸ್‌ನಿಂದ ವಲಸೆ ಬಂದ ಶಾಸಕರನ್ನು ನಂಬಿದೆ.
ಜೆಡಿಎಸ್ ಮಾತ್ರ ಉಳಿದ ಪಕ್ಷಗಳು ಕಡಿಮೆ ಬಂದಷ್ಟು ನಾನೇ ನಿರ್ಣಾಯಕ ಎನ್ನುತ್ತಿದೆ. ನಾವು 40ರಿಂದ 50 ಸ್ಥಾನ ಗೆದ್ದರೆ ನಮ್ಮನ್ನು ಬಿಟ್ಟು ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ಮಾಡಲು ಸಾಧ್ಯವೇ? ಎನ್ನುತ್ತಿದ್ದಾರೆ ಜೆಡಿಎಸ್ ನಾಯಕರು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮೀಣ, ರಾಮನಗರ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಬಗ್ಗೆ ಜೆಡಿಎಸ್ ಭರವಸೆ ಹೊಂದಿದೆ.
ಇದು ಪ್ರಾರಂಭಿಕ ಹಂತ. ನವೆಂಬರ್ ಅಥವಾ ಡಿಸೆಂಬರ್ ಅನಂತರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಆಗ ಒಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.
– ಎಸ್. ಲಕ್ಷ್ಮಿನಾರಾಯಣ