ಬೆಂಗಳೂರು: “ಗುಜರಾತ್ ಚುನಾವಣೆ ಬಳಿಕ ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗಬಹುದು. ಎಲ್ಲದಕ್ಕೂ ಸಿದ್ದವಾಗಿರಿ“ಎಂದು ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರಿಗೆ ಇತ್ತೀಚೆಗೆ ನೀಡಿರುವ ಸಲಹೆ ಈಗ ವಿಭಿನ್ನ ವ್ಯಾಖ್ಯಾನಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ನಿಗದಿತ ದಿನಕ್ಕಿಂತ ಒಂದುವರೆ ತಿಂಗಳು ಮುಂಚಿತವಾಗಿಯೇ ಚುನಾವಣೆ ಎದುರಾಗಬಹುದೇ ? ಎಂಬ ಪ್ರಶ್ನೆ ಮೂಡಿಸಿದೆ.
ಕೆಲ ದಿನಗಳ ಹಿಂದೆ ನಡೆದ ಕೆಪಿಸಿಸಿ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಬ್ಬರೂ ಪದಾಧಿಕಾರಿಗಳಿಗೆ ಈ ಎಚ್ಚರಿಕೆ ನೀಡಿದ್ದಾರೆ. ವಿಪಕ್ಷಗಳಲ್ಲಿ ಗೊಂದಲ ಮೂಡಿಸಲು ಒಂದರಿಂದ ಒಂದುವರೆ ತಿಂಗಳು ಮುಂಚಿತವಾಗಿಯೇ ಚುನಾವಣೆ ಘೋಷಿಸಬಹುದು. ಹೀಗಾಗಿ ಎಲ್ಲದಕ್ಕೂ ಸಿದ್ದವಾಗಿರಿ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕರೂ ತಂತ್ರಗಾರಿಕೆ ರೂಪಿಸಿದ್ದು, ಡಿಸೆಂಬರ್ ಅಂತ್ಯಕ್ಕೆ 150 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ಚರ್ಚೆ ನಡೆಸಿದ್ದಾರೆ. ಗೆಲ್ಲುವ ಸ್ಥಳಗಳಲ್ಲಿ ಗೊಂದಲ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಲಿ ಗೆದ್ದ ಶಾಸಕರು, ಪರಾಜಿತ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ವಿದೇಶ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ 150 ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಮಹತ್ವದ ಸಭೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಮೂಲಕ ಬಿಜೆಪಿಯ ಸವಾಲಿಗೆ ಕಾಂಗ್ರೆಸ್ ಪ್ರತಿ ಸವಾಲು ಹೆಣೆಯಲು ಸಿದ್ದವಾಗಿದೆ ಎಂದು ಹೇಳಲಾಗುತ್ತಿದೆ.
ಅವಧಿಪೂರ್ವ ಚುನಾವಣೆ ಸಾಧ್ಯತೆ ಬಗ್ಗೆ ಬಿಜೆಪಿಯಲ್ಲೂ ಪಿಸುಮಾತುಗಳು ಕೇಳಿ ಬರುತ್ತಿವೆ. ಮಾರ್ಚ್ ಅಂತ್ಯಕ್ಕೆ ಚುನಾವಣೆ ನಡೆದರೂ ನಡೆಯಬಹುದು ಎಂದು ಹೇಳಲಾಗುತ್ತಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟತೆ ಸಿಗಬಹುದು ಎನ್ನಲಾಗಿದೆ.