Advertisement

ಮೌಲ್ಯಮಾಪನ ಬಹಿಷ್ಕರಿಸಿದರೆ ಆರು ತಿಂಗಳು ಜೈಲು

09:47 AM Mar 18, 2017 | Team Udayavani |

ಬೆಂಗಳೂರು: ಶಿಕ್ಷಕ ವರ್ಗ ಪರೀಕ್ಷಾ ಮೌಲ್ಯಮಾಪನವನ್ನು ಬಹಿಷ್ಕರಿಸಿ ಪ್ರತಿಭಟಿಸಿದರೆ ಆರು ತಿಂಗಳು ಜೈಲು ಅಥವಾ ಒಂದು ಲಕ್ಷ ರೂ. ವರೆಗೆ ದಂಡ ತೆರಬೇಕಾಗುತ್ತದೆ. ಪಿಯುಸಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಿದ ಬೆನ್ನಲ್ಲೇ ಕರ್ನಾಟಕ ಶಿಕ್ಷಣ ಕಾಯ್ದೆ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿರುವುದು ಮಹತ್ವ ಎನಿಸಿದೆ. ತೀವ್ರ ವಿವಾದಕ್ಕೆ ಒಳಗಾಗಿದ್ದ ಹಾಗೂ ಉಪನ್ಯಾಸಕರು ಮತ್ತು ಶಿಕ್ಷಕರ ವಿರೋಧಕ್ಕೆ ಕಾರಣವಾಗಿದ್ದ ಈ ಮಸೂದೆಗೆ ಈಗ ಪರಿಷತ್‌ನ ಅನುಮೋದನೆ ದೊರೆತಿರುವುದರಿಂದ ಮತ್ತೂಮ್ಮೆ ವಿಧಾನ ಸಭೆಯಲ್ಲಿ ಒಪ್ಪಿಗೆ ಪಡೆದ ಅನಂತರ ರಾಜ್ಯಪಾಲರ ಅನುಮೋದನೆ ಪಡೆಯಬೇಕಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರಿಗೆ ಗರಿಷ್ಠ 5 ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸುವ ಅಂಶವೂ ಈ ಮಸೂದೆಯಲ್ಲಿದೆ.

Advertisement

ಕಳೆದ ಬಾರಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ರಾಜ್ಯ ಸರಕಾರ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕುವುದು ಹಾಗೂ ಮೌಲ್ಯಮಾಪನ ಬಹಿಷ್ಕರಿಸುವ ಶಿಕ್ಷಕರು, ಉಪನ್ಯಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿತ್ತು. ಫೆಬ್ರವರಿಯಲ್ಲಿ ನಡೆದ ಅಧಿವೇಶನದ ವೇಳೆ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತವಾಗಿತ್ತು.

ಆದರೆ ವಿಧಾನ ಪರಿಷತ್‌ ಕಲಾಪ ದಲ್ಲಿ ಚರ್ಚೆ ವೇಳೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲನ ಸಮಿತಿಗೆ ವಹಿಸಿ 15 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಸಮಿತಿ ಇತ್ತೀಚೆಗೆ ಸಭಾಪತಿಗಳಿಗೆ ವರದಿ ಸಲ್ಲಿಸಿತ್ತು. ವಿಧಾನಪರಿಷತ್ತಿನ ಪರಿಶೀಲನ ಸಮಿತಿಯ ವರದಿಯಲ್ಲಿ ಶಿಫಾರಸು ಮಾಡಲಾದ ತಿದ್ದುಪಡಿಗಳ ರೀತ್ಯಾ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಮಸೂದೆಯನ್ನು ಮಂಡಿಸಿದರು. ಶುಕ್ರವಾರ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿತು. ವಿರೋಧದ ನಡುವೆಯೇ ಮಸೂದೆ ಮಂಡಿಸಿ ಧ್ವನಿಮತದ ಅನುಮೋದನೆ ಪಡೆಯಲಾಯಿತು.

ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ವಿಧಿಸಲಾಗುವ ಶಿಕ್ಷೆ, ದಂಡ ಪ್ರಮಾಣ, ಪರೀಕ್ಷಾ ಅಕ್ರಮ ನಡೆಸಿದ ವಿದ್ಯಾರ್ಥಿಗಳನ್ನು 3 ವರ್ಷ ಡಿಬಾರ್‌ ಮಾಡುವ ತಿದ್ದುಪಡಿ ಮಸೂದೆಯ ಅಂಶಗಳಿಗೆ ಬಿಜೆಪಿ – ಜೆಡಿಎಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಕಾಯ್ದೆಗೆ ತಿದ್ದುಪಡಿ ತಂದಿಲ್ಲ. ಶಿಕ್ಷಣ ವ್ಯವಸ್ಥೆ ಸುಧಾರಣೆ , ವಿದ್ಯಾರ್ಥಿಗಳು ಹಾಗೂ ಹೆತ್ತವರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡರು. ಇದಕ್ಕೆ ಅಸಮಾಧಾನಗೊಂಡ ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರೆ, ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಸದಸ್ಯರು ಸಚಿವರ ಬೆಂಬಲಕ್ಕೆ ನಿಂತರು. 

Advertisement

ಸಾಕಷ್ಟು ಚರ್ಚೆ ಬಳಿಕ ಅಂತಿಮವಾಗಿ ಮಾತನಾಡಿದ ಸಚಿವ ತನ್ವೀರ್‌ ಸೇಠ್, ‘ವಿದ್ಯಾರ್ಥಿಗಳು ಅಕ್ರಮದಲ್ಲಿ ತೊಡಗದಂತೆ ಮಾಡಲು ಮೂರು ವರ್ಷದವರೆಗೆ ಡಿಬಾರ್‌ ಮಾಡುವ ಅಂಶ ಸೇರಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳು ಶೇ. 100 ಫ‌ಲಿತಾಂಶ ಪಡೆಯಲು ಪರೀಕ್ಷಾ ಅಕ್ರಮಕ್ಕೆ ಸಹಕಾರ ನೀಡುತ್ತಿವೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲೇಬೇಕಾಗುತ್ತದೆ’ ಎಂದರು.

ಶಿಕ್ಷಣ ಕಾಯ್ದೆ ತಿದ್ದುಪಡಿ ಮಸೂದೆ ಮುಖ್ಯಾಂಶಗಳು
ಪರೀಕ್ಷಾ ಅಕ್ರಮ ನಡೆಸುವ ಉಪನ್ಯಾಸಕರು/ ಶಿಕ್ಷಕರು, ಉದ್ಯೋಗಿ, ಸಿಬಂದಿ ವಿರುದ್ಧ ಕ್ರಮ- ಮೊದಲ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ; ಎರಡನೇ ಅಪರಾಧ/ ಮುಂದುವರಿಕೆಗೆ ಕನಿಷ್ಠ ಐದು ವರ್ಷ ಜೈಲು ವಾಸ, 5 ಲಕ್ಷ ರೂ. ದಂಡ.

ಸ್ಕೀಮ್‌ ಆಫ್ ಇವ್ಯಾಲ್ಯುಯೇಷನ್‌ ಉಲ್ಲಂಘನೆ- ಆರು ತಿಂಗಳು ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ದಂಡ

ಪರೀಕ್ಷಾ ಅಕ್ರಮದಲ್ಲಿ ತೊಡಗುವ ವಿದ್ಯಾರ್ಥಿ- ಅಹವಾಲು ಹೇಳಿಕೊಳ್ಳಲು ಅವಕಾಶ ಕಲ್ಪಿಸಿದ ಬಳಿಕ ಫ‌ಲಿತಾಂಶ ತಡೆಹಿಡಿಯುವುದು, ಅಮಾನತ್ತಿನಲ್ಲಿಡುವುದು ಅಥವಾ ರದ್ದುಗೊಳಿಸುವುದು ಅಥವಾ ಮೂರು ವರ್ಷಗಳವರೆಗೆ ಪರೀಕ್ಷೆ ತೆಗೆದುಕೊಳ್ಳದಂತೆ ಡಿಬಾರ್‌.

ಪರೀಕ್ಷಾ ಅಕ್ರಮಕ್ಕೆ ನೆರವಾಗುವ ಶಿಕ್ಷಣ ಸಂಸ್ಥೆ, ಪರೀಕ್ಷಾ ಕೇಂದ್ರ- ಶಿಕ್ಷಣ ಸಂಸ್ಥೆ ಅಥವಾ ಪರೀಕ್ಷಾ ಕೇಂದ್ರಕ್ಕೆ ತನ್ನ ಅಹವಾಲು ಸಲ್ಲಿಸಲು ಅವಕಾಶ ನೀಡಿ ಬಳಿಕ ಶೈಕ್ಷಣಿಕ ಸಂಸ್ಥೆ ಅಥವಾ ಪರೀಕ್ಷಾ ಕೇಂದ್ರದ ಮಾನ್ಯತೆಯನ್ನು ಮೂರು ವರ್ಷಗಳವರೆಗೆ ಅಮಾನತಿನಲ್ಲಿಡಲು ಅಥವಾ ಹಿಂಪಡೆಯಲು ಶಿಫಾರಸು.

Advertisement

Udayavani is now on Telegram. Click here to join our channel and stay updated with the latest news.

Next